
ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ ಭಾರಿ ಸಿದ್ಧತೆ ನಡೆಸಿದೆ.
ಖಮೇನಿ ಅಂತ್ಯಕ್ರಿಯೆ: ಭಾರತದ ಹಿಂದೂ, ಜೈನ ಧರ್ಮಗುರುಗಳು, ರಾಜಕೀಯ ನಾಯಕರಿಗೆ ಕರೆ
ಕೇಂದ್ರ ಸರ್ಕಾರದ ಅಧಿಕೃತ ಪ್ರತಿನಿಧಿಗಳಾಗಿ ಬಿಹಾರದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಅವರು ಭಾಗವಹಿಸಲಿದ್ದಾರೆ.
ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗೆ ಇಸ್ಲಾಮಿಕ್ ರಾಷ್ಟ್ರ ಇರಾನ್ ಭಾರಿ ಸಿದ್ಧತೆ ನಡೆಸುತ್ತಿದ್ದು, ಆರು ದಿನಗಳ ಕಾಲ ನಡೆಯಲಿರುವ ಈ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಭಾರತದ ಪ್ರಮುಖ ರಾಜಕೀಯ ಮತ್ತು ಧಾರ್ಮಿಕ ನಾಯಕರಿಗೆ ಅಧಿಕೃತ ಆಹ್ವಾನ ಕಳುಹಿಸಿದೆ. ಜು. 4 ರಿಂದ ಟೆಹ್ರಾನ್‌ನಲ್ಲಿ ಪ್ರಾರಂಭವಾಗಲಿರುವ ಈ ಸಮಾರಂಭಗಳು, ಜು. 9 ರಂದು ಮಶಾದ್‌ನಲ್ಲಿ ಖಮೇನಿ ಅವರ ದಫನ್ ಪ್ರಕ್ರಿಯೆಯೊಂದಿಗೆ ಮುಕ್ತಾಯಗೊಳ್ಳಲಿವೆ.
ಪ್ರಧಾನಿ ಮೋದಿ ಗೈರು
ಇರಾನ್ ಅಧ್ಯಕ್ಷ ಮಸೌದ್ ಪೆಜೆಶಿಕಿಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಯಕ್ತಿಕವಾಗಿ ಆಹ್ವಾನ ಕಳುಹಿಸಿದ್ದರು. ಆದರೆ, ಮುಂಚಿತವಾಗಿ ನಿಗದಿಯಾಗಿದ್ದ ಇತರ ಪ್ರಮುಖ ಕಾರ್ಯಕ್ರಮಗಳ ಬದ್ಧತೆಯಿಂದಾಗಿ ಪ್ರಧಾನಿ ಮೋದಿ ಈ ಕಾರ್ಯಕ್ರಮದಿಂದ ಹೊರಗುಳಿಯಲಿದ್ದಾರೆ. ಭಾರತ ಸರ್ಕಾರದ ಅಧಿಕೃತ ಪ್ರತಿನಿಧಿಗಳಾಗಿ ಬಿಹಾರದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ಅವರು ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕಾಂಗ್ರೆಸ್ ಪರವಾಗಿ ಸಲ್ಮಾನ್ ಖುರ್ಷಿದ್ ಇರಾನ್‌ಗೆ ಪ್ರವಾಸ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಹಿರಿಯ ನಾಯಕರಾದ ಸಲ್ಮಾನ್ ಖುರ್ಷಿದ್ ಮತ್ತು ಪವನ್ ಖೇರಾ ಅವರಿಗೂ ಇರಾನ್‌ನಿಂದ ಆಹ್ವಾನ ಬಂದಿತ್ತು. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರ ಪರವಾಗಿ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಪಕ್ಷವನ್ನು ಪ್ರತಿನಿಧಿಸುತ್ತಿದ್ದು, ಈಗಾಗಲೇ ಗುರುವಾರ(ಜು.2) ವಿಶೇಷ ವಿಮಾನದ ಮೂಲಕ ಇರಾನ್‌ಗೆ ತೆರಳಿದ್ದಾರೆ.
ಮೆಹಬೂಬಾ ಮುಫ್ತಿ ಹಾಗೂ ಶಿಯಾ ಮುಖಂಡರ ಭೇಟಿ
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಗುರುವಾರವೇ ಟೆಹ್ರಾನ್‌ಗೆ ತೆರಳಿದ್ದಾರೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರಾಂತ್ಯದಿಂದ ಆಹ್ವಾನ ಪಡೆದ ಏಕೈಕ ಶಿಯಾ ರಾಜಕಾರಣಿ ಇವರಾಗಿದ್ದಾರೆ. ಇವರೊಂದಿಗೆ ಲಡಾಖ್ ಸಂಸದ ಮೊಹಮ್ಮದ್ ಹನೀಫಾ, ಲಡಾಖ್ ಕಾಂಗ್ರೆಸ್ ಅಧ್ಯಕ್ಷ ಅಸ್ಗರ್ ಅಲಿ ಕರಬಾಲಿ, ಶಿಯಾ ಧಾರ್ಮಿಕ ಮುಖಂಡರಾದ ಇಮ್ರಾನ್ ರೆಜಾ ಅನ್ಸಾರಿ, ಅಗಾ ಸೈಯದ್ ಹಸನ್ ಅಲ್-ಮೌಸಾವಿ ಹಾಗೂ ಸಜ್ಜದ್ ಕಾರ್ಗಿಲಿ ಅವರಿಗೂ ಆಹ್ವಾನ ನೀಡಲಾಗಿದೆ. ಪ್ರಸ್ತುತ ವಾಣಿಜ್ಯ ವಿಮಾನಗಳ ಸಂಚಾರ ಸ್ಥಗಿತಗೊಂಡಿರುವುದರಿಂದ, ಅತಿಥಿಗಳನ್ನು ಕರೆತರಲು ಇರಾನ್ ಸರ್ಕಾರವೇ ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ.
ಹಿಂದೂ ಮತ್ತು ಜೈನ ಧರ್ಮಗುರುಗಳಿಗೂ ಆಹ್ವಾನ
ರಾಜತಾಂತ್ರಿಕ ಹಾಗೂ ಧಾರ್ಮಿಕ ಸೌಹಾರ್ದತೆಯ ಭಾಗವಾಗಿ ಭಾರತದ ಪ್ರಮುಖ ಹಿಂದೂ ಮತ್ತು ಜೈನ ನಾಯಕರನ್ನೂ ಇರಾನ್ ಆಹ್ವಾನಿಸಿದೆ. ಬಿಜೆಪಿಯಿಂದ ಅಧ್ಯಕ್ಷ ನಿತಿನ್ ನಬಿನ್ ಪಾಲ್ಗೊಳ್ಳುತ್ತಿದ್ದಾರೆ. ಇದರೊಂದಿಗೆ ಶ್ರೀ ರವಿಶಂಕರ್ ಅವರ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯ ಪ್ರತಿನಿಧಿಗಳು, ಬ್ರಹ್ಮಚಾರಿ ಪ್ರಜ್ಞಾಚೈತನ್ಯ, ಗೌತಮ್ ವಿಗ್ ಹಾಗೂ ಅಹಿಂಸಾ ವಿಶ್ವ ಭಾರತಿಯ ಸ್ಥಾಪಕರಾದ ಜೈನ ಸನ್ಯಾಸಿ ಆಚಾರ್ಯ ಲೋಕೇಶ್ ಮುನಿ ಅವರು ಇರಾನ್ ತಲುಪಿದ್ದಾರೆ.
ಕಳೆದ ಮೂರು ದಶಕಗಳಿಂದ ಇರಾನ್‌ನ್ನು ಮುನ್ನಡೆಸಿದ್ದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಫೆ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವಾಯುದಾಳಿಯಲ್ಲಿ ಮೃತಪಟ್ಟಿದ್ದರು. ಮಾರ್ಚ್ ತಿಂಗಳಲ್ಲೇ ಅಂತ್ಯಕ್ರಿಯೆ ನಡೆಸಲು ಇರಾನ್ ಯೋಜಿಸಿತ್ತಾದರೂ, ಅಮೆರಿಕದೊಂದಿಗಿನ ಯುದ್ಧದ ಉಲ್ಬಣದಿಂದಾಗಿ ಅದನ್ನು ಮುಂದೂಡಲಾಗಿತ್ತು. ಇದೀಗ ಜು. 4 ರಿಂದ 9 ರವರೆಗೆ ಇರಾನ್‌ನ ವಿವಿಧ ನಗರಗಳಲ್ಲಿ ಬೃಹತ್ ಶೋಕ ಸಭೆ ಹಾಗೂ ಅಂತ್ಯಕ್ರಿಯೆ ಜರುಗಲಿದೆ.

