
Iran- US War: ಸಣ್ಣ ತಪ್ಪು ಮಾಡಿದರೂ ತಿರುಗೇಟು: ಅಮೆರಿಕಕ್ಕೆ ಇರಾನ್ ಎಚ್ಚರಿಕೆ
ಶಾಂತಿ ಹಾಗೂ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ನಡುವೆಯೂ ಯಾವುದೇ ಪ್ರಚೋದನೆಗೆ ತಕ್ಕ ಪ್ರತ್ಯುತ್ತರ ನೀಡಲು ಇರಾನ್ ಪಡೆಗಳು ಯುದ್ಧಸನ್ನದ್ಧವಾಗಿವೆ ಎಂದು ಸ್ಪೀಕರ್ ಮೊಹಮ್ಮದ್ ಬಘೇರ್ ಗಾಲಿಬಾಫ್ ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಹಾಗೂ ಸೇನಾ ಬಿಕ್ಕಟ್ಟು ದಿನೇದಿನೇ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಗಾಲಿಬಾಫ್ ಶತ್ರು ಪಡೆಗಳಿಗೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.
ಯುದ್ಧಭೂಮಿಯಲ್ಲಿ ಇರಾನ್ ಈಗಾಗಲೇ ವಿಜಯಶಾಲಿಯಾಗಿದೆ ಎಂದು ಬಣ್ಣಿಸಿರುವ ಅವರು, ಮಾತುಕತೆಗೂ ನಾವು ಸಿದ್ಧ, ಆದರೆ ಎದುರಾಳಿಗಳು ಸಣ್ಣ ತಪ್ಪು ಮಾಡಿದರೂ ಪೂರ್ಣ ಪ್ರಮಾಣದ ಮಿಲಿಟರಿ ತಿರುಗೇಟು ನೀಡಲಿದ್ದೇವೆ ಎಂದು ಗುಡುಗಿದ್ದಾರೆ.
ಭಾನುವಾರ ದೂರದರ್ಶನದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಗಾಲಿಬಾಫ್, ಅಮೆರಿಕದೊಂದಿಗಿನ ಪ್ರಸ್ತುತ ಉದ್ವಿಗ್ನತೆಯ ನಡುವೆಯೂ ಇರಾನ್ 'ಉಭಯ-ಮಾರ್ಗ'ದ ಕಾರ್ಯತಂತ್ರವನ್ನು ಅನುಸರಿಸುತ್ತಿದೆ ಎಂಬ ಸ್ಪಷ್ಟ ಸುಳಿವು ನೀಡಿದರು. ಟೆಹ್ರಾನ್ ರಾಜತಾಂತ್ರಿಕ ಮಾತುಕತೆಗಳಿಗೆ ಸದಾ ಮುಕ್ತವಾಗಿದೆ. ಆದರೆ, ಇದೇ ವೇಳೆ ದೇಶದ ಸೇನಾ ಪಡೆಗಳು ಅತ್ಯುನ್ನತ ಕಟ್ಟೆಚ್ಚರದಲ್ಲಿವೆ. ಯುದ್ಧಭೂಮಿಯಲ್ಲಿ ಈಗಾಗಲೇ ಮೇಲುಗೈ ಸಾಧಿಸಿರುವ ನಾವು, ಈಗ ಅತ್ಯಂತ ಬಲಿಷ್ಠ ಸ್ಥಾನದಲ್ಲಿ ನಿಂತು ಮಾತುಕತೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಣ್ಣ ಪ್ರಚೋದನೆಗೂ ಕಾದಿದೆ ಮಾರಕ ಪ್ರತ್ಯುತ್ತರ
ಶಾಂತಿ ಹಾಗೂ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ನಡುವೆಯೂ ಯಾವುದೇ ಪ್ರಚೋದನೆಗೆ ತಕ್ಕ ಪ್ರತ್ಯುತ್ತರ ನೀಡಲು ಇರಾನ್ ಪಡೆಗಳು ಯುದ್ಧಸನ್ನದ್ಧವಾಗಿವೆ ಎಂಬುದನ್ನು ಅವರು ಎತ್ತಿತೋರಿಸಿದರು. ಸಂಭವನೀಯ ದಾಳಿಗಳ ಬಗ್ಗೆ ತೀಕ್ಷ್ಣ ಎಚ್ಚರಿಕೆ ನೀಡಿದ ಅವರು, "ನಾವು ಎದುರಾಳಿಗಳನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಒಂದು ವೇಳೆ ಅವರು ಅತ್ಯಂತ ಸಣ್ಣ ತಪ್ಪು ಮಾಡಿದರೂ, ನಾವು ನಮ್ಮ ಸಂಪೂರ್ಣ ಶಕ್ತಿಯೊಂದಿಗೆ ಮಾರಕ ಪ್ರತ್ಯುತ್ತರ ನೀಡುತ್ತೇವೆ" ಎಂದು ಅಮೆರಿಕ ಸೇರಿದಂತೆ ಶತ್ರು ರಾಷ್ಟ್ರಗಳಿಗೆ ನೇರ ಸಂದೇಶ ರವಾನಿಸಿದರು. ಇರಾನ್‌ನ ಈ ಕಠಿಣ ನಿಲುವು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಇನ್ನೂ ಚದುರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

