ಜಪಾನ್‌ನಲ್ಲಿ 5.9 ತೀವ್ರತೆಯ ಭೂಕಂಪ; ಟೋಕಿಯೊ ಸೇರಿ ನಾಲ್ಕು ಪ್ರಾಂತ್ಯಗಳಲ್ಲಿ 23 ಮಂದಿಗೆ ಗಾಯ
x

ಜಪಾನ್‌ನಲ್ಲಿ 5.9 ತೀವ್ರತೆಯ ಭೂಕಂಪ; ಟೋಕಿಯೊ ಸೇರಿ ನಾಲ್ಕು ಪ್ರಾಂತ್ಯಗಳಲ್ಲಿ 23 ಮಂದಿಗೆ ಗಾಯ

ಭಾನುವಾರ ಮುಂಜಾನೆ ಸಂಭವಿಸಿದ ಭೂಕಂಪದಿಂದ ರೈಲು ಸಂಚಾರಕ್ಕೆ ಅಡ್ಡಿ, ವಿದ್ಯುತ್ ಕಡಿತ ಮತ್ತು ಮೂಲಸೌಕರ್ಯಕ್ಕೆ ಸಣ್ಣ ಪ್ರಮಾಣದ ಹಾನಿ ಉಂಟಾಯಿತು. ಆದರೆ, ಸುನಾಮಿ ಭೀತಿ ಇಲ್ಲ.


ಪೂರ್ವ ಜಪಾನ್‌ನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ 5.9 ತೀವ್ರತೆಯ ಭೂಕಂಪ ಟೋಕಿಯೊ ಸೇರಿದಂತೆ ಹಲವು ಪ್ರದೇಶಗಳನ್ನು ತಲ್ಲಣಗೊಳಿಸಿದೆ. ಘಟನೆಯಲ್ಲಿ ಕನಿಷ್ಠ 23 ಮಂದಿ ಗಾಯಗೊಂಡಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಟೋಕಿಯೊದ ಸುಮಾರು 460 ಮನೆಗಳಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಆದರೆ, ಸುನಾಮಿ ಭೀತಿ ಇಲ್ಲ ಎಂದು ಜಪಾನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಇಬರಾಕಿ ಪ್ರಾಂತ್ಯದ ದಕ್ಷಿಣ ಭಾಗದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದ್ದು, ಭೂಮಿಯ ಸುಮಾರು 70 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ಭೂಕಂಪದ ತೀವ್ರತೆಯನ್ನು ಪ್ರಾಥಮಿಕವಾಗಿ 5.8 ಎಂದು ದಾಖಲಿಸಿದೆ.

ನಾಲ್ಕು ಪ್ರಾಂತ್ಯಗಳಲ್ಲಿ 23 ಮಂದಿಗೆ ಗಾಯ

ಭೂಕಂಪದ ಪರಿಣಾಮ ಸೈತಾಮಾ, ಕನಗಾವಾ, ಚಿಬಾ ಮತ್ತು ಇಬರಾಕಿ ಪ್ರಾಂತ್ಯಗಳಲ್ಲಿ ಒಟ್ಟು 23 ಮಂದಿ ಗಾಯಗೊಂಡಿದ್ದಾರೆ. ಸೈತಾಮಾದಲ್ಲಿ ಒಂಬತ್ತು, ಕನಗಾವಾದಲ್ಲಿ ಒಂಬತ್ತು, ಚಿಬಾದಲ್ಲಿ ನಾಲ್ವರು ಹಾಗೂ ಇಬರಾಕಿಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನವರು ನಿದ್ರಿಸುತ್ತಿದ್ದ ಸಂದರ್ಭದಲ್ಲೇ ಭೂಕಂಪ ಸಂಭವಿಸಿದ್ದರಿಂದ ಗಾಬರಿಯಿಂದ ಹಾಸಿಗೆಯಿಂದ ಎದ್ದು ಓಡುವಾಗ ಅಥವಾ ಕೆಳಗೆ ಬೀಳುವ ಮೂಲಕ ಗಾಯಗೊಂಡಿದ್ದಾರೆ. ಕೆಲವರು ಪೀಠೋಪಕರಣ ಹಾಗೂ ಬಾಗಿಲಿಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕನಗಾವಾ ಪ್ರಾಂತ್ಯದ ಯೊಕೊಹಾಮಾದಲ್ಲಿ 80 ವರ್ಷ ವಯಸ್ಸಿನ ಮಹಿಳೆಯೊಬ್ಬರು ಹಾಸಿಗೆಯಿಂದ ಕೆಳಗೆ ಬಿದ್ದು ಸೊಂಟಕ್ಕೆ ಗಂಭೀರ ಗಾಯವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಟೋಕಿಯೊ ಮತ್ತು ನರಿತಾ ರೈಲು ಸಂಚಾರದಲ್ಲಿ ವ್ಯತ್ಯಯ

ಭೂಕಂಪದ ಪರಿಣಾಮ ಟೋಕಿಯೊ ಹಾಗೂ ನರಿತಾ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವೇಗದ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಯಿತು. ಈಶಾನ್ಯ ಭಾಗಗಳಿಗೆ ತೆರಳುವ ಕೆಲವು ಸ್ಥಳೀಯ ರೈಲುಗಳ ಸಂಚಾರವೂ ಅಸ್ತವ್ಯಸ್ತಗೊಂಡಿತ್ತು.

ಶಿಂಕಾನ್ಸೆನ್ ಬುಲೆಟ್ ರೈಲುಗಳ ಸಂಚಾರ ಸಾಮಾನ್ಯವಾಗಿಯೇ ಮುಂದುವರಿದಿದೆ ಎಂದು ಈಸ್ಟ್ ಜಪಾನ್ ರೈಲ್ವೆ ಸಂಸ್ಥೆ ತಿಳಿಸಿದೆ. ಭೂಕಂಪದ ಬಳಿಕ ರೈಲು ಮಾರ್ಗಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳ ಸುರಕ್ಷತೆಯನ್ನು ಪರಿಶೀಲಿಸಲಾಗಿದೆ.

ಟೋಕಿಯೊದಲ್ಲಿ ವಿದ್ಯುತ್ ಕಡಿತ, ನೀರಿನ ಕೊಳವೆ ಹಾನಿ

ಭೂಕಂಪದ ಪರಿಣಾಮ ಟೋಕಿಯೊದ ಸುಮಾರು 460 ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಬಳಿಕ ಭಾನುವಾರ ಬೆಳಗಿನ ವೇಳೆಗೆ ವಿದ್ಯುತ್ ಪೂರೈಕೆಯನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ ಎಂದು ಟೋಕಿಯೊ ವಿದ್ಯುತ್ ಸಂಸ್ಥೆ ತಿಳಿಸಿದೆ.

ಟೋಕಿಯೊದ ಪೂರ್ವ ಭಾಗದ ಕೊಟೊ ವಾರ್ಡ್‌ನಲ್ಲಿ ಭೂಗತ ನೀರಿನ ಕೊಳವೆ ಒಡೆದು ರಸ್ತೆಗೆ ನೀರು ಹರಿಯಿತು. ತಕ್ಷಣ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಹಾನಿಗೊಳಗಾದ ಕೊಳವೆಯನ್ನು ದುರಸ್ತಿ ಮಾಡಿ ನೀರಿನ ಸೋರಿಕೆಯನ್ನು ನಿಲ್ಲಿಸಿದ್ದಾರೆ.

ಪರಮಾಣು ಸ್ಥಾವರಗಳಲ್ಲಿ ಯಾವುದೇ ಅಸಹಜತೆ ಇಲ್ಲ

ಭೂಕಂಪದ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದೆ. ಪ್ರಧಾನಿ ಸನೇ ತಕೈಚಿ ಅವರು ಸಂಭವನೀಯ ಹಾನಿಯ ಪ್ರಮಾಣವನ್ನು ಪರಿಶೀಲಿಸಲು ಸರ್ಕಾರದ ಮಟ್ಟದಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ದೇಶದ ಪರಮಾಣು ನಿಯಂತ್ರಣ ಪ್ರಾಧಿಕಾರವು ಸುಮಾರು ಒಂದು ಡಜನ್ ಪರಮಾಣು ವಿದ್ಯುತ್ ಸ್ಥಾವರಗಳು ಮತ್ತು ಪರಮಾಣು ವಸ್ತುಗಳನ್ನು ನಿರ್ವಹಿಸುವ ಇತರ ಕೇಂದ್ರಗಳಿಂದ ಯಾವುದೇ ಅಸಹಜತೆ ಅಥವಾ ಹಾನಿಯ ವರದಿಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸುನಾಮಿ ಎಚ್ಚರಿಕೆ ಇಲ್ಲ

ಭೂಕಂಪದ ಕಂಪನ ಟೋಕಿಯೊ ನಗರದಲ್ಲಿಯೂ ತೀವ್ರವಾಗಿ ಅನುಭವವಾಗಿದ್ದು, ಜನರ ಮೊಬೈಲ್‌ಗಳಿಗೆ ತುರ್ತು ಭೂಕಂಪ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಯಿತು. ಆದರೆ, ಈ ಭೂಕಂಪದಿಂದ ಸುನಾಮಿ ಸಂಭವಿಸುವ ಅಪಾಯವಿಲ್ಲ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಭೂಕಂಪಕ್ಕೆ ಆಗಾಗ್ಗೆ ಒಳಗಾಗುವ ಪ್ರದೇಶಗಳಲ್ಲಿ ಜಪಾನ್ ಕೂಡ ಒಂದಾಗಿದ್ದು, ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಭೂಕಂಪದ ಬಳಿಕದ ಹಾನಿ ಹಾಗೂ ಗಾಯಾಳುಗಳ ಸ್ಥಿತಿಗತಿಯನ್ನು ಪರಿಶೀಲಿಸುತ್ತಿವೆ.

Read More
Next Story