ನೇಪಾಳ ಪ್ರವಾಹ: ಹೈಡ್ರೋಪವರ್‌ ಪ್ರಾಜೆಕ್ಟ್‌ ಸುರಂಗದಲ್ಲಿ 93 ಕಾರ್ಮಿಕರು ನಾಪತ್ತೆ
x

ನೇಪಾಳ ಪ್ರವಾಹ: ಹೈಡ್ರೋಪವರ್‌ ಪ್ರಾಜೆಕ್ಟ್‌ ಸುರಂಗದಲ್ಲಿ 93 ಕಾರ್ಮಿಕರು ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಹಲವು ಜಲವಿದ್ಯುತ್‌ ಯೋಜನೆಗಳ ಸುರಂಗಗಳೊಳಗೆ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಪ್ರವಾಹದ ನೀರು ಅಪ್ಪಳಿಸಿದ ಬಳಿಕ ಹಲವರು ನಾಪತ್ತೆಯಾಗಿದ್ದಾರೆ.


ಭೀಕರ ಪ್ರವಾಹದಿಂದ ಹಾನಿಗೊಳಗಾದ ನೇಪಾಳದ ರಸುಲಾಗಢಿ ಜಲವಿದ್ಯುತ್‌ ಯೋಜನೆಯ ಸುರಂಗದಲ್ಲಿ ಸಿಲುಕಿದ್ದಾರೆ ಎನ್ನಲಾದ ಕಾರ್ಮಿಕರಿಗಾಗಿ ನಡೆಸಿದ ಶೋಧ ಕಾರ್ಯಾಚರಣೆ ಅಂತ್ಯಗೊಂಡಿದೆ. ಥರ್ಮಲ್‌ ಡ್ರೋನ್‌ಗಳ ನೆರವಿನಿಂದ ಸುರಂಗದ ಕೊನೆಯ ಭಾಗದವರೆಗೂ ಶೋಧ ನಡೆಸಿದರೂ ಯಾವುದೇ ಕಾರ್ಮಿಕರು ಪತ್ತೆಯಾಗಿಲ್ಲ.

ರಸುಲಾ ಜಿಲ್ಲೆಯ 111 ಮೆಗಾವಾಟ್‌ ಸಾಮರ್ಥ್ಯದ ರಸುಲಾಗಢಿ ಜಲವಿದ್ಯುತ್‌ ಯೋಜನೆಯ ಸುರಂಗದಲ್ಲಿ ಕನಿಷ್ಠ 93 ಕಾರ್ಮಿಕರು ಸಿಲುಕಿರಬಹುದು ಎಂದು ಆತಂಕ ವ್ಯಕ್ತವಾಗಿತ್ತು. ಆದರೆ, ಇದೀಗ ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.

ನೇಪಾಳದ ಸೇನಾ ಸಿಬ್ಬಂದಿ, ಎಂಜಿನಿಯರ್‌ಗಳು ಹಾಗೂ ಡ್ರೋನ್‌ ತಂಡವನ್ನು ಒಳಗೊಂಡ ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿತು. ಭೋಟೆ ಕೋಶಿ ನದಿಯಲ್ಲಿ ಉಂಟಾದ ಪ್ರವಾಹದ ಬಳಿಕ, ಜಲವಿದ್ಯುತ್‌ ಯೋಜನೆಯ ಸುರಂಗದ ಕೊನೆಯ ಭಾಗದಲ್ಲಿ ಕಾರ್ಮಿಕರು ಸಿಲುಕಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.

ರಕ್ಷಣಾ ತಂಡ ಸುರಂಗದ ಅಂತ್ಯದವರೆಗೂ ತಲುಪಿ, ಥರ್ಮಲ್‌ ಡ್ರೋನ್‌ಗಳ ಮೂಲಕ ಸುರಂಗದ ಒಳಭಾಗವನ್ನು ಪರಿಶೀಲಿಸಿತು. ನೇರವಾಗಿ ತೆರಳಿ ಪರಿಶೀಲಿಸಲು ಕಷ್ಟಕರ ಅಥವಾ ಅಪಾಯಕಾರಿ ಎನಿಸುವ ಸ್ಥಳಗಳನ್ನೂ ಡ್ರೋನ್‌ಗಳ ಮೂಲಕ ಶೋಧಿಸಲಾಯಿತು. ಆದರೆ, ಸುರಂಗದೊಳಗೆ ಯಾರಾದರೂ ಇರುವ ಬಗ್ಗೆ ಯಾವುದೇ ಸುಳಿವು ದೊರೆಯಲಿಲ್ಲ.

ನೇಪಾಳ ಪ್ರಧಾನಮಂತ್ರಿಗಳ ಕಾರ್ಯಾಲಯ ಸೋಮವಾರ ಈ ಕುರಿತು ಮಾಹಿತಿ ನೀಡಿದ್ದು, ಸೇನೆಯ ನೇತೃತ್ವದ ತಂಡ ರಸುಲಾಗಢಿ ಯೋಜನೆಯ ಸುರಂಗದಲ್ಲಿ ಶೋಧ ನಡೆಸಿ ವಾಪಸ್‌ ಬಂದಿದೆ ಎಂದು ತಿಳಿಸಿದೆ. ಡ್ರೋನ್‌ ತಂಡದಿಂದ ಸುರಂಗದೊಳಗೆ ಯಾರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ರಕ್ಷಣಾ ತಂಡ ರಸುಲಾ ಜಿಲ್ಲೆಯ ಧುಂಚೆಗೆ ವಾಪಸ್‌ ತೆರಳಿದೆ.

ಹಲವು ಜಲವಿದ್ಯುತ್‌ ಯೋಜನೆಗಳಲ್ಲಿ ಕಾರ್ಮಿಕರು ನಾಪತ್ತೆ

ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಹಲವು ಜಲವಿದ್ಯುತ್‌ ಯೋಜನೆಗಳ ಸುರಂಗಗಳೊಳಗೆ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಪ್ರವಾಹದ ನೀರು ಅಪ್ಪಳಿಸಿದ ಬಳಿಕ ಹಲವರು ನಾಪತ್ತೆಯಾಗಿದ್ದಾರೆ.

ಕೆಲವು ಪ್ರದೇಶಗಳಲ್ಲಿ ನಾಪತ್ತೆಯಾದ ಕಾರ್ಮಿಕರು ಸುರಂಗಗಳೊಳಗೆ ಸಿಲುಕಿದ್ದಾರೆಯೇ, ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆಯೇ ಅಥವಾ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚುವುದೇ ರಕ್ಷಣಾ ತಂಡಗಳಿಗೆ ಸವಾಲಾಗಿ ಪರಿಣಮಿಸಿದೆ.

ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಸೋಮವಾರ ನೀಡಿದ ಮಾಹಿತಿ ಪ್ರಕಾರ, ದೇಶದ ವಿವಿಧ ಜಲವಿದ್ಯುತ್‌ ಯೋಜನೆಗಳಿಗೆ ಸಂಬಂಧಿಸಿದ 933 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದ ಭೀಕರತೆಯಿಂದ ನೂರಾರು ಮಂದಿ ಮೃತಪಟ್ಟಿರುವ ಬೆನ್ನಲ್ಲೇ, ನಾಪತ್ತೆಯಾಗಿರುವ ಕಾರ್ಮಿಕರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

Read More
Next Story