
ಕುಟುಂಬದ ಸದಸ್ಯರೊಂದಿಗೇ ಲೈಂಗಿಕ ಕ್ರಿಯೆಗೆ ಒತ್ತಾಯ! ಹಮಾಸ್ ಉಗ್ರರ ಕ್ರೌರ್ಯ ಇಸ್ರೇಲ್ ತನಿಖಾ ವರದಿಯಲ್ಲಿ ಬಯಲು!
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ವೇಳೆ ಹಮಾಸ್ ಉಗ್ರರು ನಡೆಸಿದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳ ಬಗ್ಗೆ ಇಸ್ರೇಲಿ ತನಿಖಾ ಆಯೋಗವು ಸವಿಸ್ತಾರ ವರದಿ ಬಿಡುಗಡೆ ಮಾಡಿದೆ.
ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ಹಮಾಸ್ ಮತ್ತು ಇತರ ಪ್ಯಾಲೆಸ್ಟೀನಿಯನ್ ಸಶಸ್ತ್ರ ಗುಂಪುಗಳು ನಡೆಸಿದ ದಾಳಿಯ ವೇಳೆ ನಡೆದ ಭೀಕರ ಲೈಂಗಿಕ ದೌರ್ಜನ್ಯಗಳ ಬಗ್ಗೆ ಸ್ವತಂತ್ರ ಇಸ್ರೇಲಿ ತನಿಖಾ ಸಂಸ್ಥೆಯು 300 ಪುಟಗಳ ಸುದೀರ್ಘ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯು ದಾಳಿಯ ಸಮಯದಲ್ಲಿ ನಡೆದ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಅಮಾನುಷ ಹಿಂಸೆಯ ಸವಿಸ್ತಾರ ಮಾಹಿತಿಯನ್ನು ಒಳಗೊಂಡಿದೆ.
ಈ ವರದಿಯು 430ಕ್ಕೂ ಹೆಚ್ಚು ಸಂದರ್ಶನಗಳು, 10,000ಕ್ಕೂ ಹೆಚ್ಚು ಫೋಟೋಗಳು ಮತ್ತು ವೀಡಿಯೊ ಸಾಕ್ಷ್ಯಗಳ ಮೇಲೆ ಆಧಾರಿತವಾಗಿದೆ. ಸುಮಾರು 1,200 ಜನರ ಹತ್ಯೆ ಮತ್ತು 251 ಜನರನ್ನು ಒತ್ತೆಸೆರೆಯನ್ನಾಗಿ ಇರಿಸಿಕೊಂಡ ಸಮಯದಲ್ಲಿ ಈ ಘಟನೆಗಳು ನಡೆದಿವೆ.
ಸಾವಿನ ನಂತರವೂ ಅತ್ಯಾಚಾರ
ಮಹಿಳೆಯರನ್ನು ಜೀವಂತವಿದ್ದಾಗ ಮಾತ್ರವಲ್ಲದೆ, ಅವರು ಮೃತಪಟ್ಟ ನಂತರವೂ ಅತ್ಯಾಚಾರ ಮಾಡಲಾಗಿದೆ ಎಂಬ ಆಘಾತಕಾರಿ ಅಂಶ ವರದಿಯಲ್ಲಿದೆ. ಸಂತ್ರಸ್ತೆಯರನ್ನು ಸಾರ್ವಜನಿಕವಾಗಿ ಅತ್ಯಾಚಾರ ಎಸಗಿ ನಂತರ ಹತ್ಯೆ ಮಾಡಲಾಗಿದೆ.
'ಕಿನೋಸೈಡಲ್' ಹಿಂಸೆ
ಕುಟುಂಬದ ಸಂಬಂಧಗಳನ್ನು ಹಾಳುಮಾಡುವ ಮತ್ತು ಮಾನಸಿಕವಾಗಿ ಕುಗ್ಗಿಸುವ ಉದ್ದೇಶದಿಂದ ಈ ಲೈಂಗಿಕ ಹಿಂಸೆಯನ್ನು ಅಸ್ತ್ರವಾಗಿ ಬಳಸಲಾಗಿದೆ. ಒತ್ತೆಸೆರೆಯಲ್ಲಿದ್ದವರನ್ನು ಬಲವಂತದ ವಿವಾಹಕ್ಕೆ ಬೆದರಿಸುವುದು ಮತ್ತು ಸಂಬಂಧಿಕರ ಮುಂದೆಯೇ ಲೈಂಗಿಕ ಕೃತ್ಯ, ಅಷ್ಟೇ ಅಲ್ಲದೇ ಸಂಬಂಧಿಕರ ಜೊತೆಗೇ ಸೆಕ್ಸ್ ಮಾಡುವಂತೆ ಒತ್ತಾಯಿಸಿದ ಘಟನೆಗಳು ವರದಿಯಾಗಿವೆ.
ಸಾಕ್ಷಿಗಳ ಹೇಳಿಕೆ
ನೋವಾ ಸಂಗೀತ ಉತ್ಸವದಲ್ಲಿ ಬದುಕುಳಿದ ರಾಜ್ ಕೊಹೆನ್ ಎಂಬುವವರು ನೀಡಿದ ಸಾಕ್ಷ್ಯದ ಪ್ರಕಾರ, "ಮಹಿಳೆಯೊಬ್ಬಳನ್ನು ವಾಹನದಿಂದ ಎಳೆದು ತಂದು, ಆಕೆಯ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಲಾಯಿತು. ನಂತರ ಆಕೆಯನ್ನು ಚಾಕುವಿನಿಂದ ಇರಿದು ಸಾಯಿಸಿದರು. ಸಾವಿನ ನಂತರವೂ ಆಕೆಯ ಮೇಲೆ ಅತ್ಯಾಚಾರ ಮುಂದುವರಿಸಲಾಯಿತು" ಎಂದು ತಿಳಿಸಿದ್ದಾರೆ.
ಒತ್ತೆಸೆರೆಯಲ್ಲೂ ಮುಂದುವರಿದ ದೌರ್ಜನ್ಯ
ಲೈಂಗಿಕ ಹಿಂಸೆ ಕೇವಲ ಅಕ್ಟೋಬರ್ 7ರ ದಾಳಿಗೆ ಸೀಮಿತವಾಗಿರಲಿಲ್ಲ. ಗಾಜಾದ ಸುರಂಗಗಳಲ್ಲಿ ಮತ್ತು ರಹಸ್ಯ ತಾಣಗಳಲ್ಲಿ ಒತ್ತೆಸೆರೆಯಲ್ಲಿದ್ದ ಇಸ್ರೇಲಿಗರ ಮೇಲೂ ತಿಂಗಳುಗಟ್ಟಲೆ ದೌರ್ಜನ್ಯ ಮುಂದುವರಿದಿದೆ ಎಂದು ವರದಿ ಹೇಳಿದೆ. ಪುರುಷರು, ಬಾಲಕರು ಮತ್ತು ವೃದ್ಧರನ್ನೂ ಈ ಲೈಂಗಿಕ ಹಿಂಸೆಯಿಂದ ಹೊರತುಪಡಿಸಿರಲಿಲ್ಲ.
ಯುದ್ಧಾಪರಾಧ ಮತ್ತು ನರಮೇಧ
ಈ ವರದಿಯ ಸಂಸ್ಥಾಪಕಿ ಡಾ. ಕೊಚಾವ್ ಎಲ್ಕಾಯಂ-ಲೆವಿ ಅವರ ಪ್ರಕಾರ, "ಲೈಂಗಿಕ ಹಿಂಸೆಯು ಒಂದು ಯೋಜಿತ ತಂತ್ರವಾಗಿತ್ತು. ಇದನ್ನು ಅತ್ಯಂತ ಕ್ರೂರವಾಗಿ ಜಾರಿಗೆ ತರಲಾಗಿದೆ." ಈ ಕೃತ್ಯಗಳನ್ನು 'ಯುದ್ಧಾಪರಾಧ', 'ಮಾನವೀಯತೆಯ ವಿರುದ್ಧದ ಅಪರಾಧ' ಮತ್ತು 'ನರಮೇಧ' ಎಂದು ಆಯೋಗವು ತೀರ್ಮಾನಿಸಿದೆ.

