
ಕೇರಳ ಮೂಲದ ಡೇವ್ ಫಿಜಿ
ಜಾರ್ಜಿಯಾದಲ್ಲಿ ಹೆಲಿಕಾಪ್ಟರ್ ಕ್ರ್ಯಾಶ್: ಕೇರಳ ಮೂಲದ ನವವರ ಸಾವು, ವಧು ಪಾರು!
ಡೆಲ್ಟಾ ಏರ್ಲೈನ್ಸ್ನಲ್ಲಿ ಸಹ-ಪೈಲಟ್ (ಫಸ್ಟ್ ಆಫೀಸರ್) ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಡೇವ್ ಫಿಜಿ (26) ಮೃತಪಟ್ಟ ದುರ್ದೈವಿ. ವೃತ್ತಿಯಲ್ಲಿ ನರ್ಸ್ ಆಗಿರುವ ಅವರ ಪತ್ನಿ ಜೆಸ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಾಗಿದ್ದ ನವವಿವಾಹಿತ ದಂಪತಿಯ ಹನಿಮೂನ್ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿರುವ ಅತ್ಯಂತ ಆಘಾತಕಾರಿ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ. ವಿವಾಹ ಮಹೋತ್ಸವ ಮುಗಿದ ಕೆಲವೇ ಗಂಟೆಗಳಲ್ಲಿ ದಂಪತಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ವರ ಹಾಗೂ ಹೆಲಿಕಾಪ್ಟರ್ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ನವವಧು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡೆಲ್ಟಾ ಏರ್ಲೈನ್ಸ್ನಲ್ಲಿ ಸಹ-ಪೈಲಟ್ (ಫಸ್ಟ್ ಆಫೀಸರ್) ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಡೇವ್ ಫಿಜಿ (26) ಮೃತಪಟ್ಟ ದುರ್ದೈವಿ. ವೃತ್ತಿಯಲ್ಲಿ ನರ್ಸ್ ಆಗಿರುವ ಅವರ ಪತ್ನಿ ಜೆಸ್ನಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಮೆಟ್ರೋ ಅಟ್ಲಾಂಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಟ್ಲಾಂಟಾ ನ್ಯೂಸ್ ಫಸ್ಟ್ ವರದಿ ಮಾಡಿದೆ.
10 ವರ್ಷಗಳ ಪ್ರೀತಿ
ಮೃತ ಡೇವ್ ಫಿಜಿ ಅವರ ತಂದೆ ಜಾರ್ಜ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಕಣ್ಣೀರು ಹಾಕಿದ್ದಾರೆ. "ನನ್ನ ಮಗ ತುಂಬಾ ಸಂತೋಷವಾಗಿದ್ದ. ಹತ್ತು ವರ್ಷಗಳ ಹಿಂದೆ ಚರ್ಚ್ನಲ್ಲಿ ಜೆಸ್ನಿಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದ ಡೇವ್, ಶುಕ್ರವಾರವಷ್ಟೇ ಆಕೆಯನ್ನು ವರಿಸಿದ್ದ. ಡಾಸನ್ವಿಲ್ಲೆಯ 'ದಿ ರೆವೆರೆ'ಯಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಸುಮಾರು 400 ಅತಿಥಿಗಳು ಭಾಗವಹಿಸಿ ದೇವ ಹರಸಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು" ಎಂದು ದುಃಖ ತೋಡಿಕೊಂಡಿದ್ದಾರೆ.
ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತ
ಮದುವೆ ಮುಗಿದ ನಂತರ ದಂಪತಿಗಳು ಹನಿಮೂನ್ ನಿಮಿತ್ತ ಜಾರ್ಜಿಯಾದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾದ 'ಡೆಕಾಲ್ಬ್-ಪೀಚ್ಟ್ರೀ'ಗೆ ತೆರಳಲು 'ರಾಬಿನ್ಸನ್ ಆರ್ 66' ಚಾಪರ್ ಹತ್ತಿದ್ದರು. ಆದರೆ, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ, ಡಾಸನ್ವಿಲ್ಲೆಯ ಮೌಂಟ್ ವೆರ್ನಾನ್ ಡ್ರೈವ್ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.
ಶೂನ್ಯ ಗೋಚರತೆ ಬಗ್ಗೆ ಎಚ್ಚರಿಸಿದ್ದ ಡೇವ್
ಮೃತ ಡೇವ್ ಸ್ವತಃ ಕಮರ್ಷಿಯಲ್ ಪೈಲಟ್ ಆಗಿದ್ದರಿಂದ, ಹಾರಾಟಕ್ಕೂ ಮುನ್ನ ಹವಾಮಾನ ಸರಿ ಇಲ್ಲದಿರುವುದನ್ನು ಗಮನಿಸಿದ್ದರು. "ವಾತಾವರಣದಲ್ಲಿ ಗೋಚರತೆ ಶೂನ್ಯವಾಗಿದೆ , ಇಂತಹ ಪರಿಸ್ಥಿತಿಯಲ್ಲಿ ನಾವು ಎಂದಿಗೂ ವಿಮಾನ ಹಾರಿಸುವುದಿಲ್ಲ" ಎಂದು ಹೆಲಿಕಾಪ್ಟರ್ ಪೈಲಟ್ಗೆ ಡೇವ್ ಎಚ್ಚರಿಕೆ ನೀಡಿದ್ದರು. ಆದರೆ, "ನಾನು ಹೆಚ್ಚಿನ ಎತ್ತರದಲ್ಲಿ ಹಾರಾಟ ನಡೆಸುತ್ತೇನೆ, ತೊಂದರೆಯಾಗಲ್ಲ" ಎಂದು ಹೆಲಿಕಾಪ್ಟರ್ ಪೈಲಟ್ ಭರವಸೆ ನೀಡಿದ್ದಾಗಿ ಡೇವ್ ತಂದೆ ತಿಳಿಸಿದ್ದಾರೆ.
ಹೆಣದ ರಾಶಿಯ ಮಧ್ಯೆ ಸಿಲುಕಿದ್ದ ನವವಧು!
ದಟ್ಟ ಕಾಡಿನಲ್ಲಿ ಹೆಲಿಕಾಪ್ಟರ್ ಬಿದ್ದಿದ್ದರಿಂದ ರಕ್ಷಣಾ ಸಿಬ್ಬಂದಿಗೆ ಘಟನಾ ಸ್ಥಳವನ್ನು ಪತ್ತೆಹಚ್ಚಲು ಸುಮಾರು 6 ಗಂಟೆಗಳು ಬೇಕಾಯಿತು. ಅಲ್ಲಿಯವರೆಗೆ ಗಾಯಾಳು ಜೆಸ್ನಿ ಹೆಲಿಕಾಪ್ಟರ್ನ ಅವಶೇಷಗಳ ನಡುವೆಯೇ ಸಿಲುಕಿಕೊಂಡಿದ್ದರು."ಜೆಸ್ನಿಗೆ ಪ್ರಜ್ಞೆ ಬಂದಾಗ ಆಕೆಯ ಎದೆಯ ಮೇಲೆ ಡೇವ್ ಬಿದ್ದಿದ್ದ. ಮೈತುಂಬಾ ರಕ್ತವಾಗಿತ್ತು, ದೇಹ ಸಂಪೂರ್ಣ ತಣ್ಣಗಾಗಿತ್ತು. ತಾನು ನರ್ಸ್ ಆಗಿದ್ದರಿಂದ ಪತಿ ಆಗಲೇ ಮೃತಪಟ್ಟಿರುವುದನ್ನು ಜೆಸ್ನಿ ಗುರುತಿಸಿದ್ದಾಳೆ. ಆಕೆ ತೀವ್ರ ಆಘಾತದಲ್ಲಿದ್ದಾಳೆ, ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ" ಎಂದು ಜಾರ್ಜ್ ಫಿಜಿ ಹೇಳಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಹೆಲಿಕಾಪ್ಟರ್ ಪೈಲಟ್ ಗುರುತನ್ನು ಅಧಿಕಾರಿಗಳು ಇನ್ನು ಬಹಿರಂಗಪಡಿಸಿಲ್ಲ. ಘಟನೆಗೆ ಸಂಬಂಧಿಸಿದಂತೆ ಅಮೆರಿಕದ 'ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ' (NTSB) ತನಿಖೆಯನ್ನು ಆರಂಭಿಸಿದ್ದು, ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯವೇ ಅಪಘಾತಕ್ಕೆ ಕಾರಣವೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

