
ಅಮೆರಿಕ-ಇರಾನ್ ಮಾತುಕತೆಯಲ್ಲಿ ಹೈಡ್ರಾಮಾ: ಸಭೆಯಿಂದ ಇರಾನ್ ವಾಕ್‌ಔಟ್
ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ನಡೆದ ಅಮೆರಿಕ-ಇರಾನ್ ಶಾಂತಿ ಮಾತುಕತೆ ಆರಂಭದಲ್ಲೇ ಇರಾನ್ ನಿಯೋಗ ಅಮೆರಿಕ ಅಧಿಕಾರಿಗಳೊಂದಿಗೆ ಹಸ್ತಲಾಘವ ಮತ್ತು ಫೋಟೋ ಸೆಷನ್‌ಗೆ ನಿರಾಕರಿಸಿ ಸಭೆಯಿಂದ ಹೊರನಡೆದಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್ ರೆಸಾರ್ಟ್‌ನಲ್ಲಿ ಆರಂಭವಾಗಿರುವ ಅಮೆರಿಕ-ಇರಾನ್ ಶಾಂತಿ ಮಾತುಕತೆಯ ಮೊದಲ ದಿನವೇ ನಾಟಕೀಯ ಬೆಳವಣಿಗೆಗಳು ನಡೆದಿವೆ. ಸಭೆ ಆರಂಭಕ್ಕೂ ಮುನ್ನ ಅಮೆರಿಕ ನಿಯೋಗದೊಂದಿಗೆ ಹಸ್ತಲಾಘವ ಹಾಗೂ ಫೋಟೋ ಸೆಷನ್‌ನಲ್ಲಿ ಭಾಗವಹಿಸಲು ನಿರಾಕರಿಸಿದ ಇರಾನ್ ನಿಯೋಗ ಸಭೆಯಿಂದಲೇ ವಾಕ್‌ಔಟ್ ಮಾಡಿರುವ ಘಟನೆ ನಡೆದಿದೆ.
ಪಾಕಿಸ್ತಾನ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಈ ಮಹತ್ವದ ಮಾತುಕತೆಗಳು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ದೃಷ್ಟಿಯಿಂದ ನಿರ್ಣಾಯಕವೆಂದು ಪರಿಗಣಿಸಲಾಗುತ್ತಿದೆ.
ಫೋಟೋ ಸೆಷನ್‌ಗೆ ವಿರೋಧ
ಶಾಂತಿ ಒಪ್ಪಂದದ ತಿಳುವಳಿಕೆ ಪತ್ರಕ್ಕೆ ಅಧಿಕೃತ ಸಹಿ ಬಳಿಕ ಆಯೋಜಿಸಲಾದ ಮೊದಲ ಬಹುಪಕ್ಷೀಯ ಸಭೆಯಲ್ಲಿ ಅಮೆರಿಕಾ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ಸೌಹಾರ್ದಯುತ ಹಸ್ತಲಾಘವ ಹಾಗೂ ಛಾಯಾಚಿತ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
🚨📸 DIPLOMATIC MOMENT
— DR ADNAN ALI (@DrMalko) June 21, 2026
🇵🇰 Pakistan’s Prime Minister was seen embracing Iranian Foreign Minister Abbas Araghchi just meters away from US Vice President JD Vance ahead of the latest round of negotiations.
The scene highlights Pakistan’s active diplomatic engagement as talks… pic.twitter.com/Y9zvwn1FVU
ಆದರೆ ಇರಾನ್ ನಿಯೋಗದ ಮುಖ್ಯ ಸಮಾಲೋಚಕ ಮೊಹಮ್ಮದ್ ಬಘರ್ ಗಾಲಿಬಾಫ್ ಈ ವ್ಯವಸ್ಥೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದನ್ನು "ಅಮೆರಿಕನ್ ಶೋ" ಎಂದು ಕರೆದ ಅವರು, ಅಮೆರಿಕಾದ ಅಧಿಕಾರಿಗಳೊಂದಿಗೆ ಯಾವುದೇ ಫೋಟೋ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿ ಸಭೆಯಿಂದ ಹೊರನಡೆದರು.
ವೈರಲ್ ಆದ ವಿಡಿಯೊ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಸಭಾಂಗಣಕ್ಕೆ ಪ್ರವೇಶಿಸುವುದು ಕಾಣಿಸುತ್ತದೆ. ಈ ವೇಳೆ ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಸ್ಟೀವ್ ವಿಟ್ಕಾಫ್ ಮತ್ತು ಜಾರೆಡ್ ಕುಶ್ನರ್ ಸೇರಿದಂತೆ ಅಮೆರಿಕಾದ ನಿಯೋಗದ ಸದಸ್ಯರು ಅಲ್ಲಿದ್ದರು.
ಅರಘ್ಚಿ ಅವರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಹಸ್ತಲಾಘವ ಮಾಡಿ ಆತ್ಮೀಯವಾಗಿ ಮಾತನಾಡಿದರು. ಆದರೆ ಕೆಲವೇ ಕ್ಷಣಗಳಲ್ಲಿ ಅಮೆರಿಕಾದ ನಿಯೋಗವನ್ನು ಗಮನಿಸಿದ ಬಳಿಕ ಇರಾನ್ ತಂಡ ಫೋಟೋ ಸೆಷನ್‌ನಿಂದ ಹೊರನಡೆದಿದೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಕೂಡ ಅಚ್ಚರಿ ವ್ಯಕ್ತಪಡಿಸಿದ ದೃಶ್ಯಗಳು ವೈರಲ್ ಆಗಿವೆ.
ಮಾಧ್ಯಮ ಕಾರ್ಯಕ್ರಮದಿಂದ ದೂರ
ಮೂಲಗಳ ಪ್ರಕಾರ, ಇರಾನ್ ನಿಯೋಗ ಆರಂಭದಿಂದಲೇ ಅಮೆರಿಕಾದ ಅಧಿಕಾರಿಗಳೊಂದಿಗೆ ಯಾವುದೇ ಮಾಧ್ಯಮ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಮಧ್ಯವರ್ತಿಗಳಿಗೆ ಸ್ಪಷ್ಟಪಡಿಸಿತ್ತು. ಆದರೂ, ಅಂತಾರಾಷ್ಟ್ರೀಯ ಮಾತುಕತೆಗಳಲ್ಲಿ ಸಾಮಾನ್ಯವಾಗಿ ನಡೆಯುವ ಔಪಚಾರಿಕ ಫೋಟೋ ಸೆಷನ್ ಆಯೋಜಿಸಲಾಗಿತ್ತು. ಇರಾನ್ ನಿಯೋಗ ಹೊರನಡೆದ ಬಳಿಕ ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗ ಪಾಕಿಸ್ತಾನ ಮತ್ತು ಕತಾರ್ ಪ್ರತಿನಿಧಿಗಳೊಂದಿಗೆ ಪ್ರತ್ಯೇಕವಾಗಿ ಫೋಟೋ ಸೆಷನ್‌ನಲ್ಲಿ ಭಾಗವಹಿಸಿತು.
ರಾತ್ರಿ ಪೂರ್ತಿ ಮಾತುಕತೆ
ಆರಂಭಿಕ ಉದ್ವಿಗ್ನತೆಯ ನಡುವೆಯೂ ಅಮೆರಿಕಾ ಮತ್ತು ಇರಾನ್ ನಡುವೆ ರಾತ್ರಿ ಪೂರ್ತಿ ಮಾತುಕತೆಗಳು ಮುಂದುವರಿದಿವೆ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ.
• ಇರಾನ್ ಪರಮಾಣು ಯೋಜನೆ
• ಆರ್ಥಿಕ ನಿರ್ಬಂಧಗಳ ಸಡಿಲಿಕೆ
• ಹೋರ್ಮುಜ್ ಜಲಸಂಧಿಯ ಸುರಕ್ಷತೆ
• ಲೆಬನಾನ್ ಸಂಘರ್ಷದ ನಿವಾರಣೆ
• ಪ್ರಾದೇಶಿಕ ಶಾಂತಿ ವ್ಯವಸ್ಥೆ
ಇವುಗಳ ಕುರಿತು ಚರ್ಚೆ ನಡೆದಿದೆ ಎಂದು ವರದಿಯಾಗಿದೆ.
80 ನಿಮಿಷಗಳ ಮೊದಲ ಸುತ್ತಿನ ಮಾತುಕತೆ
ಮೊದಲ ಹಂತದ ಮಾತುಕತೆ ಸುಮಾರು 80 ನಿಮಿಷಗಳ ಕಾಲ ನಡೆದಿದ್ದು, ಯುದ್ಧ ಅಂತ್ಯಗೊಳಿಸುವುದು, ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುವುದು ಹಾಗೂ ಇರಾನ್‌ನ ಸ್ಥಗಿತಗೊಂಡಿರುವ ಆಸ್ತಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಗಮನಹರಿಸಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಉದ್ವಿಗ್ನತೆಯ ನಡುವೆ ಈ ಮಾತುಕತೆಗಳು ಜಾಗತಿಕ ಮಟ್ಟದಲ್ಲೂ ಕುತೂಹಲ ಕೆರಳಿಸಿದ್ದು, ಮುಂದಿನ ಕೆಲವು ದಿನಗಳಲ್ಲಿ ನಡೆಯಲಿರುವ ತಾಂತ್ರಿಕ ಮಟ್ಟದ ಚರ್ಚೆಗಳತ್ತ ವಿಶ್ವದ ಗಮನ ನೆಟ್ಟಿದೆ.

