
"ಹಿಂದೂ ಧರ್ಮಕ್ಕೆ ಜಗತ್ತನ್ನು ಒಂದುಗೂಡಿಸುವ ಶಕ್ತಿ ಇದೆ": ಮೋಹನ್ ಭಾಗವತ್
ಪೂರ್ವಜರು ಮೆಕ್ಸಿಕೋದಿಂದ ಸೈಬೀರಿಯಾವರೆಗೆ, ಹಿಮಾಲಯದಿಂದ ಆಗ್ನೇಯ ಏಷ್ಯಾದವರೆಗೆ ಸಂಚರಿಸಿದರು. ಆದರೆ ಎಂದಿಗೂ ಯಾವುದೇ ಭೂಪ್ರದೇಶವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
"ಹಿಂದೂ ಧರ್ಮವು ಸಮಾಜವನ್ನು ವಿಭಜಿಸುವ ಶಕ್ತಿಯಲ್ಲ, ಬದಲಾಗಿ ಇಡೀ ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವ ಮತ್ತು ಒಂದುಗೂಡಿಸುವ ಶಕ್ತಿಯಾಗಿದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.
ಕೆನಡಾದ ಟೊರೊಂಟೊದಲ್ಲಿ ‘ಕೆನಡಿಯನ್ ಹಿಂದೂಸ್ ಫಾರ್ ಔಟ್ರೀಚ್, ರಿಲೇಶನ್ಸ್ ಅಂಡ್ ಡೈಲಾಗ್’ ಆಯೋಜಿಸಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ‘ಹಿಂದೂ’ ಎಂಬ ಪದವನ್ನು ಕೇವಲ ಒಂದು ನಿರ್ದಿಷ್ಟ ಭಾಷೆ, ಪೂಜಾ ಪದ್ಧತಿ ಅಥವಾ ಸಂಕುಚಿತ ಜೀವನಶೈಲಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಹಿಂದೂ ಧರ್ಮವು ವೈವಿಧ್ಯತೆಯನ್ನು ಕೇವಲ ಸಹಿಸುವುದಷ್ಟೇ ಅಲ್ಲ, ಅದನ್ನು ಗೌರವಿಸುತ್ತದೆ ಮತ್ತು ಅಪ್ಪಿಕೊಳ್ಳುತ್ತದೆ. ಸಮಾಜದಲ್ಲಿ ನೂರಾರು ಭಾಷೆಗಳು, ಜಾತಿಗಳು ಮತ್ತು ಧರ್ಮಗಳು ಇರುವುದು ಸಹಜ. ಆದರೆ, ಈ ಎಲ್ಲ ವೈವಿಧ್ಯತೆಯ ಆಧಾರದಲ್ಲಿರುವ ಆಂತರಿಕ ಏಕತೆಯೇ ಅಂತಿಮ ಸತ್ಯ. ನಮ್ಮ ಡಿಎನ್‌ಎಯಲ್ಲೇ ಇತರರಿಗೆ ಸಹಾಯ ಮಾಡುವ ಗುಣ ಮತ್ತು ಇಡೀ ಪ್ರಪಂಚವನ್ನು ಒಂದು ಕುಟುಂಬವೆಂದು (ವಸುಧೈವ ಕುಟುಂಬಕಂ) ಕಾಣುವ ಗುಣ ಬೇರೂರಿದೆ ಎಂದು ಹೇಳಿದರು.
ಭಾರತದ ಶಾಂತಿಯುತ ಪರಂಪರೆ
ಭಾರತೀಯ ನಾಗರಿಕತೆಯ ಇತಿಹಾಸವು ಆಕ್ರಮಣಶೀಲತೆಯದ್ದಲ್ಲ, ಬದಲಾಗಿ ಜ್ಞಾನಪ್ರಸಾರದ್ದಾಗಿದೆ ಎಂದು ಸ್ಮರಿಸಿದರು. "ನಮ್ಮ ಪೂರ್ವಜರು ಮೆಕ್ಸಿಕೋದಿಂದ ಸೈಬೀರಿಯಾವರೆಗೆ, ಹಿಮಾಲಯದಿಂದ ಆಗ್ನೇಯ ಏಷ್ಯಾದವರೆಗೆ ಸಂಚರಿಸಿದರು. ಆದರೆ ಅವರು ಎಂದಿಗೂ ಯಾವುದೇ ಭೂಪ್ರದೇಶವನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಬದಲಿಗೆ, ಅಲ್ಲಿನ ಜನರಿಗೆ ಆಯುರ್ವೇದ, ಖಗೋಳಶಾಸ್ತ್ರ ಮತ್ತು ನಮ್ಮ ನಾಗರಿಕತೆಯ ಜ್ಞಾನವನ್ನು ಧಾರೆ ಎರೆದರು. ಭಾರತವು ಎಂದಿಗೂ ತನ್ನ ಸಂಸ್ಕೃತಿಯನ್ನು ಹೇರಲಿಲ್ಲ, ಬದಲಿಗೆ ಜಗತ್ತಿಗೆ ಬೆಳಕನ್ನು ನೀಡಿತು" ಎಂದರು. ಭಾರತದ ಸಹಿಷ್ಣುತೆ ಮತ್ತು ಮಾನವೀಯತೆಗೆ ಉದಾಹರಣೆ ನೀಡಿದ ಅವರು, ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲಿಷ್ ನಿರಾಶ್ರಿತರಿಗೆ ಜಾಮ್‌ನಗರದ ಮಹಾರಾಜರು ಆಶ್ರಯ ನೀಡಿದ್ದನ್ನು ನೆನಪಿಸಿದರು. ಪಾರ್ಸಿಗಳು, ಯಹೂದಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹೀಗೆ ತೊಂದರೆಗೀಡಾದ ಎಲ್ಲ ಧರ್ಮೀಯರಿಗೆ ಭಾರತ ಸದಾ ಸುರಕ್ಷಿತ ನೆಲೆ ಒದಗಿಸಿದೆ. ಇದು ಭಾರತದ ರಕ್ತಗತ ಗುಣ ಎಂದು ತಿಳಿಸಿದರು.
ಕೇಳದಿದ್ದರೂ ಸಹಾಯಹಸ್ತ
ವಿಶ್ವದ ಯಾವುದೇ ಮೂಲೆಯಲ್ಲಿ ಬಿಕ್ಕಟ್ಟು ಎದುರಾದರೂ, ಭಾರತವು ಕರೆಯದೇ ಸಹಾಯಹಸ್ತ ಚಾಚುತ್ತದೆ. ಇತ್ತೀಚಿನ ಯುದ್ಧ ಪೀಡಿತ ಪ್ರದೇಶಗಳಿಂದ ಭಾರತೀಯರಲ್ಲದೆ, 7ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಭಾರತ ರಕ್ಷಿಸಿದೆ. ಇದು ನಮ್ಮ ದೇಶದ ನಿಷ್ಕಲ್ಮಶ ಮಾನವೀಯತೆಗೆ ಸಾಕ್ಷಿಯಾಗಿದೆ. ಮುಕ್ತ ಮನಸ್ಸಿನ ಸಮಾಜ ನಿರ್ಮಾಣಕ್ಕಾಗಿ ‘ವಸುಧೈವ ಕುಟುಂಬಕಂ’ ಪರಿಕಲ್ಪನೆ ಇಂದಿನ ಜಗತ್ತಿಗೆ ಅನಿವಾರ್ಯವಾಗಿದೆ. ಹಿಂದೂಗಳು ತಮ್ಮ ತತ್ವಗಳ ಕುರಿತು ಜಾಗೃತರಾದರೆ, ಇಡೀ ಜಗತ್ತೇ ಜಾಗೃತಗೊಳ್ಳಲಿದೆ. ಭಾರತೀಯ ತತ್ವಜ್ಞಾನವು ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ಸಾರುತ್ತದೆ. ಆದ್ದರಿಂದ, ಜಾಗತಿಕ ಶಾಂತಿಗಾಗಿ ಹಿಂದೂ ಚಿಂತನೆಯ ಅಗತ್ಯವಿದೆ ಎಂದು ಕರೆ ನೀಡಿದರು.
ಸಮಾರಂಭದ ವೈಭವ
ಈ ಬೃಹತ್ ಸಮಾವೇಶದಲ್ಲಿ ಕೆನಡಾದ 8 ಪ್ರಾಂತ್ಯಗಳಿಂದ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕೆನಡಾದ ಮಾಜಿ ರಕ್ಷಣಾ ಸಚಿವ ಹಾಗೂ ಆಲ್ಬರ್ಟಾದ ಮಾಜಿ ಪ್ರೀಮಿಯರ್ ಜೇಸನ್ ಕೆನ್ನಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಭಾಗವತ್ ಅವರ ವಿಚಾರಗಳಿಗೆ ಸಹಮತ ವ್ಯಕ್ತಪಡಿಸಿದರು. ಮೋಹನ್ ಭಾಗವತ್ ಅವರ ಈ ಭಾಷಣವು ಹಿಂದೂ ಧರ್ಮದ ವಿಶಾಲ ದೃಷ್ಟಿಕೋನವನ್ನು ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಪರಿಣಾಮಕಾರಿಯಾಗಿ ಪ್ರತಿಪಾದಿಸಿತು. ಭಾರತೀಯ ಸಂಸ್ಕೃತಿಯು ವಿಭಜನೆಯಲ್ಲ, ಒಗ್ಗಟ್ಟಿನ ಮಂತ್ರವನ್ನು ಹೊಂದಿದೆ ಎಂಬ ಸಂದೇಶವನ್ನು ಸಮಾವೇಶ ಸಾರಿತು.

