
ಒಮಾನ್ ಸಮುದ್ರದಲ್ಲಿ 'ಸೆಟ್ಟೆಬೆಲ್ಲೋ' ಹಡಗಿನ ಮೇಲೆ ಕ್ಷಿಪಣಿ ದಾಳಿ: 3 ಭಾರತೀಯರು ನಾಪತ್ತೆ, ಭಾರತದ ಖಂಡನೆ
ಹಡಗು ಅಮೆರಿಕ ನೌಕಾಪಡೆಯ ತಡೆ ಆದೇಶಗಳನ್ನು ಪಾಲಿಸದ ಕಾರಣ, ಅಮೆರಿಕದ ಯುದ್ಧವಿಮಾನವು ನಿಖರ ದಾಳಿಯ ಮೂಲಕ ಹಡಗಿನ ಎಂಜಿನ್ ಕೊಠಡಿಯನ್ನು ಗುರಿಯಾಗಿಸಿಕೊಂಡಿದೆ.
ಒಮಾನ್ ಕರಾವಳಿಯ ಸಮೀಪ ವಾಣಿಜ್ಯ ಹಡಗು "ಸೆಟ್ಟೆಬೆಲ್ಲೋ" (MT Settebello) ಮೇಲೆ ನಡೆದ ಕ್ಷಿಪಣಿ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ದಾಳಿಗೆ ಒಳಗಾದ ಹಡಗಿನಲ್ಲಿದ್ದ ಒಟ್ಟು 24 ಭಾರತೀಯ ಸಿಬ್ಬಂದಿಗಳ ಪೈಕಿ 21 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನು ಮೂವರು ಭಾರತೀಯರು ನಾಪತ್ತೆಯಾಗಿದ್ದಾರೆ.
ಪಲಾವ್ ಧ್ವಜವನ್ನು ಹೊಂದಿದ್ದ 'ಸೆಟ್ಟೆಬೆಲ್ಲೋ' ಎಂಬ ತೈಲ ಟ್ಯಾಂಕರ್ ಹಡಗು ಒಮಾನ್‌ನ ಸೋಹರ್ ಬಂದರಿನಿಂದ ಸುಮಾರು 20 ನಾಟಿಕಲ್ ಮೈಲುಗಳ ದೂರದಲ್ಲಿ ಸಂಚರಿಸುತ್ತಿತ್ತು. ಈ ವೇಳೆ ಹಡಗಿನ ಎಂಜಿನ್ ಕೊಠಡಿಗೆ ನೇರವಾಗಿ ಕ್ಷಿಪಣಿ ಬಡಿದ ಪರಿಣಾಮ ಭೀಕರ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಹಡಗಿನಿಂದ ತುರ್ತು ಸಹಾಯಕ್ಕಾಗಿ ಸಂದೇಶಗಳನ್ನು ರವಾನಿಸಲಾಯಿತು. ಹಡಗಿನಲ್ಲಿದ್ದ ಒಟ್ಟು 28 ಸಿಬ್ಬಂದಿ ಪೈಕಿ 24 ಮಂದಿ ಭಾರತೀಯರಾಗಿದ್ದರು. ಸದ್ಯ 21 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಮೂವರಿಗಾಗಿ ಒಮಾನ್ ಅಧಿಕಾರಿಗಳೊಂದಿಗೆ ಸೇರಿ ಭಾರತೀಯ ರಾಯಭಾರ ಕಚೇರಿ ತೀವ್ರ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ದಾಳಿಗೆ ಕಾರಣವೇನು? ಅಮೆರಿಕದ ವಿವರಣೆ
ಅಮೆರಿಕದ ಸೆಂಟ್ರಲ್ ಕಮಾಂಡ್ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಹಡಗು ಅಮೆರಿಕ ನೌಕಾಪಡೆಯ ತಡೆ ಆದೇಶಗಳನ್ನು ಪಾಲಿಸದ ಕಾರಣ, ಅಮೆರಿಕದ ಯುದ್ಧವಿಮಾನವು ನಿಖರ ದಾಳಿಯ ಮೂಲಕ ಹಡಗಿನ ಎಂಜಿನ್ ಕೊಠಡಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದೆ ಎಂದು ಸಮರ್ಥಿಸಿಕೊಂಡಿದೆ.
ಅಮೆರಿಕ ವಿರುದ್ಧ ಭಾರತದ ರಾಜತಾಂತ್ರಿಕ ಆಕ್ರೋಶ
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೆಹಲಿಯಲ್ಲಿರುವ ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿ ಜೇಸನ್ ಮೀಕ್ಸ್ ಅವರಿಗೆ ಸಮನ್ಸ್ ನೀಡಿ ಸಚಿವಾಲಯಕ್ಕೆ ಕರೆಸಿಕೊಂಡಿದೆ. ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನಾಗರಾಜ್ ನಾಯ್ಡು ಅವರು ಅಮೆರಿಕದ ಅಧಿಕಾರಿಗೆ ಭಾರತದ ತೀವ್ರ ಕಳವಳ ಮತ್ತು ಆಕ್ಷೇಪವನ್ನು ದಾಖಲಿಸಿದ್ದಾರೆ. ಜಾಗತಿಕ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳು ಹಾಗೂ ನಾಗರಿಕ ಸಿಬ್ಬಂದಿಗಳ ಮೇಲೆ ಇಂತಹ ದಾಳಿಗಳು ನಡೆಯುತ್ತಿರುವುದು ಒಪ್ಪಲು ಸಾಧ್ಯವಿಲ್ಲ, ಇದು ತಕ್ಷಣವೇ ನಿಲ್ಲಬೇಕು ಎಂದು ಭಾರತ ಕಡಾಖಂಡಿತವಾಗಿ ಒತ್ತಾಯಿಸಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ
ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳ ಹಿನ್ನೆಲೆಯಲ್ಲಿ, ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ 'ಹೋರ್ಮುಜ್ ಜಲಸಂಧಿ' ಪ್ರದೇಶದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಈ ವಲಯದಲ್ಲಿ ವಾಣಿಜ್ಯ ಹಡಗುಗಳ ಸುರಕ್ಷತೆಗೆ ಧಕ್ಕೆ ಬರುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಭಾರತ, ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆಗೊಳಿಸಿ ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದೆ.

