ಮಾಲಿಯಲ್ಲಿ ಇಸ್ಲಾಮಿಕ್ ಉಗ್ರರ ಭಾರಿ ದಾಳಿ: ಭಾರತೀಯರಿಗೆ ಹೈ ಅಲರ್ಟ್ ಘೋಷಣೆ
x
ಸಾಂದರ್ಭಿಕ ಚಿತ್ರ.

ಮಾಲಿಯಲ್ಲಿ ಇಸ್ಲಾಮಿಕ್ ಉಗ್ರರ ಭಾರಿ ದಾಳಿ: ಭಾರತೀಯರಿಗೆ ಹೈ ಅಲರ್ಟ್ ಘೋಷಣೆ

ಉಗ್ರರ ಸರಣಿ ದಾಳಿಯ ಬೆನ್ನಲ್ಲೇ ಮಾಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ತುರ್ತು ಎಚ್ಚರಿಕೆ ಸಂದೇಶ ರವಾನಿಸಿದೆ.


Click the Play button to hear this message in audio format

ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ 'ಮಾಲಿ'ಯ ರಾಜಧಾನಿ ಬಮಾಕೊ ಸೇರಿದಂತೆ ದೇಶದ ಹಲವೆಡೆ ಶನಿವಾರ (ಏಪ್ರಿಲ್ 25) ಇಸ್ಲಾಮಿಕ್ ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ಸರಣಿ ಹಾಗೂ ಸಂಘಟಿತ ದಾಳಿ ನಡೆಸಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿಯೇ ದೇಶದಲ್ಲಿ ನಡೆದ ಅತಿದೊಡ್ಡ ದಾಳಿಗಳಲ್ಲಿ ಒಂದಾಗಿದೆ.

ಅಲ್-ಖೈದಾ ಜೊತೆ ನಂಟು ಹೊಂದಿರುವ ಇಸ್ಲಾಮಿಕ್ ಉಗ್ರ ಸಂಘಟನೆ 'JNIM' ಮತ್ತು ತುವಾರೆಗ್ ನೇತೃತ್ವದ ಪ್ರತ್ಯೇಕತಾವಾದಿ ಬಂಡುಕೋರ ಗುಂಪಾದ 'ಅಜವಾಡ್ ಲಿಬರೇಶನ್ ಫ್ರಂಟ್' ಈ ಜಂಟಿ ದಾಳಿಯ ಹೊಣೆ ಹೊತ್ತುಕೊಂಡಿವೆ. ಬಮಾಕೊದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಕಾಟಿ ನಗರ ಮತ್ತು ಉತ್ತರ ಹಾಗೂ ಮಧ್ಯ ಮಾಲಿಯ ಇತರೆ ನಾಲ್ಕು ಪ್ರಮುಖ ನಗರಗಳ ಮೇಲೆ ಈ ಉಗ್ರರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಭಾರತೀಯ ರಾಯಭಾರ ಕಚೇರಿಯಿಂದ ಕಟ್ಟೆಚ್ಚರ

ಉಗ್ರರ ಸರಣಿ ದಾಳಿಯ ಬೆನ್ನಲ್ಲೇ ಮಾಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ತುರ್ತು ಎಚ್ಚರಿಕೆ ಸಂದೇಶ ರವಾನಿಸಿದೆ.

"ಮಾಲಿಯ ಕಾಟಿ ಮತ್ತು ಇತರ ಭಾಗಗಳಲ್ಲಿ ಭದ್ರತಾ ಬಿಕ್ಕಟ್ಟು ಮತ್ತು ದಾಳಿಗಳು ವರದಿಯಾಗುತ್ತಿವೆ. ಹೀಗಾಗಿ ಮಾಲಿಯಲ್ಲಿ ನೆಲೆಸಿರುವ ಎಲ್ಲ ಭಾರತೀಯರು ಅತ್ಯಂತ ಜಾಗರೂಕರಾಗಿರಬೇಕು. ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದೆ, ಮಾಲಿ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ರಾಯಭಾರ ಕಚೇರಿ ಮನವಿ ಮಾಡಿದೆ. ತುರ್ತು ನೆರವಿಗಾಗಿ +223 78486019 / 94793705 ಸಂಖ್ಯೆಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ದಾಳಿಯ ತೀವ್ರತೆ ಅಪಾರ

ಬಮಾಕೊ ನಗರದ ಮಧ್ಯಭಾಗದಿಂದ ಕೇವಲ 15 ಕಿ.ಮೀ ದೂರದಲ್ಲಿರುವ ವಿಮಾನ ನಿಲ್ದಾಣ ಮತ್ತು ವಾಯುನೆಲೆ ಪ್ರದೇಶದಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಮಾಲಿ ಸೇನೆಯ ಪ್ರಮುಖ ನೆಲೆ ಇರುವ 'ಕಾಟಿ' ಪಟ್ಟಣದಲ್ಲಿ ಉಗ್ರರು ವಾಹನಗಳಲ್ಲಿ ಮುಕ್ತವಾಗಿ ಓಡಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಪಟ್ಟಣದಲ್ಲಿಯೇ ಮಾಲಿ ಮಿಲಿಟರಿ ಸರ್ಕಾರದ ನಾಯಕ ಜ. ಅಸ್ಸಿಮಿ ಗೊಯಿಟಾ ಅವರ ನಿವಾಸವೂ ಇದೆ. ದಾಳಿಯ ವೇಳೆ ರಕ್ಷಣಾ ಸಚಿವರ ನಿವಾಸಕ್ಕೂ ಭಾರೀ ಹಾನಿಯಾಗಿದೆ ಎಂದು ವರದಿಯಾಗಿದೆ.

ಉತ್ತರ ಮಾಲಿಯ ಕಿದಾಲ್ ಮತ್ತು ಗಾವೊ ನಗರಗಳ ಕೆಲವು ಭಾಗಗಳನ್ನು ಉಗ್ರರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇದುವರೆಗೆ ಸೇನೆ ಮತ್ತು ಉಗ್ರರ ನಡುವೆ ಭಾರೀ ಕಾದಾಟ ನಡೆಯುತ್ತಿದ್ದು, ಸೇನಾಪಡೆಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೋರಾಡುತ್ತಿವೆ. ಅಮೆರಿಕ ಕೂಡ ತನ್ನ ನಾಗರಿಕರಿಗೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚನೆ ನೀಡಿದೆ.

Read More
Next Story