
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪ್ರಧಾನಿ ಮೋದಿ ಹಾಗೂ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ನಮಗೆ ಭಾರತದಂತಹ ಶಕ್ತಿಶಾಲಿ ದೇಶಗಳ ಬೆಂಬಲವಿದೆ: ಜೆಡಿ ವ್ಯಾನ್ಸ್‌ಗೆ ನೆತನ್ಯಾಹು ಖಡಕ್ ತಿರುಗೇಟು
ಭಾರತದಿಂದ ಸಿಗುತ್ತಿರುವ ಅಗಾಧ ಬೆಂಬಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಇಸ್ರೇಲ್ ಪ್ರಧಾನಿ, "ಭಾರತವು 140 ಕೋಟಿ ಜನಸಂಖ್ಯೆ ಹೊಂದಿರುವ ಬೃಹತ್ ದೇಶ. ಅಲ್ಲಿಂದ ಇಸ್ರೇಲ್‌ಗೆ ಸಿಗುತ್ತಿರುವ ಬೆಂಬಲ ಅಪಾರವಾದದ್ದು ಎಂದು ತಿಳಿಸಿದ್ದಾರೆ.
ಇಡೀ ಜಗತ್ತಿನಲ್ಲಿ ಇಸ್ರೇಲ್‌ಗೆ ಇರುವುದು ಅಮೆರಿಕ ಎಂಬ ಏಕೈಕ ಮಿತ್ರ ಮಾತ್ರ ಎಂಬ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಡಕ್ ಆಗಿ ತಳ್ಳಿಹಾಕಿದ್ದಾರೆ. "ನಮಗೆ ಜಗತ್ತಿನಲ್ಲಿ ಭಾರತದಂತಹ ಇನ್ನೂ ಹಲವು ಆಪ್ತ ಮತ್ತು ಶಕ್ತಿಶಾಲಿ ದೇಶಗಳ ಬೆಂಬಲವಿದೆ" ಎಂದು ನೆತನ್ಯಾಹು ಹೆಮ್ಮೆಯಿಂದ ಘೋಷಿಸಿದ್ದಾರೆ.
ವ್ಯಾನ್ಸ್ ಹೇಳಿಕೆಗೆ ತಿರುಗೇಟು ನೀಡಿದ ನೆತನ್ಯಾಹು
ಇತ್ತೀಚೆಗೆ ಶ್ವೇತಭವನದ ಮಾಧ್ಯಮಗೋಷ್ಠಿ ಹಾಗೂ 'ದಿ ನ್ಯೂಯಾರ್ಕ್ ಟೈಮ್ಸ್' ಸಂದರ್ಶನದಲ್ಲಿ ಮಾತನಾಡಿದ್ದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, "ಇಸ್ರೇಲ್ ಪರ ನಿಂತಿರುವುದು ಡೊನಾಲ್ಡ್ ಟ್ರಂಪ್ ಮಾತ್ರ. ಕೇವಲ ಮಿಲಿಟರಿ ಶಕ್ತಿಯಿಂದಲೇ ಎಲ್ಲ ಭದ್ರತಾ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಇಸ್ರೇಲ್ ತನ್ನ ಏಕೈಕ ಮಿತ್ರನ ಮೇಲೆಯೇ ದಾಳಿ ಮಾಡಬಾರದು" ಎಂದು ಟೀಕಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ನೆತನ್ಯಾಹು, "ನಾನು ಜೆಡಿ ವ್ಯಾನ್ಸ್ ಅವರನ್ನು ಗೌರವಿಸುತ್ತೇನೆ. ಆದರೆ ಅವರ ಎಲ್ಲ ಮಾತುಗಳನ್ನೂ ಒಪ್ಪಲು ಸಾಧ್ಯವಿಲ್ಲ. ಡೊನಾಲ್ಡ್ ಟ್ರಂಪ್ ಇಸ್ರೇಲ್‌ನ ಅತ್ಯುತ್ತಮ ಸ್ನೇಹಿತ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇಸ್ರೇಲ್‌ಗೆ ಕೇವಲ ಅಮೆರಿಕ ಮಾತ್ರವಲ್ಲ, ಭಾರತದಂತಹ ಇತರ ಪ್ರಬಲ ರಾಷ್ಟ್ರಗಳ ಸ್ನೇಹವೂ ಇದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯರ ಬೆಂಬಲ ಅಪಾರ!
ಭಾರತದಿಂದ ಸಿಗುತ್ತಿರುವ ಅಗಾಧ ಬೆಂಬಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಇಸ್ರೇಲ್ ಪ್ರಧಾನಿ, "ಭಾರತವು 140 ಕೋಟಿ ಜನಸಂಖ್ಯೆ ಹೊಂದಿರುವ ಬೃಹತ್ ದೇಶ. ಅಲ್ಲಿಂದ ಇಸ್ರೇಲ್‌ಗೆ ಸಿಗುತ್ತಿರುವ ಬೆಂಬಲ ಅಪಾರವಾದದ್ದು. ನನ್ನ ಫೇಸ್‌ಬುಕ್ ಖಾತೆಯನ್ನು ನೋಡಿದರೆ ಸಾಕು, ಭಾರತದ ಜನರು ನಮ್ಮ ಮೇಲೆ ತೋರುತ್ತಿರುವ ಅಗಾಧವಾದ ಪ್ರೀತಿ ಮತ್ತು ಬೆಂಬಲದ ಪ್ರವಾಹ ಎಂತಹುದ್ದು ಎಂಬುದು ಇಡೀ ಜಗತ್ತಿಗೆ ಅರ್ಥವಾಗುತ್ತದೆ" ಎಂದಿದ್ದಾರೆ.
ಸೈಬರ್ ತಂತ್ರಜ್ಞಾನದಲ್ಲಿ 2ನೇ ಸ್ಥಾನ
"ರಾಜಕೀಯ ಕಾರಣಗಳಿಗಾಗಿ ಕೆಲವು ದೇಶಗಳು ಸಾರ್ವಜನಿಕವಾಗಿ ನಮ್ಮನ್ನು ಬೆಂಬಲಿಸದೇ ಇರಬಹುದು. ಆದರೆ ವಿಶ್ವದ ಹಲವು ನಾಯಕರು ನನಗೆ ವೈಯಕ್ತಿಕವಾಗಿ ಕರೆ ಮಾಡುತ್ತಾರೆ. ಇಸ್ರೇಲ್‌ನ ಮಿಲಿಟರಿ ತಂತ್ರಗಳು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಸೈಬರ್ ಭದ್ರತೆಯ ಪರಿಣತಿಯನ್ನು ತಮಗೂ ಹಂಚಿಕೊಳ್ಳುವಂತೆ ಒಪ್ಪಂದಗಳಿಗೆ ವಿನಂತಿಸುತ್ತಿದ್ದಾರೆ. ಸೈಬರ್ ತಂತ್ರಜ್ಞಾನದಲ್ಲಿ ಇಸ್ರೇಲ್ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ" ಎಂದು ನೆತನ್ಯಾಹು ಜಾಗತಿಕ ವೇದಿಕೆಯಲ್ಲಿ ಇಸ್ರೇಲ್‌ನ ಶಕ್ತಿಯನ್ನು ನೆನಪಿಸಿದ್ದಾರೆ.
ಶೀಘ್ರದಲ್ಲೇ ಟ್ರಂಪ್-ನೆತನ್ಯಾಹು ಭೇಟಿ
ಅಮೆರಿಕ-ಇರಾನ್ ಶಾಂತಿ ಮಾತುಕತೆ ಮತ್ತು ಲೆಬನಾನ್ ವಿಚಾರದಲ್ಲಿ ಟ್ರಂಪ್ ಹಾಗೂ ನೆತನ್ಯಾಹು ನಡುವೆ ಕೆಲವು ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ವರದಿಯಾಗಿದೆ. ಆದಾಗ್ಯೂ, ಪ್ರಾದೇಶಿಕ ಭದ್ರತೆಯ ದೃಷ್ಟಿಯಿಂದ ನ್ಯಾಟೋ (NATO) ಶೃಂಗಸಭೆಯ ನಂತರ ಶ್ವೇತಭವನದಲ್ಲಿ ಉಭಯ ನಾಯಕರು ಮುಖಾಮುಖಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

