
ಜಪಾನ್‌ನ ಚಿಬಾದಲ್ಲಿ ಭಾರಿ ಮಳೆಯಿಂದ ನಾಲ್ವರು ಮೃತಪಟ್ಟಿದ್ದಾರೆ.
ಜಪಾನ್‌ನಲ್ಲಿ ಭೀಕರ ಮಳೆ: ನಾಲ್ವರು ಸಾವು, 6 ಸಾವಿರ ಜನ ಅತಂತ್ರ
ಭಾರಿ ಮಳೆಯಿಂದಾಗಿ ಚಿಬಾ ಪ್ರಾಂತ್ಯದಲ್ಲಿ ಸುಮಾರು 26,000 ಮನೆಗಳಿಗೆ ಶುಕ್ರವಾರ ಬೆಳಗ್ಗೆಯವರೆಗೂ ವಿದ್ಯುತ್ ಸಂಪರ್ಕ ಇರಲಿಲ್ಲ. ಇಚಿಕಾವಾ, ಕಾಶಿವಾ ಮತ್ತು ಸಕುರಾ ಸೇರಿದಂತೆ ಹಲವು ನಗರಗಳಲ್ಲಿ ಕನಿಷ್ಠ 45 ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ.
ಜಪಾನ್‌ನ ಪೂರ್ವ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಗುರುವಾರ ತಡರಾತ್ರಿ ಸುರಿದ ಅಸಾಧಾರಣ ಮಳೆಯಿಂದ ಚಿಬಾ ಪ್ರಾಂತ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಭೂಕುಸಿತದ ಎಚ್ಚರಿಕೆ ಹಾಗೂ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಭಾರಿ ಮಳೆಯ ಪರಿಣಾಮ ನರಿತಾ ವಿಮಾನ ನಿಲ್ದಾಣದಲ್ಲೇ ಸುಮಾರು 6,000 ಪ್ರಯಾಣಿಕರು ರಾತ್ರಿ ಕಳೆಯುವಂತಾಗಿದೆ.
ಚಿಬಾ ಪ್ರಾಂತ್ಯದ ವಿಪತ್ತು ನಿರ್ವಹಣಾ ಅಧಿಕಾರಿಗಳ ಪ್ರಕಾರ, ಪ್ರವಾಹದಿಂದ ಮೃತಪಟ್ಟವರಲ್ಲಿ 60 ಅಥವಾ 70ರ ವಯಸ್ಸಿನ ವ್ಯಕ್ತಿಯೊಬ್ಬರು ಸೇರಿದ್ದಾರೆ. ಪ್ರವಾಹದ ನೀರಿನಲ್ಲಿ ಅವರು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 66 ವರ್ಷದ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿದ ಕಾರಿನೊಳಗೆ ಸಿಲುಕಿ ಮೃತಪಟ್ಟಿದ್ದಾರೆ.
ಇನ್ನೊಬ್ಬ ವ್ಯಕ್ತಿ ರಸ್ತೆ ಬದಿಯಲ್ಲಿ ಕುಸಿದುಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮತ್ತೊಬ್ಬ ಮೃತ ವ್ಯಕ್ತಿಯ ವಯಸ್ಸು ಮತ್ತು ಲಿಂಗದ ವಿವರಗಳು ಇನ್ನೂ ಖಚಿತವಾಗಿಲ್ಲ. ಮತ್ತೊಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಇನ್ನೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ.
26 ಸಾವಿರ ಮನೆಗಳಿಗೆ ವಿದ್ಯುತ್ ಇಲ್ಲ
ಭಾರಿ ಮಳೆಯಿಂದಾಗಿ ಚಿಬಾ ಪ್ರಾಂತ್ಯದಲ್ಲಿ ಸುಮಾರು 26,000 ಮನೆಗಳಿಗೆ ಶುಕ್ರವಾರ ಬೆಳಗ್ಗೆಯವರೆಗೂ ವಿದ್ಯುತ್ ಸಂಪರ್ಕ ಇರಲಿಲ್ಲ. ಇಚಿಕಾವಾ, ಕಾಶಿವಾ ಮತ್ತು ಸಕುರಾ ಸೇರಿದಂತೆ ಹಲವು ನಗರಗಳಲ್ಲಿ ಕನಿಷ್ಠ 45 ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ಮತ್ತಷ್ಟು 39 ಮನೆಗಳ ನೆಲದ ಕೆಳಭಾಗಕ್ಕೂ ನೀರು ಸೇರಿದೆ.
ನರಿತಾ ವಿಮಾನ ನಿಲ್ದಾಣದಲ್ಲಿ 6,000 ಮಂದಿ ಅತಂತ್ರ
ಭಾರಿ ಮಳೆಯ ಪರಿಣಾಮ ಟೋಕಿಯೊಗೆ ಸೇವೆ ನೀಡುವ ಪ್ರಮುಖ ವಿಮಾನ ನಿಲ್ದಾಣಗಳಲ್ಲೊಂದಾದ ನರಿತಾದಲ್ಲಿ ಸುಮಾರು 6,000 ಪ್ರಯಾಣಿಕರು ರಾತ್ರಿ ವೇಳೆ ಸಿಲುಕಿಕೊಂಡಿದ್ದರು. ರೈಲು ಸೇವೆಗಳು ಸ್ಥಗಿತಗೊಂಡ ಪರಿಣಾಮ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹಲವು ರೈಲುಗಳು ಶುಕ್ರವಾರ ಮಧ್ಯಾಹ್ನದವರೆಗೂ ರದ್ದಾಗಿದ್ದವು.
ವಿಮಾನ ನಿಲ್ದಾಣದ ಸಿಬ್ಬಂದಿ ಸಿಲುಕಿದ್ದ ಪ್ರಯಾಣಿಕರಿಗೆ ಉಚಿತ ನೀರು, ಆಹಾರ ಮತ್ತು ಮಲಗಲು ಅಗತ್ಯವಾದ ಸಾಮಗ್ರಿಗಳನ್ನು ಒದಗಿಸಿದ್ದಾರೆ. ಚಿಬಾ ರೈಲು ನಿಲ್ದಾಣದಲ್ಲೂ ರೈಲು ಸೇವೆ ಸ್ಥಗಿತಗೊಂಡಿದ್ದರಿಂದ ನೂರಾರು ಪ್ರಯಾಣಿಕರು ಅತಂತ್ರರಾಗಿದ್ದರು.
ಚಿಬಾದಲ್ಲಿ ಪ್ರವಾಹ, ಕಾರುಗಳು ನೀರಿನಲ್ಲಿ ಮುಳುಗಡೆ
ಚಿಬಾ ಪ್ರದೇಶದ ಹಲವು ಭಾಗಗಳಲ್ಲಿ ಪ್ರವಾಹದ ನೀರು ರಸ್ತೆಗಳ ಮೇಲೆ ಹರಿದಿದೆ. ಕೆಲವು ಕಡೆ ಕಾರುಗಳ ಹೆಡ್‌ಲೈಟ್ ಮಟ್ಟದವರೆಗೂ ನೀರು ತುಂಬಿರುವ ದೃಶ್ಯಗಳು ಕಂಡುಬಂದಿವೆ. ನೂರಾರು ಜನರು ಸುರಕ್ಷಿತ ಸ್ಥಳಗಳಲ್ಲಿನ ಆಶ್ರಯ ಕೇಂದ್ರಗಳಲ್ಲಿ ರಾತ್ರಿ ಕಳೆದಿದ್ದಾರೆ. ಹಠಾತ್ ಮಳೆ ಸುರಿದಿದ್ದರಿಂದ ಪರಿಸ್ಥಿತಿ ಸಂಪೂರ್ಣ ಅನಿರೀಕ್ಷಿತವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟು ಮುಂದುವರಿಸುವ ಬಗ್ಗೆಯೂ ಸ್ಥಳೀಯರಲ್ಲಿ ಆತಂಕ ಮೂಡಿದೆ.
ಜಪಾನ್ ಹವಾಮಾನ ಸಂಸ್ಥೆಯ ಅಧಿಕಾರಿಯೊಬ್ಬರು ಗುರುವಾರ ಸುದ್ದಿಗೋಷ್ಠಿಯಲ್ಲಿ ಚಿಬಾ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ‘ಅಭೂತಪೂರ್ವ ಮಟ್ಟಕ್ಕೆ’ ತಲುಪುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಅತ್ಯುನ್ನತ ಮಟ್ಟದ ಭಾರಿ ಮಳೆ ಎಚ್ಚರಿಕೆಯನ್ನು ಇದೇ ಮೊದಲ ಬಾರಿಗೆ ಚಿಬಾ ಪ್ರದೇಶಕ್ಕೆ ನೀಡಲಾಗಿತ್ತು. ಶುಕ್ರವಾರ ಬೆಳಗ್ಗೆಯ ವೇಳೆಗೆ ಮಟ್ಟ-5ರ ಭಾರಿ ಮಳೆ ಎಚ್ಚರಿಕೆಗಳನ್ನು ಮಟ್ಟ-4ಕ್ಕೆ ಇಳಿಸಲಾಗಿದೆ. ಆದರೂ ಪ್ರವಾಹ ಹಾಗೂ ಸಂಚಾರ ವ್ಯತ್ಯಯದ ಪರಿಣಾಮ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿಲ್ಲ.

