2 Indian ships fired upon in Strait of Hormuz; forced to return!
x

ಸಾಂದರ್ಭಿಕ ಚಿತ್ರ

ಹೊರ್ಮುಜ್ ಜಲಸಂಧಿಯಲ್ಲಿ 2 ಭಾರತೀಯ ಹಡಗುಗಳ ಮೇಲೆ ಇರಾನ್​​ ಗುಂಡಿನ ದಾಳಿ

ಇರಾನ್ ತನ್ನ ಜಂಟಿ ಸೇನಾ ಕಮಾಂಡ್, "ಹೊರ್ಮುಜ್ ಜಲಸಂಧಿಯ ನಿಯಂತ್ರಣ ಮರಳಿ ಹಿಂದಿನ ಸ್ಥಿತಿಗೆ ಬಂದಿದೆ" ಎಂದು ಘೋಷಿಸಿದೆ. ಅಮೆರಿಕ ದಿಗ್ಬಂಧನ ಮುಂದುವರಿದರೆ ಜಲಸಂಧಿ ತಡೆ ಮುಂದುವರಿಸುವ ಎಚ್ಚರಿಕೆ ನೀಡಿದೆ.


Click the Play button to hear this message in audio format

ಭಾರತೀಯ ಸೂಪರ್‌ಟ್ಯಾಂಕರ್ ಸೇರಿದಂತೆ ಎರಡು ಭಾರತೀಯ ಹಡಗುಗಳ ಮೇಲೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಗನ್‌ಬೋಟ್‌ಗಳು ಗುಂಡು ಹಾರಿಸಿದ್ದು, ಹೊರ್ಮುಜ್ ಜಲಸಂಧಿ ದಾಟಲು ಯತ್ನಿಸಿದ್ದ ಹಡಗುಗಳು ಹಿಂದಿರುಗುವಂತಾಗಿದೆ.

ಶನಿವಾರ (ಏಪ್ರಿಲ್ 18) ಎರಡು ಭಾರತೀಯ ತ್ವರಿತ ಸಾರಿಗೆ ಹಡಗುಗಳು ಹೊರ್ಮುಜ್ ಜಲಸಂಧಿ ಮೂಲಕ ಹಾದುಹೋಗಲು ಯತ್ನಿಸಿದಾಗ, ಇರಾನ್‌ನ ಐಆರ್​​ಜಿಡಿ ಗನ್‌ಬೋಟ್‌ಗಳು ಗುಂಡು ಹಾರಿಸಿ ಹಿಂದಿರುಗಿಸಿದವು. ಇದನ್ನು ಹಡಗು ಟ್ರ್ಯಾಕಿಂಗ್ ಸಂಸ್ಥೆ ಟ್ಯಾಂಕರ್​ ಟ್ರ್ಯಾಕರ್​ ದೃಢಪಡಿಸಿದೆ. ಸುಮಾರು 20 ಲಕ್ಷ ಬ್ಯಾರೆಲ್ ಇರಾಕ್ ತೈಲ ಸಾಗಿಸುತ್ತಿದ್ದ ಭಾರತೀಯ ಸೂಪರ್‌ಟ್ಯಾಂಕರ್ ಮತ್ತು ಒಂದು ಕಂಟೇನರ್ ಹಡಗು ಕೂಡ ಗುಂಡಿಗೆ ತುತ್ತಾಗಿವೆ ಎಂದು ಮಾರಿಟೈಮ್ ಭದ್ರತಾ ಮೂಲಗಳು ತಿಳಿಸಿವೆ. ಕ್ವೇಶ್ಮ್ ಮತ್ತು ಲಾರಕ್ ದ್ವೀಪಗಳ ನಡುವಿನ ಜಲಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುಕೆ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಕೇಂದ್ರವೂ ಘಟನೆಯನ್ನು ಖಚಿತಪಡಿಸಿದೆ.

ಸಿಬ್ಬಂದಿ ಸುರಕ್ಷಿತ; ರಾಜತಾಂತ್ರಿಕ ಕ್ರಮ

ಭಾರತ ಸರ್ಕಾರದ ಮೂಲಗಳ ಪ್ರಕಾರ, ದಾಳಿಗೊಳಗಾದ ಹಡಗುಗಳ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಗಾಯ ಅಥವಾ ಹಡಗಿಗೆ ಹಾನಿಯಾದ ವರದಿ ಇಲ್ಲ. ಭಾರತ ಸರ್ಕಾರವು ಈ ಘಟನೆ ವಿರೋಧಿಸಿ ಔಪಚಾರಿಕ ಪ್ರತಿಭಟನೆ ದಾಖಲಿಸಲು ಇರಾನ್ ರಾಯಭಾರಿಯನ್ನು ಕರೆದಿದ್ದು, ಶಿಪ್ಪಿಂಗ್ ಮಹಾನಿರ್ದೇಶನಾಲಯ ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇಡುತ್ತಿದೆ.

ಇರಾನ್ ತನ್ನ ಜಂಟಿ ಸೇನಾ ಕಮಾಂಡ್, "ಹೊರ್ಮುಜ್ ಜಲಸಂಧಿಯ ನಿಯಂತ್ರಣ ಮರಳಿ ಹಿಂದಿನ ಸ್ಥಿತಿಗೆ ಬಂದಿದೆ" ಎಂದು ಘೋಷಿಸಿದೆ. ಅಮೆರಿಕ ದಿಗ್ಬಂಧನ ಮುಂದುವರಿದರೆ ಜಲಸಂಧಿ ತಡೆ ಮುಂದುವರಿಸುವ ಎಚ್ಚರಿಕೆ ನೀಡಿದೆ. ಇದಕ್ಕೂ ಮೊದಲು "ಸದ್ಭಾವ"ದ ಸಂಕೇತವಾಗಿ ಸೀಮಿತ ಹಾದಿಗೆ ಅನುಮತಿ ನೀಡಿದ್ದ ಇರಾನ್, ಈ ವ್ಯವಸ್ಥೆಯನ್ನು ತಕ್ಷಣ ಹಿಂತೆಗೆದುಕೊಂಡಿದ್ದು, ಎಲ್ಲ ಹಡಗುಗಳಿಗೂ ಇರಾನ್ ನೌಕಾ ಅನುಮತಿ ಮತ್ತು ಟೋಲ್ ಪಾವತಿ ಕಡ್ಡಾಯ ಎಂದು ಘೋಷಿಸಿದೆ. ವಿಎಚ್​​ಎಫ್​ ಪ್ರಸಾರದ ಮೂಲಕ "ಹೊರ್ಮುಜ್ ಜಲಸಂಧಿ ಮತ್ತೆ ಸಂಪೂರ್ಣ ಮುಚ್ಚಲ್ಪಟ್ಟಿದೆ. ಯಾವುದೇ ಬಗೆಯ, ಯಾವ ರಾಷ್ಟ್ರದ ಹಡಗಿಗೂ ಹಾದುಹೋಗಲು ಅನುಮತಿ ಇಲ್ಲ" ಎಂದು ಎಚ್ಚರಿಕೆ ನೀಡಲಾಗಿದೆ.

ಜಾಗತಿಕ ಇಂಧನ ಬಿಕ್ಕಟ್ಟಿನ ಭೀತಿ

ವಿಶ್ವದ ಒಟ್ಟು ತೈಲ ವ್ಯಾಪಾರದ ಸುಮಾರು ಐದನೇ ಒಂದರಷ್ಟು (20%) ಹಾದುಹೋಗುವ ಈ ಜಲಸಂಧಿ ಮೊದಲೇ ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಏಳು ವಾರಗಳ ಯುದ್ಧದ ಕೇಂದ್ರಬಿಂದುವಾಗಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಇಂಧನ ಸಂಪರ್ಕ ಸರಪಳಿ ಕಡಿತದ ಆತಂಕ ಹೆಚ್ಚಾಗಿದ್ದು, ಜಾಗತಿಕ ಶಿಪ್ಪಿಂಗ್ ಮಾರ್ಗಗಳಲ್ಲಿ ಅಸ್ಥಿರತೆ ಮತ್ತಷ್ಟು ಆಳವಾಗುವ ಆತಂಕ ವ್ಯಕ್ತವಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಪ್ರಿಲ್ 22ರ ಒಳಗೆ ಇರಾನ್ ಜೊತೆ ಒಪ್ಪಂದ ಆಗದಿದ್ದರೆ ಯುದ್ಧ ಮತ್ತೆ ಭುಗಿಲೇಳಬಹುದು ಎಂದು ಎಚ್ಚರಿಸಿದ್ದಾರೆ. ಇರಾನ್ ಸುಪ್ರೀಂ ಲೀಡರ್ ಮೊಜ್ತಬಾ ಖಮೆನಿ ಕೂಡ ತಮ್ಮ ನೌಕಾ ಸೇನೆ ಶತ್ರುಗಳಿಗೆ "ಹೊಸ ಕಹಿ ಸೋಲು" ತರಲು ಸಿದ್ಧ ಎಂದು ಗರ್ಜಿಸಿದ್ದಾರೆ.

Read More
Next Story