
JPMorgan | ಜೆಪಿ ಮೋರ್ಗಾನ್ ಮಹಿಳಾ ಅಧಿಕಾರಿಯಿಂದ ಭಾರತೀಯ ಉದ್ಯೋಗಿಗೆ ಲೈಂಗಿಕ ಕಿರುಕುಳ
ಜೆಪಿ ಮೋರ್ಗಾನ್ ಚೇಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಲೋರ್ನಾ ಹಜ್ದಿನಿ ವಿರುದ್ಧ ಭಾರತೀಯ ಮೂಲದ ಜೂನಿಯರ್ ಉದ್ಯೋಗಿ ಲೈಂಗಿಕ ದೌರ್ಜನ್ಯ ಮತ್ತು ಜನಾಂಗೀಯ ನಿಂದನೆಯ ಗಂಭೀರ ಆರೋಪ ಹೊರಿಸಿದ್ದಾರೆ.
ಅಮೆರಿಕದ ಪ್ರಖ್ಯಾತ ಹೂಡಿಕೆ ಬ್ಯಾಂಕ್ 'ಜೆಪಿ ಮೋರ್ಗಾನ್ ಚೇಸ್' (JPMC) ನ ಕಾರ್ಯನಿರ್ವಾಹಕ ನಿರ್ದೇಶಕಿ ಲೋರ್ನಾ ಹಜ್ದಿನಿ ವಿರುದ್ಧ ಅವರ ಸಹೋದ್ಯೋಗಿಯೊಬ್ಬರು ಗಂಭೀರ ಲೈಂಗಿಕ ಕಿರುಕುಳ, ಜನಾಂಗೀಯ ನಿಂದನೆ ಮತ್ತು ವೃತ್ತಿಪರ ಬೆದರಿಕೆಯ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಘಟನೆಯ ಹಿನ್ನೆಲೆ
ನ್ಯೂಯಾರ್ಕ್ ಕೌಂಟಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ಈ ಮೊಕದ್ದಮೆಯಲ್ಲಿ, ಸಂತ್ರಸ್ತ ಉದ್ಯೋಗಿಯನ್ನು "ಜಾನ್ ಡೋ" ಎಂದು ಗುರುತಿಸಲಾಗಿದೆ. ಈತ ಭಾರತೀಯ ಮೂಲದವನಾಗಿದ್ದು, ವಿವಾಹಿತನಾಗಿದ್ದಾನೆ. ಲೋರ್ನಾ ಹಜ್ದಿನಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಆತನಿಗೆ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ವೃತ್ತಿಜೀವನವನ್ನು ಹಾಳುಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಗಂಭೀರ ಆರೋಪಗಳು:
ಹಜ್ದಿನಿ ಸಂತ್ರಸ್ತನನ್ನು "ಬ್ರೌನ್ ಬಾಯ್ ಇಂಡಿಯನ್" ಎಂದು ಹೀಯಾಳಿಸುತ್ತಿದ್ದರು. ಅಲ್ಲದೆ ಸಂತ್ರಸ್ತನ ಪತ್ನಿಯ ಬಗ್ಗೆಯೂ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೆಲಸದ ಸ್ಥಳದಲ್ಲಿ ಮತ್ತು ಪಾನೀಯಕೂಟಗಳಿಗೆ ಆಹ್ವಾನಿಸಿ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದರು. ಸಂತ್ರಸ್ತ ನಿರಾಕರಿಸಿದಾಗ, "ನಾನು ನಿನ್ನ ವೃತ್ತಿಜೀವನವನ್ನು ನಾಶ ಮಾಡುತ್ತೇನೆ, ನೆನಪಿರಲಿ ನೀನು ನನ್ನ ಆಸ್ತಿ" ಎಂದು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಸಂತ್ರಸ್ತನಿಗೆ ಅರಿವಿಲ್ಲದಂತೆ ಆತನಿಗೆ ಲೈಂಗಿಕ ಪ್ರಚೋದಕ ಔಷಧಿಗಳನ್ನು ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. "ಇಂಡಿಯನ್ ಹುಡುಗನಿಗೆ ಪ್ರಮೋಷನ್ ಬೇಕಾ? ನಾನು ಹೇಳಿದಂತೆ ಕೇಳದಿದ್ದರೆ ನಿನ್ನ ಹೆಸರನ್ನು ಕೆಡಿಸುತ್ತೇನೆ" ಎಂದು ಹಜ್ದಿನಿ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತ ಆರೋಪಿಸಿದ್ದಾರೆ.
ಕಂಪನಿಯ ಪ್ರತಿಕ್ರಿಯೆ
ಸಂತ್ರಸ್ತ ಉದ್ಯೋಗಿ 2025ರ ಮೇ ತಿಂಗಳಲ್ಲಿ ಕಂಪನಿಗೆ ಈ ಕುರಿತು ದೂರು ನೀಡಿದ್ದರು. ಆದರೆ, ಜೆಪಿ ಮೋರ್ಗಾನ್ ಚೇಸ್ ನಡೆಸಿದ ಆಂತರಿಕ ತನಿಖೆಯಲ್ಲಿ ಈ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿ ದೂರು ತಿರಸ್ಕರಿಸಿದೆ. ಸಂತ್ರಸ್ತ ಉದ್ಯೋಗಿ ತನಿಖೆಗೆ ಸಹಕರಿಸಿಲ್ಲ ಎಂದು ಬ್ಯಾಂಕ್ ವಕ್ತಾರರು ತಿಳಿಸಿದ್ದಾರೆ.
ಸಂತ್ರಸ್ತನ ಸ್ಥಿತಿ
ಸಂತ್ರಸ್ತನ ಪರ ವಕೀಲ ಡೇನಿಯಲ್ ಜೆ ಕೈಸರ್ ಮಾತನಾಡಿ, "ಈ ಘಟನೆಯಿಂದ ನನ್ನ ಕಕ್ಷಿದಾರ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಹತಾಶರಾಗಿದ್ದಾರೆ. ಹಜ್ದಿನಿ ಇಂದಿಗೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಆದರೆ ದೂರು ನೀಡಿದ ನನ್ನ ಕಕ್ಷಿದಾರರಿಗೆ ಕೆಲಸವಿಲ್ಲದಂತಾಗಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಉದ್ಯೋಗಿ ಮಾನಸಿಕ ಯಾತನೆ ಮತ್ತು ಆದಾಯದ ನಷ್ಟಕ್ಕೆ ಪರಿಹಾರ ಕೋರಿ ದಾವೆ ಹೂಡಿದ್ದಾರೆ.
ಯಾರು ಈ ಲೋರ್ನಾ ಹಜ್ದಿನಿ?
37 ವರ್ಷದ ಲೋರ್ನಾ ಹಜ್ದಿನಿ ಕಳೆದ 15 ವರ್ಷಗಳಿಂದ ಜೆಪಿ ಮೋರ್ಗಾನ್ ಚೇಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎನ್‌ವೈಯು ಸ್ಟರ್ನ್ ಸ್ಕೂಲ್ ಆಫ್ ಬಿಸಿನೆಸ್‌ನಿಂದ ಪದವಿ ಪಡೆದಿರುವ ಇವರು, ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲೂ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಅವರು ಬ್ಯಾಂಕಿನ 'ಲೆವರೇಜ್ಡ್ ಫೈನಾನ್ಸ್' ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

