
Iran-Israel War|ಇರಾನ್ ತೈಲ ಘಟಕಗಳ ಮೇಲೆ ಭೀಕರ ದಾಳಿ: ಇಸ್ರೇಲ್ ವಿರುದ್ಧ ತಿರುಗಿ ಬಿದ್ದ ಅಮೆರಿಕ
Crude Oil|ಟೆಹ್ರಾನ್ ತೈಲ ಡಿಪೋಗಳ ಮೇಲೆ ಇಸ್ರೇಲ್ ದಾಳಿ ಬೆನ್ನಲ್ಲೇ ಕಚ್ಚಾ ತೈಲ ಬೆಲೆ 107 ಡಾಲರ್ ದಾಟಿದೆ. ಇದು ಅಮೆರಿಕದ ಕೆಂಗಣ್ಣಿಗೆ ಕಾರಣವಾಗಿದೆ.
ಇರಾನ್ನ ತೈಲ ಸಂಗ್ರಹಣಾ ಘಟಕಗಳ ಮೇಲೆ ಇಸ್ರೇಲ್ ನಡೆಸಿರುವ ಭೀಕರ ವೈಮಾನಿಕ ದಾಳಿಯು ಅಮೆರಿಕ ಮತ್ತು ಇಸ್ರೇಲ್ ನಡುವೆ ಮೊದಲ ದೊಡ್ಡ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಫೆಬ್ರವರಿ 28 ರಂದು ಯುದ್ಧ ಆರಂಭವಾದ ನಂತರ ಇಸ್ರೇಲ್ನ ಈ ನಡೆ ಅಮೆರಿಕಕ್ಕೆ ಅಚ್ಚರಿ ಮತ್ತು ಆಘಾತವನ್ನುಂಟು ಮಾಡಿದೆ ಎಂದು 'ಆಕ್ಸಿಯೋಸ್' ವರದಿ ಮಾಡಿದೆ.
'WTF' ಎಂದ ಅಮೆರಿಕ: ಇಸ್ರೇಲ್ ನಡೆಗೆ ಅಸಮಾಧಾನ
ಇರಾನ್ನ ಕ್ಷಿಪಣಿ ಉಡಾವಣೆಗೆ ಇಂಧನ ಪೂರೈಸುವ ಘಟಕಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಾಗಿ ಇಸ್ರೇಲ್ ಅಮೆರಿಕಕ್ಕೆ ತಿಳಿಸಿತ್ತು. ಆದರೆ, ವಾಸ್ತವದಲ್ಲಿ ಇಸ್ರೇಲ್ ನಡೆಸಿದ ದಾಳಿಯು ಅಮೆರಿಕ ನಿರೀಕ್ಷಿಸಿದ್ದಕ್ಕಿಂತಲೂ ವಿಸ್ತಾರವಾಗಿತ್ತು. "ಇದು ಸರಿಯಾದ ಕ್ರಮವಲ್ಲ" ಎಂದು ಅಮೆರಿಕದ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ವಾಷಿಂಗ್ಟನ್ನಿಂದ ಇಸ್ರೇಲ್ಗೆ 'WTF' ಎಂಬ ಖಡಕ್ ಸಂದೇಶ ರವಾನೆಯಾಗಿದೆ ಎಂದು ವರದಿಯಾಗಿದೆ.
ಇರಾನ್ ತೈಲ ಡಿಪೋಗಳು ಧ್ವಂಸ
ಇರಾನ್ ರಾಜಧಾನಿ ಟೆಹ್ರಾನ್ ಸುತ್ತಮುತ್ತಲಿನ ಮೂರು ತೈಲ ಡಿಪೋಗಳು ಮತ್ತು ಒಂದು ರಿಫೈನರಿ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ. ತೈಲ ಡಿಪೋಗಳಿಂದ ಸೋರಿಕೆಯಾದ ಇಂಧನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ರಸ್ತೆಗಳಲ್ಲಿ 'ಬೆಂಕಿಯ ನದಿ' ಹರಿಯುತ್ತಿರುವಂತೆ ಕಾಣುತ್ತಿದೆ.
ತೈಲ ಮತ್ತು ಮಸಿ ಮಿಶ್ರಿತ ಕಪ್ಪು ಮಳೆ ಸುರಿಯುತ್ತಿದ್ದು, ಜನರು ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಆಸಿಡ್ ಮಳೆಯ ಭೀತಿಯೂ ಎದುರಾಗಿದೆ. ಈ ಭೀಕರ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
100 ಡಾಲರ್ ಗಡಿ ದಾಟಿದ ಕಚ್ಛಾ ತೈಲ
ಇಸ್ರೇಲ್ನ ಈ ದಾಳಿಯು ಜಾಗತಿಕ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏಕಾಏಕಿ ಶೇ. 16.5 ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್ಗೆ 107.97 ಡಾಲರ್ಗೆ ತಲುಪಿದೆ. ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ತೈಲ ಬೆಲೆ 100ಡಾಲರ್ ಗಡಿ ದಾಟಿದೆ. ಅಮೆರಿಕದ ಡಬ್ಲ್ಯೂಟಿಐ ತೈಲ ಬೆಲೆಯೂ ಶೇ. 16.9 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್ಗೆ 106.22 ಡಾಲರ್ಗೆ ಮಾರಾಟವಾಗುತ್ತಿದೆ.
ಟ್ರಂಪ್ ಸರ್ಕಾರದ ಕಳವಳ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಅಧ್ಯಕ್ಷ ಟ್ರಂಪ್ಗೆ ಈ ದಾಳಿ ಇಷ್ಟವಾಗಿಲ್ಲ. ತೈಲವನ್ನು ಉಳಿಸುವುದು ಅವರ ಉದ್ದೇಶವೇ ಹೊರತು ಅದನ್ನು ಸುಡುವುದಲ್ಲ" ಎಂದಿದ್ದಾರೆ.
ಕಚ್ಛಾ ತೈಲದ ದರ 200ಡಾಲರ್ಗೆ ಏರಿಕೆ?
ತನ್ನ ತೈಲ ಮೂಲಸೌಕರ್ಯಗಳ ಮೇಲೆ ಮತ್ತೆ ದಾಳಿ ನಡೆದರೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಇರಾನ್ ಎಚ್ಚರಿಸಿದೆ. ಒಂದು ವೇಳೆ ಇರಾನ್ ಕೂಡ ಇಂಧನ ಕೇಂದ್ರಗಳ ಮೇಲೆ ದಾಳಿ ಆರಂಭಿಸಿದರೆ, ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 200ಡಾಲರ್ ದಾಟಬಹುದು ಎಂದು ಇರಾನ್ ಸೇನೆಯ ವಕ್ತಾರರು ಎಚ್ಚರಿಕೆ ನೀಡಿದ್ದಾರೆ. ಕಳೆದ ವಾರವಷ್ಟೇ ಇರಾನ್ ಸೌದಿ ಅರೇಬಿಯಾದ ವಿಶ್ವದ ಅತಿದೊಡ್ಡ ರಿಫೈನರಿ ಮೇಲೆ ಡ್ರೋನ್ ದಾಳಿ ನಡೆಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

