
'ಒಮ್ಮೆ ಭಾರತಕ್ಕೆ ಬಂದು ನೋಡಿ': ಭಾರತವನ್ನು 'ನರಕದ ಕೂಪ' ಎಂದ ಟ್ರಂಪ್‌ಗೆ ಇರಾನ್ ತಿರುಗೇಟು
ಹೈದರಾಬಾದ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯು ಸಹ ಟ್ವೀಟ್ ಮಾಡಿದ್ದು, "ಭಾರತ ಮತ್ತು ಚೀನಾ ದೇಶಗಳು ನಾಗರಿಕತೆಯ ತೊಟ್ಟಿಲುಗಳು ಎಂದು ಬಣ್ಣಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜನ್ಮದತ್ತ ಪೌರತ್ವ ಕಾನೂನುಗಳ ಕುರಿತು ಭಾರತ ಮತ್ತು ಚೀನಾವನ್ನು 'ನರಕದ ಕೂಪಗಳು' ಎಂದು ಉಲ್ಲೇಖಿಸಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಅನ್ನು ಬೆಂಬಲಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಟ್ರಂಪ್ ಅವರ ಈ ಕೀಳುಮಟ್ಟದ ಅಭಿರುಚಿಯ ಹೇಳಿಕೆಗೆ ಭಾರತ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಇರಾನ್ ಕೂಡ ಈ ವಿವಾದಕ್ಕೆ ಎಂಟ್ರಿಯಾಗಿದ್ದು, ಟ್ರಂಪ್‌ಗೆ 'ಸಾಂಸ್ಕೃತಿಕ ನಿರ್ವಿಷೀಕರಣ'ದ ಅಗತ್ಯವಿದೆ ಎಂದು ಲೇವಡಿ ಮಾಡಿದೆ.
ಮುಂಬೈನಲ್ಲಿರುವ ಇರಾನ್ ರಾಯಭಾರ ಕಚೇರಿಯು ಟ್ರಂಪ್ ಹೇಳಿಕೆಯನ್ನು ಖಂಡಿಸಿ 'ಎಕ್ಸ್' (ಟ್ವಿಟರ್) ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಮಹಾರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಮತ್ತು ಭೌಗೋಳಿಕ ಪರಂಪರೆಯನ್ನು ಬಿಂಬಿಸುವ ಸುಂದರ ವಿಡಿಯೋವೊಂದನ್ನು ತನ್ನ ಪೋಸ್ಟ್ ಜೊತೆ ಹಂಚಿಕೊಂಡಿರುವ ಇರಾನ್, "ಬಹುಶಃ ಯಾರಾದರೂ ಶ್ರೀಮಾನ್ ಟ್ರಂಪ್ ಅವರಿಗೆ ಹಿಂದಿರುಗಿ ಹೋಗದಂತೆ ಸಾಂಸ್ಕೃತಿಕ ಡಿಟಾಕ್ಸ್‌ಗೆ ಟಿಕೆಟ್ ಬುಕ್ ಮಾಡಬೇಕು. ಇದರಿಂದ ಅವರ ಅನಗತ್ಯ ಹಾಗೂ 'ಬಕ್ವಾಸ್' (ಅಸಂಬದ್ಧ ಮಾತು) ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಬಹುದು. ಕಭಿ ಇಂಡಿಯಾ ಆ ಕೆ ದೇಕೋ, ಫಿರ್ ಬೋಲ್ನಾ (ಒಮ್ಮೆ ಭಾರತಕ್ಕೆ ಬಂದು ನೋಡಿ, ಆಮೇಲೆ ಮಾತನಾಡಿ)" ಎಂದು ಅಮೆರಿಕ ಅಧ್ಯಕ್ಷರಿಗೆ ಚಾಟಿ ಬೀಸಿದೆ.
ಹೈದರಾಬಾದ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯು ಸಹ ಟ್ವೀಟ್ ಮಾಡಿದ್ದು, "ಭಾರತ ಮತ್ತು ಚೀನಾ ದೇಶಗಳು ನಾಗರಿಕತೆಯ ತೊಟ್ಟಿಲುಗಳು. ಆದರೆ, ಯುದ್ಧ-ಅಪರಾಧಿ ಅಧ್ಯಕ್ಷರೊಬ್ಬರು ಇರಾನ್‌ನಲ್ಲಿ ನಾಗರಿಕತೆಯನ್ನು ನಾಶಮಾಡುವುದಾಗಿ ಬೆದರಿಕೆ ಹಾಕಿದ್ದಾರಲ್ಲ, ವಾಸ್ತವದಲ್ಲಿ ಅದೇ ನಿಜವಾದ ನರಕದ ಕೂಪ" ಎಂದು ಕಿಡಿಕಾರಿದೆ.
ಭಾರತ ಸರ್ಕಾರದ ಪ್ರತಿಕ್ರಿಯೆ ಏನು?
ಟ್ರಂಪ್ ಹಂಚಿಕೊಂಡಿರುವ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಇದೊಂದು ಅಸಂಬದ್ಧ, ಅಸಮರ್ಥನೀಯ ಮತ್ತು ಕೀಳು ಅಭಿರುಚಿಯ ಹೇಳಿಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಈ ಹೇಳಿಕೆಗಳು ಖಂಡಿತವಾಗಿಯೂ ಸುದೀರ್ಘ ಕಾಲದಿಂದ ಪರಸ್ಪರ ಗೌರವ ಹಾಗೂ ಹಂಚಿಕೆಯ ಹಿತಾಸಕ್ತಿಗಳ ಆಧಾರದ ಮೇಲೆ ಬೆಳೆದುಬಂದಿರುವ ಭಾರತ-ಯುಎಸ್ ಸಂಬಂಧದ ವಾಸ್ತವತೆಯನ್ನು ಪ್ರತಿಬಿಂಬಿಸುವುದಿಲ್ಲ" ಎಂದು ಟ್ರಂಪ್ ಹೆಸರನ್ನೆತ್ತದೆಯೇ ತಿರುಗೇಟು ನೀಡಿದ್ದಾರೆ.
ಟ್ರಂಪ್ ಪೋಸ್ಟ್‌ನಲ್ಲೇನಿತ್ತು?
ಅಮೆರಿಕದ ಸಂಪ್ರದಾಯವಾದಿ ರೇಡಿಯೋ ನಿರೂಪಕ ಹಾಗೂ ರಾಜಕೀಯ ವಿಶ್ಲೇಷಕ ಮೈಕೆಲ್ ಸ್ಯಾವೇಜ್ ಅವರ ಪಾಡ್‌ಕಾಸ್ಟ್ ತುಣುಕೊಂದನ್ನು ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ತಮ್ಮ 'ಟ್ರುತ್ ಸೋಷಿಯಲ್' ಖಾತೆಯಲ್ಲಿ ಮರುಹಂಚಿಕೆ ಮಾಡಿದ್ದರು. ಅಮೆರಿಕದ ಜನ್ಮದತ್ತ ಪೌರತ್ವ ಕಾನೂನುಗಳಲ್ಲಿನ ಬದಲಾವಣೆಗಳಿಗೆ ಆಗ್ರಹಿಸುತ್ತಾ ಜನಾಂಗೀಯ ನಿಂದನೆ ಮಾಡಿದ್ದ ಸ್ಯಾವೇಜ್, ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾದ ಕೆಲವು ರಾಷ್ಟ್ರಗಳನ್ನು 'ನರಕದ ಕೂಪಗಳು' ಎಂದು ಜರಿದಿದ್ದರು. "ಈ ಏಷ್ಯಾದ ರಾಷ್ಟ್ರಗಳ ಜನರು ತಮ್ಮ ಗರ್ಭಾವಸ್ಥೆಯ ಒಂಬತ್ತನೇ ತಿಂಗಳಲ್ಲಿ ಅಮೆರಿಕಕ್ಕೆ ಬಂದು ಮಗುವಿಗೆ ಜನ್ಮ ನೀಡುತ್ತಾರೆ. ಇಲ್ಲಿನ ಕಾನೂನು ಆ ಮಕ್ಕಳಿಗೆ ತಕ್ಷಣವೇ ಅಮೆರಿಕದ ಪೌರತ್ವವನ್ನು ಒದಗಿಸುತ್ತದೆ" ಎಂದು ಸ್ಯಾವೇಜ್ ಆರೋಪಿಸಿದ್ದರು. ಇದೇ ಹೇಳಿಕೆಯನ್ನು ಟ್ರಂಪ್ ಬೆಂಬಲಿಸಿರುವುದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.

