
Kohinoor | ಕೋಹಿನೂರ್ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಿ: ಬ್ರಿಟನ್ ರಾಜ ಚಾರ್ಲ್ಸ್‌ಗೆ ನ್ಯೂಯಾರ್ಕ್ ಮೇಯರ್ ಮಮ್ದಾನಿ ಸಲಹೆ
ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್ III ಅವರಿಗೆ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಮಹತ್ವದ ಸಲಹೆ ನೀಡಿದ್ದಾರೆ. ಭಾರತದ ಹೆಮ್ಮೆಯ ಕೋಹಿನೂರ್ ವಜ್ರವನ್ನು ಹಿಂತಿರುಗಿಸುವಂತೆ ಅವರು ಮನವಿ ಮಾಡಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್ III ಅವರಿಗೆ ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಅವರು ಐತಿಹಾಸಿಕ 'ಕೋಹಿನೂರ್' ವಜ್ರವನ್ನು ಭಾರತಕ್ಕೆ ಹಿಂತಿರುಗಿಸುವಂತೆ ಪ್ರೋತ್ಸಾಹಿಸುವುದಾಗಿ ತಿಳಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮ್ದಾನಿ, "ನಾನು ರಾಜ ಚಾರ್ಲ್ಸ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ಅವಕಾಶ ಸಿಕ್ಕರೆ, ಕೋಹಿನೂರ್ ವಜ್ರವನ್ನು ಅದರ ಮೂಲ ಸ್ಥಾನಕ್ಕೆ (ಭಾರತಕ್ಕೆ) ಮರಳಿಸುವಂತೆ ಅವರಿಗೆ ಖಂಡಿತವಾಗಿಯೂ ಪ್ರೋತ್ಸಾಹ ನೀಡುತ್ತೇನೆ" ಎಂದು ಹೇಳಿದರು.
ಅಮೆರಿಕ ಪ್ರವಾಸದಲ್ಲಿ ರಾಜ ಚಾರ್ಲ್ಸ್
ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರು ಪ್ರಸ್ತುತ ಅಮೆರಿಕದ ಅಧಿಕೃತ ಪ್ರವಾಸದಲ್ಲಿದ್ದಾರೆ. ಮಂಗಳವಾರ ವಾಷಿಂಗ್ಟನ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದ ಅವರು, ನಂತರ ನ್ಯೂಯಾರ್ಕ್‌ಗೆ ಭೇಟಿ ನೀಡಿದರು. ಈ ವೇಳೆ ನ್ಯೂಯಾರ್ಕ್‌ನ 9/11 ಸ್ಮಾರಕಕ್ಕೆ ಭೇಟಿ ನೀಡಿ ಭಯೋತ್ಪಾದಕ ದಾಳಿಗೆ ಬಲಿಯಾದವರಿಗೆ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮೇಯರ್ ಮಮ್ದಾನಿ ಅವರು ರಾಜ ಚಾರ್ಲ್ಸ್ ಅವರನ್ನು ಭೇಟಿಯಾದರು.
ಕೋಹಿನೂರ್ ವಜ್ರದ ಇತಿಹಾಸ
105.6 ಕ್ಯಾರೆಟ್ ತೂಕದ ಈ ಅಮೂಲ್ಯ ವಜ್ರವನ್ನು 1849ರಲ್ಲಿ ಮಹಾರಾಜ ದುಲೀಪ್ ಸಿಂಗ್ ಅವರು ಬ್ರಿಟನ್‌ನ ರಾಣಿ ವಿಕ್ಟೋರಿಯಾ ಅವರಿಗೆ ನೀಡಿದ್ದರು. 1937ರಲ್ಲಿ ಬ್ರಿಟನ್ ರಾಜಮಾತೆ ಇದನ್ನು ತಮ್ಮ ಕಿರೀಟದಲ್ಲಿ ಧರಿಸಿದ್ದರು. ಸದ್ಯ ಈ ವಜ್ರವು ಲಂಡನ್‌ನ 'ಟವರ್ ಆಫ್ ಲಂಡನ್'ನಲ್ಲಿ ಪ್ರದರ್ಶನಕ್ಕಿದೆ. ಇತಿಹಾಸದ ಪ್ರಕಾರ, ಈ ವಜ್ರವು ಮೊಘಲ್ ಚಕ್ರವರ್ತಿಗಳು, ಇರಾನ್‌ನ ಶಾಹಿಗಳು, ಅಫ್ಘಾನಿಸ್ತಾನದ ಅಮೀರ್‌ಗಳು ಮತ್ತು ಸಿಖ್ ಮಹಾರಾಜರ ಒಡೆತನದಲ್ಲಿತ್ತು.
ಭಾರತದ ನಿರಂತರ ಪ್ರಯತ್ನ
ಕೋಹಿನೂರ್ ವಜ್ರವನ್ನು ಮರಳಿ ಪಡೆಯಲು ಭಾರತ ಸರ್ಕಾರವು ಕಾಲಕಾಲಕ್ಕೆ ಬ್ರಿಟನ್ ಸರ್ಕಾರದ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸುತ್ತಲೇ ಬಂದಿದೆ. "ಈ ವಿಷಯದಲ್ಲಿ ತೃಪ್ತಿದಾಯಕ ಪರಿಹಾರವನ್ನು ಕಂಡುಕೊಳ್ಳಲು ನಾವು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತೇವೆ" ಎಂದು ಭಾರತ ಈ ಹಿಂದೆ ತಿಳಿಸಿತ್ತು. ಇದೀಗ ನ್ಯೂಯಾರ್ಕ್ ಮೇಯರ್ ಅವರ ಹೇಳಿಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

