
ಬೇಬಿ ಪೌಡರ್‌ನಿಂದ ಕ್ಯಾನ್ಸರ್ ಆರೋಪ- ಜಾನ್ಸನ್ ಅಂಡ್ ಜಾನ್ಸನ್‌ನಿಂದ 46,000 ಕೋಟಿ ರೂ. ಪರಿಹಾರ
ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ತನ್ನ ಟಾಲ್ಕ್ ಆಧಾರಿತ ಬೇಬಿ ಪೌಡರ್‌ನಿಂದ ಕ್ಯಾನ್ಸರ್ ಉಂಟಾಗಿದೆ ಎಂಬ ಆರೋಪದಡಿ ದಾಖಲಾಗಿದ್ದ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಲು 5.5 ಬಿಲಿಯನ್ ಡಾಲರ್ (ಸುಮಾರು 46,000 ಕೋಟಿ ರೂ.) ಪರಿಹಾರ ನೀಡಲು ಒಪ್ಪಿದೆ.
ದಶಕಗಳಿಂದ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದ ಜಾನ್ಸನ್ ಅಂಡ್ ಜಾನ್ಸನ್ (Johnson & Johnson) ಕಂಪನಿಯ ಬೇಬಿ ಪೌಡರ್ ಮತ್ತು ಟಾಲ್ಕ್ ಆಧಾರಿತ ಉತ್ಪನ್ನಗಳ ವಿರುದ್ಧದ ಕಾನೂನು ಸಮರವು ಅಂತಿಮ ಹಂತಕ್ಕೆ ಬಂದು ತಲುಪಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ತನ್ನ ಟಾಲ್ಕ್ ಆಧಾರಿತ ಉತ್ಪನ್ನಗಳಿಂದ ಓವೇರಿಯನ್ ಕ್ಯಾನ್ಸರ್ (ಅಂಡಾಶಯದ ಕ್ಯಾನ್ಸರ್) ಬಂದಿದೆ ಎಂದು ಆರೋಪಿಸಿ ದಾಖಲಾಗಿದ್ದ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಬರೋಬ್ಬರಿ 5.5 ಬಿಲಿಯನ್ ಡಾಲರ್ (ಸುಮಾರು 46,000 ಕೋಟಿ ರೂ.ಗೂ ಹೆಚ್ಚು) ಪರಿಹಾರ ನೀಡಲು ಒಪ್ಪಿಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಾರ್ಪೊರೇಟ್ ಪರಿಹಾರ ಒಪ್ಪಂದಗಳಲ್ಲಿ ಒಂದಾಗಿರುವ ಈ ತೀರ್ಮಾನವು, ಕಂಪನಿಯ ವಿರುದ್ಧ ಅಮೆರಿಕದ ಫೆಡರಲ್ ಮತ್ತು ರಾಜ್ಯ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿರುವ ಸುಮಾರು 76,000 ಒಟ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಿದೆ.
95% ಸಂತ್ರಸ್ತರ ಒಪ್ಪಿಗೆ ಕಡ್ಡಾಯ
ಈ ಪರಿಹಾರ ಒಪ್ಪಂದವು ಜಾರಿಗೆ ಬರಬೇಕಾದರೆ, ಪ್ರಕರಣ ದಾಖಲಿಸಿರುವ ಕನಿಷ್ಠ ಶೇಕಡಾ 95 ರಷ್ಟು ಸಂತ್ರಸ್ತರು ಈ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಸಂತ್ರಸ್ತರ ವಕೀಲರ ಪ್ರಕಾರ, ಅರ್ಹ ಅರ್ಜಿದಾರರ ಸಂಖ್ಯೆಗೆ ಅನುಗುಣವಾಗಿ ಜೆ&ಜೆ ನೀಡಬೇಕಾದ ಒಟ್ಟು ಮೊತ್ತವು ಭವಿಷ್ಯದಲ್ಲಿ 7 ಬಿಲಿಯನ್ ಡಾಲರ್‌ಗೂ (58,000 ಕೋಟಿ ರೂ.ಗೂ ಹೆಚ್ಚು) ಏರಿಕೆಯಾಗುವ ಸಾಧ್ಯತೆಯಿದೆ. ಸಂಸ್ಥೆಯು ಮೊದಲ ಕಂತಿನ ಪರಿಹಾರವಾಗಿ 2027 ರಲ್ಲಿ 3 ಬಿಲಿಯನ್ ಡಾಲರ್ ಮತ್ತು ಉಳಿದ ಮೊತ್ತವನ್ನು 2028 ರಲ್ಲಿ ಪಾವತಿಸಲು ಯೋಜಿಸಿದೆ.
ಜಾನ್ಸನ್ ಅಂಡ್ ಜಾನ್ಸನ್ ವಾದವೇನು?
ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯು ತಾನು ಯಾವುದೇ ತಪ್ಪನ್ನೂ ಮಾಡಿಲ್ಲ ಮತ್ತು ತನ್ನ ಉತ್ಪನ್ನಗಳು ಸುರಕ್ಷಿತವಾಗಿವೆ ಎಂದು ಇಂದಿಗೂ ಸಮರ್ಥಿಸಿಕೊಂಡಿದೆ. ಕಂಪನಿಯ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಆಸ್ಬೆಸ್ಟೋಸ್' (Asbestos) ಎಂಬ ವಿಷಕಾರಿ ಅಂಶವಿಲ್ಲ ಎಂದು ಜೆ&ಜೆ ಪ್ರತಿಪಾದಿಸಿದೆ.
ಸುದೀರ್ಘ ಹಾಗೂ ಭಾರಿ ವೆಚ್ಚದ ಕೋರ್ಟ್ ವ್ಯಾಜ್ಯಗಳಿಂದ ಹೊರಬಂದು, ಜೀವ ಉಳಿಸುವ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಯತ್ತ ಗಮನಹರಿಸಲು ಈ ಇತ್ಯರ್ಥಕ್ಕೆ ಒಪ್ಪಿಕೊಳ್ಳಲಾಗಿದೆ ಎಂದು ಜೆ&ಜೆ ಲೀಗಲ್ ವೈಸ್ ಪ್ರೆಸಿಡೆಂಟ್ ಎರಿಕ್ ಹಾಸ್ ಸ್ಪಷ್ಟಪಡಿಸಿದ್ದಾರೆ.
ಕಂಪನಿಯು ಈಗಾಗಲೇ 2020 ರಲ್ಲೇ ಅಮೆರಿಕದಲ್ಲಿ ಟಾಲ್ಕ್ ಆಧಾರಿತ ಪೌಡರ್ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಅದರ ಬದಲಿಗೆ ಜೋಳದ ಹಿಟ್ಟು ಆಧಾರಿತ ಪೌಡರ್ ಅನ್ನು ಪರಿಚಯಿಸಿದೆ.
ಕಳೆದ ಒಂದು ದಶಕದಿಂದ ನಡೆಯುತ್ತಿರುವ ಈ ಕಾನೂನು ಹೋರಾಟದಲ್ಲಿ ಜೆ&ಜೆ ಹಲವು ಸವಾಲುಗಳನ್ನು ಎದುರಿಸಿದೆ. ಪ್ರಕರಣಗಳನ್ನು ತಪ್ಪಿಸಲು ಕಂಪನಿಯು 'ಟೆಕ್ಸಾಸ್ ಟೂ-ಸ್ಟೆಪ್' ಎಂಬ ಕಾನೂನು ತಂತ್ರದ ಮೂಲಕ ತನ್ನ ಅಂಗಸಂಸ್ಥೆಯನ್ನು ದಿವಾಳಿ ಎಂದು ಘೋಷಿಸಿ ಕೇಸ್‌ಗಳನ್ನು ಒಂದೇ ಕಡೆ ತರಲು ಶ್ರಮಿಸಿತ್ತು.
ಆದರೆ, ಅಮೆರಿಕದ ನ್ಯಾಯಾಲಯಗಳು ಕಂಪನಿಯ ಮೂರು ದಿವಾಳಿ ಅರ್ಜಿಗಳನ್ನೂ ವಜಾಗೊಳಿಸಿದ್ದವು. ಮಾರ್ಚ್ 2025 ರಲ್ಲಿ ಕೋರ್ಟ್ ವ್ಯಾಜ್ಯಗಳು ಪುನಃ ಆರಂಭಗೊಂಡಿದ್ದವು.

