ಇರಾನ್ ಸುಪ್ರೀಂ ಲೀಡರ್ ಮುಖಕ್ಕೆ ಗಂಭೀರ ಸುಟ್ಟ ಗಾಯ; ಕೃತಕ ಕಾಲು ಅಳವಡಿಕೆ, ಪ್ಲಾಸ್ಟಿಕ್ ಸರ್ಜರಿ ಸಾಧ್ಯತೆ
x

ಇರಾನ್ ಸುಪ್ರೀಂ ಲೀಡರ್ ಮುಖಕ್ಕೆ ಗಂಭೀರ ಸುಟ್ಟ ಗಾಯ; ಕೃತಕ ಕಾಲು ಅಳವಡಿಕೆ, ಪ್ಲಾಸ್ಟಿಕ್ ಸರ್ಜರಿ ಸಾಧ್ಯತೆ

ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಖಮೇನಿ ಅವರ ದೇಹದ ಅನೇಕ ಭಾಗಗಳಿಗೆ ಹಾನಿಯಾಗಿದೆ. ಅವರ ಒಂದು ಕಾಲಿಗೆ ಈಗಾಗಲೇ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.


Click the Play button to hear this message in audio format

ತಮ್ಮ ತಂದೆಯ ಹತ್ಯೆಯ ನಂತರ ಇರಾನ್‌ನ ಸುಪ್ರೀಂ ಲೀಡರ್ ಆಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಅಮೆರಿಕ ಹಾಗೂ ಇಸ್ರೇಲ್ ಪಡೆಗಳ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅವರು, ಇದೀಗ ರಹಸ್ಯ ಸ್ಥಳವೊಂದರಿಂದ ಆಡಳಿತ ನಡೆಸುತ್ತಿದ್ದಾರೆ. ಅವರ ಮುಖ, ತುಟಿಗಳು ತೀವ್ರವಾಗಿ ಸುಟ್ಟುಹೋಗಿದ್ದು, ಭವಿಷ್ಯದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿದೆ ಎಂದು ಅಮೆರಿಕದ 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಖಮೇನಿ ಅವರ ದೇಹದ ಅನೇಕ ಭಾಗಗಳಿಗೆ ಹಾನಿಯಾಗಿದೆ. ಅವರ ಒಂದು ಕಾಲಿಗೆ ಈಗಾಗಲೇ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಸದ್ಯ ಕೃತಕ ಕಾಲು ಅಳವಡಿಕೆಗೆ ಕಾಯಲಾಗುತ್ತಿದೆ. ಹಾಗೆಯೇ ಒಂದು ಕೈಗೂ ಶಸ್ತ್ರಚಿಕಿತ್ಸೆ ನಡೆದಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ತುಟಿ ಹಾಗೂ ಮುಖ ತೀವ್ರವಾಗಿ ಸುಟ್ಟುಹೋಗಿರುವ ಕಾರಣ ಅವರಿಗೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುವ ಸಾಧ್ಯತೆ ಇದೆ ಎಂದು ಇರಾನ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಹಸ್ಯ ಸ್ಥಳದಲ್ಲಿ ಚಿಕಿತ್ಸೆ: ಹಸ್ತಪ್ರತಿಗಳ ಮೂಲಕ ಸಂದೇಶ

ದಾಳಿಯ ನಂತರ ಮೊಜ್ತಬಾ ಖಮೇನಿ ಅವರು ಯಾವುದೇ ಸಾರ್ವಜನಿಕ ಸಭೆ, ವಿಡಿಯೋ ಅಥವಾ ಆಡಿಯೋ ಸಂದೇಶದ ಮೂಲಕ ಕಾಣಿಸಿಕೊಂಡಿಲ್ಲ. ತಾವು ದುರ್ಬಲರಾಗಿದ್ದೇವೆ ಎಂದು ಜಗತ್ತಿಗೆ ತೋರಿಸುವುದು ಅವರಿಗೆ ಇಷ್ಟವಿಲ್ಲ. ಹೀಗಾಗಿ, ಅತ್ಯಂತ ರಹಸ್ಯ ಸ್ಥಳದಲ್ಲಿ ಅಡಗಿಕೊಂಡೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಯಾವುದೇ ಸಂದೇಶ ಕಳುಹಿಸಬೇಕಾದರೂ ಹಸ್ತಪ್ರತಿ ಮೂಲಕ ಬರೆದು ಲಕೋಟೆಯಲ್ಲಿ ಮುಚ್ಚಿ, ಕಾರು ಅಥವಾ ಬೈಕ್ ಮೂಲಕ ಕಳುಹಿಸಲಾಗುತ್ತದೆ. ಅದೇ ಮಾದರಿಯಲ್ಲಿಯೇ ಖಮೇನಿ ತಮ್ಮ ಆದೇಶಗಳನ್ನು ರವಾನಿಸುತ್ತಿದ್ದಾರೆ. ಇಸ್ರೇಲ್ ಪಡೆಗಳು ತಮ್ಮ ಜಾಡು ಹಿಡಿದು ದಾಳಿ ಮಾಡಬಹುದು ಎಂಬ ಭಯದಿಂದ ಇರಾನ್‌ನ ಹಿರಿಯ ಅಧಿಕಾರಿಗಳೂ ಕೂಡ ಅವರನ್ನು ಭೇಟಿಯಾಗಲು ಹಿಂದೇಟು ಹಾಕುತ್ತಿದ್ದಾರೆ.

ಸೇನಾ ಕಮಾಂಡರ್‌ಗಳ ಕೈಗೆ ಇರಾನ್ ಆಡಳಿತ!

ಸುಪ್ರೀಂ ಲೀಡರ್ ಅವರ ಆರೋಗ್ಯ ಗಂಭೀರವಾಗಿರುವುದರಿಂದ ಹಾಗೂ ಸಂಪರ್ಕ ಕಷ್ಟಕರವಾಗಿರುವುದರಿಂದ ಇರಾನ್‌ನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿದೆ. ಇದೀಗ ಯುದ್ಧ, ರಾಜತಾಂತ್ರಿಕತೆ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಇರಾನ್‌ನ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್' (IRGC) ನ ಹಿರಿಯ ಸೇನಾ ಕಮಾಂಡರ್‌ಗಳೇ ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ತಂದೆಯ ಕಾಲದಲ್ಲಿ ಅಧಿಕಾರವೆಲ್ಲವೂ ಒಬ್ಬರ ಕೈಯಲ್ಲೇ ಕೇಂದ್ರೀಕೃತವಾಗಿತ್ತು. ಆದರೆ ಈಗ ಸೇನಾಪಡೆಗಳೇ ಇರಾನ್‌ನ ವಾಸ್ತವಿಕ ಆಡಳಿತಗಾರರಾಗಿದ್ದು, ನಾಗರಿಕ ನಾಯಕರಾದ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರನ್ನು ಪ್ರಮುಖ ನಿರ್ಧಾರಗಳಿಂದ ಬದಿಗೆ ಸರಿಸಲಾಗಿದೆ.

Read More
Next Story