ಮೆಕ್ಕಾದಲ್ಲಿ ಏರ್‌ಸ್ಟ್ರೈಕ್‌ ಎಚ್ಚರಿಕೆ; ಹೌತಿ ಬಂಡುಕೋರರ ದಾಳಿ ಭೀತಿಯಿಂದ ಹೈಅಲರ್ಟ್
x

ಮೆಕ್ಕಾದಲ್ಲಿ ಏರ್‌ಸ್ಟ್ರೈಕ್‌ ಎಚ್ಚರಿಕೆ; ಹೌತಿ ಬಂಡುಕೋರರ ದಾಳಿ ಭೀತಿಯಿಂದ ಹೈಅಲರ್ಟ್

ಇರಾನ್ ಬೆಂಬಲಿತ ಹೌತಿಗಳ ದಾಳಿ ಭೀತಿ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಮೆಕ್ಕಾ, ಜೆದ್ದಾ ಮತ್ತು ತಾಯಿಫ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ. ಮೆಕ್ಕಾದಲ್ಲಿ ಇದೇ ಮೊದಲ ಬಾರಿಗೆ ಇಂತಹ ಎಚ್ಚರಿಕೆ ನೀಡಲಾಗಿದೆ.


Click the Play button to hear this message in audio format

ಇರಾನ್ ಬೆಂಬಲಿತ ಹೌತಿ ಬಂಡುಕೋರರ ದಾಳಿ ಭೀತಿ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಹಲವು ಪ್ರದೇಶಗಳಲ್ಲಿ ಮಂಗಳವಾರ ವೈಮಾನಿಕ ದಾಳಿ ಎಚ್ಚರಿಕೆ ನೀಡಲಾಗಿದೆ. ಪವಿತ್ರ ನಗರ ಮೆಕ್ಕಾ, ಜೆದ್ದಾ ಮತ್ತು ತಾಯಿಫ್ ಸೇರಿದಂತೆ ಪಶ್ಚಿಮ ಕರಾವಳಿಯ ಪ್ರದೇಶಗಳಲ್ಲಿ ಎಚ್ಚರಿಕೆ ಹೊರಡಿಸಲಾಗಿತ್ತು. ಕೆಲವೇ ಸಮಯದ ಬಳಿಕ ಎಚ್ಚರಿಕೆಯನ್ನು ಹಿಂಪಡೆಯಲಾಯಿತು.

ಮೆಕ್ಕಾದಲ್ಲಿ ಇದೇ ಮೊದಲ ಬಾರಿಗೆ ಇಂತಹ ವಾಯುದಾಳಿ ಎಚ್ಚರಿಕೆ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೌತಿಗಳು ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಸೌದಿ ನಾಗರಿಕ ರಕ್ಷಣಾ ಇಲಾಖೆ ಮೆಕ್ಕಾದಲ್ಲಿನ ಅಪಾಯದ ಪರಿಸ್ಥಿತಿ ಮುಗಿದಿದೆ ಎಂದು ತಿಳಿಸಿದೆ. ಜನರು ಸುರಕ್ಷತಾ ಸೂಚನೆಗಳನ್ನು ಪಾಲಿಸಬೇಕು, ಗುಂಪು ಸೇರುವುದನ್ನು ಮತ್ತು ವಿಡಿಯೊ ರೆಕಾರ್ಡ್‌ ಮಾಡುವುದನ್ನು ತಪ್ಪಿಸಬೇಕು ಎಂದು ಸೂಚಿಸಿದೆ. ಇದೇ ವೇಳೆ, ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿತ್ತು ಎಂದು ಇಸ್ರೇಲಿ ಪತ್ರಿಕೆ ಹಯೋಮ್ ವರದಿ ಮಾಡಿದೆ.

ಹೌತಿ ದಾಳಿಯಲ್ಲಿ 13 ಮಂದಿ ಗಾಯ

ಸೌದಿ ಅರೇಬಿಯಾದಲ್ಲಿ ಹೌತಿಗಳ ದಾಳಿಗೆ 13 ಮಂದಿ ಗಾಯಗೊಂಡ ಒಂದು ದಿನದ ಬಳಿಕ ಈ ವೈಮಾನಿಕ ದಾಳಿ ಎಚ್ಚರಿಕೆ ನೀಡಲಾಗಿದೆ. ಯೆಮೆನ್‌ನಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆದಿತ್ತು ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಸೌದಿ ಬೆಂಬಲಿತ ಯೆಮೆನ್ ಸರ್ಕಾರದ ಪಡೆಗಳು ಹಾಗೂ ಸೌದಿ ಸೇನೆಗಳು ಯೆಮೆನ್‌ನ ತಾಯಿಝ್ ನಗರದ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದವು ಎಂದು ವರದಿಯಾಗಿದೆ.

ಮೆಕ್ಕಾ ಗುರಿಯಾಗಿಸಿಕೊಂಡಿಲ್ಲ ಎಂದ ಹೌತಿಗಳು

ಸೌದಿ ನೇತೃತ್ವದ ಮೈತ್ರಿಕೂಟವು ಮೆಕ್ಕಾ ಕಡೆಗೆ ತೆರಳುತ್ತಿದ್ದ ಹೌತಿ ಡ್ರೋನ್‌ ಅನ್ನು ಹೊಡೆದುರುಳಿಸಿರುವುದಾಗಿ ಹೇಳಿರುವುದನ್ನು ಹೌತಿ ನಾಯಕರು ತಳ್ಳಿಹಾಕಿದ್ದಾರೆ. ಹೌತಿ ರಾಜಕೀಯ ವಿಭಾಗದ ಸದಸ್ಯ ಹಾಜೆಮ್ ಅಲ್-ಅಸಾದ್, ಮೆಕ್ಕಾವನ್ನು ಗುರಿಯಾಗಿಸಿಕೊಂಡಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಮೆಕ್ಕಾ ಮೇಲೆ ದಾಳಿ ನಡೆಸಲಾಗಿದೆ ಎಂಬ ಆರೋಪಗಳು ಹಿಂದೆ ಕೂಡ ಕೇಳಿಬಂದಿದ್ದು, ಇಂತಹ ಹೇಳಿಕೆಗಳು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸೌದಿ–ಹೌತಿ ಸಂಘರ್ಷ ಮತ್ತಷ್ಟು ತೀವ್ರ

ಸೌದಿ ಅರೇಬಿಯಾ ವಿರುದ್ಧ ಹೌತಿಗಳು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ದೊಡ್ಡ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ದಾಳಿಯಲ್ಲಿ ತೈಲ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, 73 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ಪಶ್ಚಿಮ ಯೆಮೆನ್‌ನಲ್ಲಿ ನಡೆದ ಹೌತಿ ದಾಳಿಯಲ್ಲಿ ಸೌದಿ ಬೆಂಬಲಿತ ಸರ್ಕಾರದ ಎಂಟು ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಇದೇ ವೇಳೆ, ದಕ್ಷಿಣ ಸೌದಿ ಅರೇಬಿಯಾದ ಖಮೀಸ್ ಮುಶೈತ್‌ನಲ್ಲಿರುವ ಕಿಂಗ್ ಖಾಲಿದ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿದ್ದಾರೆ.

ಬಾಬ್ ಅಲ್-ಮಂದಬ್ ಬಗ್ಗೆ ಕತಾರ್ ಎಚ್ಚರಿಕೆ

ಕೆಂಪು ಸಮುದ್ರದ ಪ್ರಮುಖ ಸಾಗರ ಮಾರ್ಗವಾಗಿರುವ ಬಾಬ್ ಅಲ್-ಮಂದಬ್ ಜಲಸಂಧಿ ಮುಚ್ಚಿದರೆ ಜಾಗತಿಕ ಮಟ್ಟದಲ್ಲಿ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಕತಾರ್ ಎಚ್ಚರಿಸಿದೆ. ಜಲಸಂಧಿ ಬಂದ್ ಮಾಡುವುದು ಇಡೀ ಜಗತ್ತಿಗೆ ದುರಂತಕಾರಿ ಪರಿಣಾಮ ಉಂಟುಮಾಡಬಹುದು ಎಂದು ಕತಾರ್ ವಿದೇಶಾಂಗ ಸಚಿವಾಲಯದ ಅಧಿಕಾರಿ ಇಬ್ರಾಹಿಂ ಅಲ್-ಹಶ್ಮಿ ಹೇಳಿದ್ದಾರೆ.

ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೌದಿ ಯುವರಾಜರ ಮನವಿಯ ಹೊರತಾಗಿಯೂ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಹೌತಿ ದಾಳಿಗಳಿಂದ ಕೆಂಪು ಸಮುದ್ರದ ಪ್ರಮುಖ ಸಾಗರ ಮಾರ್ಗದ ಭದ್ರತೆ ಮತ್ತಷ್ಟು ಆತಂಕಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮುಂದಿನ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

Read More
Next Story