Boat Capsizes | ಅಂಡಮಾನ್ ಸಮುದ್ರದಲ್ಲಿ 250 ರೋಹಿಂಗ್ಯಾ, ಬಾಂಗ್ಲಾದೇಶಿ ವಲಸಿಗರಿದ್ದ ದೋಣಿ ಮುಳುಗಡೆ
x

ಮ್ಯಾನ್ಮಾರ್‌ನ ಅಲ್ಪಸಂಖ್ಯಾತ ಗುಂಪಾದ ಸಾವಿರಾರು ರೋಹಿಂಗ್ಯಾಗಳು ಆಗ್ನೇಯ ಏಷ್ಯಾದಲ್ಲಿ ಸುರಕ್ಷತೆಯನ್ನು ಹುಡುಕುತ್ತಾ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಿಂದ ಪಲಾಯನ ಮಾಡುತ್ತಿದ್ದಾರೆ.


Boat Capsizes | ಅಂಡಮಾನ್ ಸಮುದ್ರದಲ್ಲಿ 250 ರೋಹಿಂಗ್ಯಾ, ಬಾಂಗ್ಲಾದೇಶಿ ವಲಸಿಗರಿದ್ದ ದೋಣಿ ಮುಳುಗಡೆ

ಪ್ರಾಥಮಿಕ ವರದಿಗಳ ಪ್ರಕಾರ, ಮಲೇಷ್ಯಾಕ್ಕೆ ತೆರಳುತ್ತಿದ್ದ ಈ ದೋಣಿಯು ಬಲವಾದ ಗಾಳಿ, ಅಲೆಗಳ ಅಬ್ಬರ ಮತ್ತು ಅತಿಯಾದ ಜನದಟ್ಟಣೆಯಿಂದಾಗಿ ಮುಳುಗಿದೆ.


Click the Play button to hear this message in audio format

ಸುಮಾರು 250 ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬೃಹತ್ ದೋಣಿಯೊಂದು ಅಂಡಮಾನ್ ಸಮುದ್ರದಲ್ಲಿ ಮುಳುಗಡೆಯಾಗಿದ್ದು,ಅನೇಕರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಮತ್ತು ವಲಸೆ ಸಂಸ್ಥೆಗಳು ವರದಿ ಮಾಡಿವೆ.

ಈ ದುರಂತ ಘಟನೆಯು ಏಪ್ರಿಲ್ 9 ರಂದು ಅಂಡಮಾನ್ ದ್ವೀಪಗಳ ಸಮೀಪ ಸಂಭವಿಸಿದ್ದು, ಘಟನೆಯ ಬಳಿಕ ಬಾಂಗ್ಲಾದೇಶದ ಕೋಸ್ಟ್ ಗಾರ್ಡ್ ಒಂಬತ್ತು ಜನರನ್ನು ರಕ್ಷಿಸಿದ್ದಾರೆ. ಅಪಘಾತಕ್ಕೆ ದೋಣಿಯಲ್ಲಿದ್ದ ಅತಿಯಾದ ಜನದಟ್ಟಣೆ, ಸಮುದ್ರದಲ್ಲಿನ ಬಲವಾದ ಗಾಳಿ ಮತ್ತು ಅಲೆಗಳ ಅಬ್ಬರವೇ ಮುಖ್ಯ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಈ ದೋಣಿಯು ಕಳೆದ ವಾರ ಬಾಂಗ್ಲಾದೇಶದಿಂದ ಹೊರಟು ಮಲೇಷ್ಯಾಕ್ಕೆ ತೆರಳುತ್ತಿತ್ತು.

ಕಳೆದ ವಾರವಷ್ಟೇ ಬಾಂಗ್ಲಾದೇಶದಿಂದ ಹೊರಟಿದ್ದ ಈ ದೋಣಿಯು ಮಲೇಷ್ಯಾಕ್ಕೆ ತೆರಳುತ್ತಿತ್ತು. ಬದುಕುಳಿದವರಲ್ಲಿ ಒಬ್ಬರಾದ ರಫೀಕುಲ್ ಇಸ್ಲಾಂ ಎಂಬುವವರು ಘಟನೆಯ ಭೀಕರತೆಯನ್ನು ವಿವರಿಸುತ್ತಾ, ತಾವು ಸುಮಾರು 36 ಗಂಟೆಗಳ ಕಾಲ ಸಮುದ್ರದ ನೀರಿನಲ್ಲಿ ತೇಲುತ್ತಾ ಸಾವಿನೊಂದಿಗೆ ಹೋರಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ ಹಡಗಿನಿಂದ ಸೋರಿಕೆಯಾದ ತೈಲದಿಂದಾಗಿ ಅವರಿಗೆ ತೀವ್ರವಾದ ಸುಟ್ಟ ಗಾಯಗಳಾಗಿವೆ. ಮಲೇಷ್ಯಾದಲ್ಲಿ ಕೆಲಸ ಸಿಗಬಹುದು ಎಂಬ ಆಸೆಯಿಂದ ಈ ಅಪಾಯಕಾರಿ ಸಮುದ್ರಯಾನವನ್ನು ಕೈಗೊಂಡಿದ್ದಾಗಿ ಅವರು ನೋವಿನಿಂದ ಹೇಳಿಕೊಂಡಿದ್ದಾರೆ.

ಸ್ಥಳಾಂತರಗೊಂಡ ರೋಹಿಂಗ್ಯಾಗಳು

ಮ್ಯಾನ್ಮಾರ್‌ನಲ್ಲಿ 2017 ರಲ್ಲಿ ನಡೆದ ಸೇನಾ ದಮನದ ನಂತರ ಸುರಕ್ಷಿತ ಸ್ಥಳ ಅರಸಿ ಬಾಂಗ್ಲಾದೇಶದ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದ ಸಾವಿರಾರು ರೋಹಿಂಗ್ಯಾಗಳು ಇದೀಗ ಅಲ್ಲಿನ ಅಸುರಕ್ಷಿತ ವಾತಾವರಣ, ಉದ್ಯೋಗದ ಕೊರತೆ ಮತ್ತು ಹೆಚ್ಚುತ್ತಿರುವ ಗ್ಯಾಂಗ್ ಹಿಂಸಾಚಾರದಿಂದ ಬೇಸತ್ತು ದಕ್ಷಿಣ ಏಷ್ಯಾದ ಇತರ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ.ಆ ವರ್ಷದ ಆಗಸ್ಟ್‌ನಲ್ಲಿ ನಡೆದ ವ್ಯಾಪಕ ಹಿಂಸಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯು ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ಅನೇಕರು ತಪ್ಪಿಸಿಕೊಳ್ಳುವಂತೆ ಮಾಡಿತ್ತು.

ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿನ ಅತಿಯಾದ ಜನದಟ್ಟಣೆ, ಭದ್ರತಾ ಲೋಪ ಮತ್ತು ಜೀವನೋಪಾಯದ ಕೊರತೆಯಿಂದಾಗಿ ಸಾವಿರಾರು ರೋಹಿಂಗ್ಯಾಗಳು ಇತ್ತೀಚಿನ ದಿನಗಳಲ್ಲಿ ಇಂತಹ ಅಪಾಯಕಾರಿ ಸಮುದ್ರಯಾನವನ್ನು ಕೈಗೊಳ್ಳುತ್ತಿದ್ದಾರೆ. ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಜನರಿಗೆ ಸುರಕ್ಷಿತ ಮತ್ತು ಘನತೆಯಿಂದ ಬದುಕುವ ವಾತಾವರಣವನ್ನು ನಿರ್ಮಿಸುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಹೈಕಮಿಷನರ್ ಅಂತರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ.

Read More
Next Story