Iran Israel War Live Updates: ಒಂದೇ ಏಟಿಗೆ 48 ಇರಾನ್ ನಾಯಕರ ಅಂತ್ಯ: ಡೊನಾಲ್ಡ್ ಟ್ರಂಪ್
x
ಇರಾನ್‌-ಇಸ್ರೇಲ್‌ ಯುದ್ಧ

Iran Israel War Live Updates: "ಒಂದೇ ಏಟಿಗೆ 48 ಇರಾನ್ ನಾಯಕರ ಅಂತ್ಯ": ಡೊನಾಲ್ಡ್ ಟ್ರಂಪ್

ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ವಾಯುದಾಳಿಯಲ್ಲಿ ಹತ್ಯೆ. ಇರಾನ್‌ನಲ್ಲಿ ತುರ್ತು ಆಡಳಿತ ಮಂಡಳಿ ರಚನೆ. ಯುದ್ಧದ ಭೀತಿಯಲ್ಲಿ ಮಧ್ಯಪ್ರಾಚ್ಯ. ಕ್ಷಣ ಕ್ಷಣ ಮಾಹಿತಿ ಇಲ್ಲಿದೆ.


Click the Play button to hear this message in audio format

ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟೀ ವಾಯುದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ (Supreme Leader) ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಖಚಿತಪಡಿಸಿವೆ. ಈ ಬೆಳವಣಿಗೆಯ ಬೆನ್ನಲ್ಲೇ, ಹೊಸ ಪರಮೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ ದೇಶವನ್ನು ಆಳಲು ಇರಾನ್ ಮೂವರು ಸದಸ್ಯರ ಮಂಡಳಿಯನ್ನು ರಚಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿ ಸಾವನ್ನು ಖಚಿತಪಡಿಸಿದ್ದು, ಈ ಕ್ರಮವನ್ನು "ನ್ಯಾಯ" ಎಂದು ಬಣ್ಣಿಸಿದ್ದಾರೆ. ಇಸ್ರೇಲ್ ಸಹಯೋಗದೊಂದಿಗೆ ಸುಧಾರಿತ ಗುಪ್ತಚರ ವ್ಯವಸ್ಥೆಗಳನ್ನು ಬಳಸಿ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Live Updates

  • 1 March 2026 10:03 PM IST

    ಇರಾನ್ ಮೇಲೆ ಅಮೆರಿಕದ ಬಿ-2 ಸ್ಟೆಲ್ತ್ ಬಾಂಬರ್ ಅಟ್ಯಾಕ್: ಭೂಗತ ಕ್ಷಿಪಣಿ ನೆಲೆಗಳು ಧ್ವಂಸ!

    ಇರಾನ್ ಮೇಲಿನ ಇತ್ತೀಚಿನ ವಾಯುದಾಳಿಯಲ್ಲಿ ಅಮೆರಿಕದ ಮಿಲಿಟರಿಯು ನಾಲ್ಕು ಬಿ-2 ಸ್ಟೆಲ್ತ್ ಬಾಂಬರ್ (B-2 Stealth Bombers) ಯುದ್ಧವಿಮಾನಗಳನ್ನು ಬಳಸಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಯೊಬ್ಬರು ಫಾಕ್ಸ್ ನ್ಯೂಸ್‌ಗೆ (Fox News) ಖಚಿತಪಡಿಸಿದ್ದಾರೆ. ಅಮೆರಿಕದಿಂದಲೇ ನೇರವಾಗಿ ಹಾರಾಟ ನಡೆಸಿದ ಈ ನಾಲ್ಕು ಅತ್ಯಾಧುನಿಕ ವಿಮಾನಗಳು, ಇರಾನ್‌ನ ಭೂಗತ ಬ್ಯಾಲಿಸ್ಟಿಕ್ ಕ್ಷಿಪಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ಸುಮಾರು 2,000 ಪೌಂಡ್ ತೂಕದ ಡಜನ್‌ಗಟ್ಟಲೇ ಬಾಂಬ್‌ಗಳನ್ನು ಸುರಿಸಿವೆ. ಫ್ಲೈಟ್ ಟ್ರ್ಯಾಕಿಂಗ್ ಡೇಟಾವನ್ನು ವಿಶ್ಲೇಷಿಸಿದ ತಜ್ಞರು ಕೂಡ ಇರಾನ್ ಮೇಲಿನ ದಾಳಿಯಲ್ಲಿ ಈ ಬಿ-2 ಬಾಂಬರ್‌ಗಳನ್ನು ಬಳಸಲಾಗಿದೆ ಎಂದು ವರದಿ ಮಾಡಿದ್ದನ್ನು 'ದಿ ಟೈಮ್ಸ್ ಆಫ್ ಇಸ್ರೇಲ್' ಉಲ್ಲೇಖಿಸಿದೆ. ಈ ಸ್ಟೆಲ್ತ್ ಬಾಂಬರ್‌ಗಳು ಶತ್ರುಗಳ ರಾಡಾರ್‌ಗೆ ಸಿಗದೆ ಇರಾನ್‌ನ ಅತ್ಯಂತ ಸುರಕ್ಷಿತ ಭೂಗತ ಬಂಕರ್‌ಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿವೆ ಎಂದು ವರದಿಯಾಗಿದೆ.

  • 1 March 2026 9:49 PM IST

    "ಒಂದೇ ಏಟಿಗೆ 48 ಇರಾನ್ ನಾಯಕರ ಅಂತ್ಯ": ಡೊನಾಲ್ಡ್ ಟ್ರಂಪ್

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫಾಕ್ಸ್ ನ್ಯೂಸ್ (Fox News) ಜೊತೆ ಮಾತನಾಡುತ್ತಾ ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಜಂಟಿ ದಾಳಿಯ ಯಶಸ್ಸನ್ನು ಶ್ಲಾಘಿಸಿದ್ದು, ಈ ಕಾರ್ಯಾಚರಣೆಯಲ್ಲಿ ಒಟ್ಟು 48 ಇರಾನ್ ನಾಯಕರನ್ನು ಮಟ್ಟಹಾಕಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಈ ಕಾರ್ಯಾಚರಣೆಯು ನಿರೀಕ್ಷೆಗಿಂತ ಹೆಚ್ಚು ವೇಗವಾಗಿ ಮುನ್ನಡೆಯುತ್ತಿದ್ದು, ಒಂದೇ ಹೊಡೆತಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯ ನಾಯಕರು ಅಂತ್ಯವಾಗಿರುವುದನ್ನು ಯಾರೂ ನಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

  • 1 March 2026 8:26 PM IST

    ಖಮೇನಿ ಹತ್ಯೆ: ಅಮೆರಿಕ-ಇಸ್ರೇಲ್ ವಿರುದ್ಧ ಚೀನಾ ಆಕ್ರೋಶ

    ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಚೀನಾ ಬಲವಾಗಿ ಖಂಡಿಸಿದೆ. ಇದು ಇರಾನ್‌ನ ಸಾರ್ವಭೌಮತ್ವ ಮತ್ತು ಭದ್ರತೆಯ ಗಂಭೀರ ಉಲ್ಲಂಘನೆ ಎಂದು ಕರೆದಿರುವ ಚೀನಾ ವಿದೇಶಾಂಗ ಸಚಿವಾಲಯವು, ಅಮೆರಿಕ ಮತ್ತು ಇಸ್ರೇಲ್ ತಕ್ಷಣವೇ ಇರಾನ್ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

    ಈ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇರಾನ್‌ನಿಂದ ಹೆಚ್ಚಿನ ಪ್ರಮಾಣದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುವ ಚೀನಾ, ಈ ದಾಳಿಯು ವಿಶ್ವಸಂಸ್ಥೆಯ ಮೂಲಭೂತ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಕಿಡಿಕಾರಿದೆ. ಯುದ್ಧವನ್ನು ತಕ್ಷಣ ನಿಲ್ಲಿಸಿ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಜಂಟಿ ಪ್ರಯತ್ನ ನಡೆಸುವಂತೆ ಚೀನಾ ಜಾಗತಿಕ ಸಮುದಾಯಕ್ಕೆ ಕರೆ ನೀಡಿದೆ.

  • 1 March 2026 8:23 PM IST

    ಶಾಂತಿ ಕಾಪಾಡಲು ಎಲ್‌ಜಿ ಮನೋಜ್ ಸಿನ್ಹಾ ಮನವಿ; ಉನ್ನತ ಮಟ್ಟದ ಭದ್ರತಾ ಸಭೆ

    ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಾನುವಾರ ಉನ್ನತ ಮಟ್ಟದ ಭದ್ರತಾ ಪರಾಮರ್ಶನಾ ಸಭೆ ನಡೆಸಿದರು.

    ಮುಖ್ಯ ಕಾರ್ಯದರ್ಶಿ ಅಟಲ್ ಡುಲ್ಲೋ, ಡಿಜಿಪಿ ನಳಿನ್ ಪ್ರಭಾತ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. "ಶಾಂತಿ ಎಂಬುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದ್ದು, ಎಲ್ಲಾ ಸಮುದಾಯಗಳು ಇದನ್ನು ಎತ್ತಿಹಿಡಿಯಬೇಕು" ಎಂದು ಮನವಿ ಮಾಡಿದ ಎಲ್‌ಜಿ ಸಿನ್ಹಾ ಅವರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • 1 March 2026 8:12 PM IST

    ಮಧ್ಯಪ್ರಾಚ್ಯ ಸಂಘರ್ಷ: ಭಾರತದ 350 ಅಂತರಾಷ್ಟ್ರೀಯ ವಿಮಾನಗಳು ರದ್ದು

    ಮಧ್ಯಪ್ರಾಚ್ಯದಲ್ಲಿ ಉಲ್ಬಣಿಸಿರುವ ಯುದ್ಧದ ಭೀತಿ ಮತ್ತು ವಾಯುಪ್ರದೇಶದ ನಿರ್ಬಂಧಗಳಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ಸತತ ಎರಡನೇ ದಿನವೂ ಕಾರ್ಯಾಚರಣೆಯ ಅಸ್ತವ್ಯಸ್ತತೆಯನ್ನು ಎದುರಿಸುತ್ತಿದ್ದು, ಭಾನುವಾರ ಒಟ್ಟು 350 ಅಂತರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿವೆ. ಭೌಗೋಳಿಕ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಪ್ರಮುಖ ಸಂಸ್ಥೆಗಳು ಈ ನಿರ್ಧಾರ ಕೈಗೊಂಡಿದ್ದು, ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯವು ಅಧಿಕೃತ ಮಾಹಿತಿ ನೀಡಿದೆ.

    ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸಚಿವಾಲಯವು ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಪ್ರಯಾಣಿಕರಿಗೆ ಅಗತ್ಯ ಬೆಂಬಲ ನೀಡಲು ಮುಂದಾಗಿದೆ. ಫೆಬ್ರವರಿ 28 ರಂದು ಅಥವಾ ಅದಕ್ಕೂ ಮೊದಲು ಬುಕ್ ಆಗಿರುವ ಮತ್ತು ಮಾರ್ಚ್ 5 ರವರೆಗೆ ಪ್ರಯಾಣ ನಿಗದಿಯಾಗಿದ್ದ ಟಿಕೆಟ್‌ಗಳಿಗೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮರುಹೊಂದಾಣಿಕೆ ಅಥವಾ ಸಂಪೂರ್ಣ ಹಣ ಮರುಪಾವತಿ ಸೌಲಭ್ಯವನ್ನು ಘೋಷಿಸಿವೆ.

  • 1 March 2026 6:37 PM IST

    ದುಬೈ, ಅಬುಧಾಬಿಯಲ್ಲಿ ಸರಣಿ ಸ್ಫೋಟ; ಮುಳುಗುತ್ತಿದೆ ತೈಲ ಟ್ಯಾಂಕರ್!

    ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಹತ್ಯೆಗೆ ಪ್ರತಿಕಾರವಾಗಿ ಇರಾನ್ ನಡೆಸುತ್ತಿರುವ ಕ್ಷಿಪಣಿ ದಾಳಿಗಳು ಈಗ ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿವೆ. ಅಮೆರಿಕದ ಸೈನಿಕರು ನೆಲೆಸಿರುವ ಪ್ರದೇಶಗಳನ್ನು ಗುರಿಯಾಗಿಸಿ ಇರಾನ್ ನಡೆಸುತ್ತಿರುವ ಈ ದಾಳಿಯಿಂದಾಗಿ ದುಬೈ, ಅಬುಧಾಬಿ (ಯುಎಇ), ದೋಹಾ (ಕತಾರ್) ಮತ್ತು ಮನಾಮಾ (ಬಹ್ರೇನ್) ನಗರಗಳಲ್ಲಿ ಭೀಕರ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ.

    ದುಬೈ ಮತ್ತು ಅಬುಧಾಬಿಯಲ್ಲಿ ಪ್ರತಿ ಕೆಲವು ಗಂಟೆಗೊಮ್ಮೆ ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಮನಾಮಾದಲ್ಲಿ ಸೈರನ್ ಸದ್ದು ಮೊಳಗುತ್ತಿದ್ದು, ಹೋಟೆಲ್‌ವೊಂದರ ಮೇಲೆ ದಾಳಿಯಾಗಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

  • 1 March 2026 6:34 PM IST

    ಇರಾನ್ ಮೇಲಿನ ದಾಳಿ ಖಂಡಿಸಿ ಅಥೆನ್ಸ್‌ನಲ್ಲಿ ಬೃಹತ್ ಪ್ರತಿಭಟನೆ

    ಗ್ರೀಸ್ ರಾಜಧಾನಿ ಅಥೆನ್ಸ್‌ನಲ್ಲಿ ಭಾನುವಾರ 1,300ಕ್ಕೂ ಹೆಚ್ಚು ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ ರಾಯಭಾರ ಕಚೇರಿಗಳತ್ತ ಬೃಹತ್ ಮೆರವಣಿಗೆ ನಡೆಸಿದರು. ಮುಖ್ಯವಾಗಿ ಗ್ರೀಕ್ ಕಮ್ಯುನಿಸ್ಟ್ ಪಕ್ಷದ ಬೆಂಬಲಿಗರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, "ಇರಾನ್‌ನಿಂದ ದೂರವಿರಿ" ಎಂಬ ಘೋಷಣೆಗಳಿರುವ ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ಪರಿಸ್ಥಿತಿ ಉದ್ವಿಗ್ನಗೊಳ್ಳುವುದನ್ನು ತಡೆಯಲು ಪೊಲೀಸರು ಎರಡೂ ರಾಯಭಾರ ಕಚೇರಿಗಳ ಸುತ್ತಲೂ ಬಸ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ ಭದ್ರಕೋಟೆ ನಿರ್ಮಿಸಿದ್ದರು.

  • 1 March 2026 6:31 PM IST

    ಇರಾನ್ ಯುದ್ಧದ ಕುರಿತು ಭಾರತ ತನ್ನ ನಿಲುವು ಸ್ಪಷ್ಟಪಡಿಸಲಿ: ಕೇಂದ್ರ ಸರ್ಕಾರಕ್ಕೆ ಅಖಿಲೇಶ್ ಯಾದವ್ ಆಗ್ರಹ

    ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಕನೌಜ್ ಸಂಸದ ಅಖಿಲೇಶ್ ಯಾದವ್, ಇರಾನ್‌ನಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ಕುರಿತು ಭಾರತ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಭಾನುವಾರ ಒತ್ತಾಯಿಸಿದ್ದಾರೆ. ಪ್ರಮುಖ ನಾಯಕರಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಎಲ್ಲರನ್ನೂ ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಭೀಕರ ದಾಳಿಗಳು ಮತ್ತು ಯುದ್ಧದ ಸಂದರ್ಭದಲ್ಲಿ, ಭಾರತವು ಯುದ್ಧದ ಪರವಾಗಿದೆಯೇ ಅಥವಾ ಶಾಂತಿಯ ಪರವಾಗಿದೆಯೇ ಎಂಬುದನ್ನು ಜಗತ್ತಿಗೆ ತಿಳಿಸಬೇಕು ಎಂದು ಅವರು ಹೇಳಿದ್ದಾರೆ. ತಟಸ್ಥ ರಾಷ್ಟ್ರವಾಗಿರುವ ಭಾರತವು ಯುದ್ಧವನ್ನು ನಿಲ್ಲಿಸಲು ಮತ್ತು ಶಾಂತಿಯನ್ನು ಮರುಸ್ಥಾಪಿಸಲು ಯಾವ ರೀತಿಯ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುದನ್ನು ಸರ್ಕಾರವು ಬಹಿರಂಗಪಡಿಸಬೇಕು ಎಂದು ಯಾದವ್ ಆಗ್ರಹಿಸಿದ್ದಾರೆ.

  • 1 March 2026 6:28 PM IST

    ಇರಾನ್ ಬೆನ್ನಿಗೆ ನಿಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್!

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು "ಕಗ್ಗೊಲೆ" ಎಂದು ತೀವ್ರವಾಗಿ ಖಂಡಿಸಿದ್ದು, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರಿಗೆ ಸಂತಾಪ ಸೂಚಕ ಪತ್ರ ಬರೆದಿದ್ದಾರೆ. ಖಮೇನಿ ಮತ್ತು ಅವರ ಕುಟುಂಬದ ಸದಸ್ಯರ ಹತ್ಯೆಯು ಮಾನವ ನೈತಿಕತೆ ಮತ್ತು ಅಂತರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದ ಪುಟಿನ್, ರಷ್ಯಾ ಮತ್ತು ಇರಾನ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಖಮೇನಿ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.

    ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಈ ದಾಳಿಯನ್ನು "ಸಶಸ್ತ್ರ ಆಕ್ರಮಣ" ಎಂದು ರಷ್ಯಾ ಕರೆದಿದ್ದು, ತಕ್ಷಣವೇ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಿ ರಾಜತಾಂತ್ರಿಕ ಮಾತುಕತೆಗೆ ಮರಳುವಂತೆ ಒತ್ತಾಯಿಸಿದೆ. ಉಕ್ರೇನ್ ಯುದ್ಧದ ನಂತರ ರಷ್ಯಾ ಮತ್ತು ಇರಾನ್ ನಡುವಿನ ಸಂಬಂಧವು ಗಟ್ಟಿಯಾಗಿದ್ದು, ಈ ಬಿಕ್ಕಟ್ಟಿನ ಸಮಯದಲ್ಲಿ ಮಾಸ್ಕೋ ಇರಾನ್ ಪರವಾಗಿ ದೃಢವಾಗಿ ನಿಂತಿರುವುದನ್ನು ಪುಟಿನ್ ಅವರ ಈ ನಡೆ ಸಾಬೀತುಪಡಿಸಿದೆ.

  • 1 March 2026 4:08 PM IST

    ಪಾಕಿಸ್ತಾನದಿಂದ ಮಧ್ಯಪ್ರಾಚ್ಯಕ್ಕೆ ತೆರಳುವ 184 ವಿಮಾನಗಳ ಸಂಚಾರ ರದ್ದು

    ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಎದುರಾಗಿದ್ದು, ಇದರ ನೇರ ಪರಿಣಾಮವಾಗಿ ಪಾಕಿಸ್ತಾನದಿಂದ ಮಧ್ಯಪ್ರಾಚ್ಯ ದೇಶಗಳಿಗೆ ತೆರಳಬೇಕಿದ್ದ ಕನಿಷ್ಠ 184 ಅಂತರಾಷ್ಟ್ರೀಯ ವಿಮಾನಗಳನ್ನು ಶನಿವಾರದಿಂದ ರದ್ದುಗೊಳಿಸಲಾಗಿದೆ. ಇಸ್ಲಾಮಾಬಾದ್, ಲಾಹೋರ್, ಕರಾಚಿ ಮತ್ತು ಪೇಶಾವರ ಸೇರಿದಂತೆ ಪ್ರಮುಖ ನಗರಗಳಿಂದ ದುಬೈ, ಅಬುಧಾಬಿ, ದೋಹಾ ಮತ್ತು ರಿಯಾದ್‌ಗೆ ತೆರಳುವ ವಿಮಾನಗಳು ಸ್ಥಗಿತಗೊಂಡಿವೆ ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರ (CAA) ಖಚಿತಪಡಿಸಿದೆ.

    ಇರಾನ್‌ನಿಂದ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಹೆಚ್ಚಾದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ದುಬೈ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳನ್ನು ಮುಚ್ಚಿರುವುದು ಈ ಅಸ್ತವ್ಯಸ್ತತೆಗೆ ಮುಖ್ಯ ಕಾರಣವಾಗಿದೆ. ಯುರೋಪ್ ಮತ್ತು ಅಮೆರಿಕಕ್ಕೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ಹಬ್‌ಗಳು ಬಂದ್ ಆಗಿರುವುದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದ್ದು, ಪಾಕಿಸ್ತಾನದ ಒಳಗಿನ ದೇಶೀಯ ವಿಮಾನ ಸಂಚಾರ ಸದ್ಯಕ್ಕೆ ಯಥಾಸ್ಥಿತಿಯಲ್ಲಿದೆ.

Read More
Next Story