
ಕೆನಡಾದಲ್ಲಿ ವಿದ್ಯಾಭ್ಯಾಸದ ಜೊತೆಗೆ ಕೆಲಸವನ್ನು ನಿಭಾಯಿಸಲು ಪರದಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಬದುಕಿನ ಅಸಲಿ ಚಿತ್ರಣವನ್ನು ತೆರೆದಿಟ್ಟಿದೆ.
ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿಯ ಪರದಾಟ: 'ನಾನೊಂದು ಚಕ್ರವ್ಯೂಹದಲ್ಲಿ ಸಿಲುಕಿದ್ದೇನೆ' ಎಂದ
ಜ್ಯೋತಿ ಖರಾಯತ್ ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತನ್ನ ದೈನಂದಿನ ಜೀವನದ ಹೋರಾಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬೇಕು, ಅಲ್ಲಿಯೇ ನೆಲೆಸಬೇಕು ಎಂಬುದು ಅನೇಕ ಭಾರತೀಯ ವಿದ್ಯಾರ್ಥಿಗಳ ಕನಸು. ಆದರೆ, ವಿದೇಶಿ ನೆಲದ ವಾಸ್ತವ ಪರಿಸ್ಥಿತಿ ಹಾಗೂ ಅಲ್ಲಿನ ಜೀವನ ನಿರ್ವಹಣೆ ಅಂದುಕೊಂಡಷ್ಟು ಸುಲಭವಲ್ಲ. ಕೆನಡಾದಲ್ಲಿ ವಿದ್ಯಾಭ್ಯಾಸದ ಜೊತೆಗೆ ಕೆಲಸವನ್ನು ನಿಭಾಯಿಸಲು ಪರದಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಬದುಕಿನ ಅಸಲಿ ಚಿತ್ರಣವನ್ನು ತೆರೆದಿಟ್ಟಿದೆ.
ಜ್ಯೋತಿ ಖರಾಯತ್ ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತನ್ನ ದೈನಂದಿನ ಜೀವನದ ಹೋರಾಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ತರಗತಿ ಮುಗಿಸಿ ನೇರವಾಗಿ ಸ್ಟಾರ್‌ಬಕ್ಸ್‌ನಲ್ಲಿ (Starbucks) ತನ್ನ ಕೆಲಸದ ಪಾಳಿಗೆ ತೆರಳುವ ದೃಶ್ಯಗಳೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ.
ಓದು-ಕೆಲಸದ ನಡುವೆ ಸಿಲುಕಿದ ಯುವತಿ:
"ನಾನೊಂದು ನಿರಂತರ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದೇನೆ ಎಂಬ ಭಾವನೆ ಸದಾ ಕಾಡುತ್ತಿದೆ. ನನ್ನ ಕಾಲೇಜು ಶುಲ್ಕ ಪಾವತಿಸಲು ನನಗೆ ಹಣದ ಅವಶ್ಯಕತೆಯಿದೆ. ಆ ಹಣ ಸಂಪಾದಿಸಲು ನಾನು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಕಾಲೇಜಿನಿಂದ ಬಂದು ನೇರವಾಗಿ ಕೆಲಸಕ್ಕೆ ಹೋಗುತ್ತೇನೆ, ಸ್ವಲ್ಪ ವಿರಾಮದ ನಂತರ ಮತ್ತೆ ಕಾಲೇಜಿಗೆ, ತದನಂತರ ಮತ್ತೆ ಕೆಲಸಕ್ಕೆ ಮರಳುತ್ತೇನೆ," ಎಂದು ಜ್ಯೋತಿ ತಮ್ಮ ದೈನಂದಿನ ಜಂಜಾಟವನ್ನು ವಿವರಿಸಿದ್ದಾರೆ. ಈ ದೈನಂದಿನ ಓಟವನ್ನು ಅವರು 'ನಿರಂತರ ಲೂಪ್' (ಚಕ್ರ) ಎಂದು ಬಣ್ಣಿಸಿದ್ದಾರೆ. ಆದರೆ, ಇಷ್ಟೆಲ್ಲಾ ಸವಾಲುಗಳು ಹಾಗೂ ದೈಹಿಕ ಶ್ರಮದ ನಡುವೆಯೂ, ತಾನು ಖುಷಿಯಾಗಿಯೇ ಇರುವುದಾಗಿ ಅವರು ಹೇಳಿಕೊಂಡಿರುವುದು ವಿಡಿಯೋ ನೋಡಿದವರ ಮೆಚ್ಚುಗೆಗೆ ಪಾತ್ರವಾಗಿದೆ.
ನೆಟ್ಟಿಗರ ಪ್ರತಿಕ್ರಿಯೆ:
ಜ್ಯೋತಿ ಅವರ ಈ ಅನುಭವದ ವಿಡಿಯೋ ಅಂತರ್ಜಾಲದಲ್ಲಿ ವ್ಯಾಪಕ ಪ್ರತಿಕ್ರಿಯೆ ಗಿಟ್ಟಿಸಿದೆ. ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಈಗಾಗಲೇ ಈ ಹಾದಿ ಸವೆಸಿದ ಅನೇಕರು ವಿಡಿಯೋಗೆ ಕಮೆಂಟ್ ಮಾಡಿದ್ದು, ಯುವತಿಯ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.
"ನೀವು ಇಷ್ಟೆಲ್ಲಾ ಕಷ್ಟದ ನಡುವೆಯೂ ಸಂತೋಷವಾಗಿದ್ದೀರಿ ಎಂದರೆ, ಜೀವನಕ್ಕೆ ಅಷ್ಟೇ ಸಾಕು" ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದರೆ, "ನಮ್ಮೆಲ್ಲರಿಗೂ ನಿಮ್ಮಿಂದ ಖಂಡಿತವಾಗಿಯೂ ಸ್ಫೂರ್ತಿ ಬೇಕಿದೆ" ಎಂದು ಮತ್ತೊಬ್ಬರು ಕಮೆಂಟ್ ಮಾಡಿ ಹುರಿದುಂಬಿಸಿದ್ದಾರೆ.
ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಪಾಡೇನು?
ಬಹುತೇಕ ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ವೆಚ್ಚಗಳು, ಜೀವನ ನಿರ್ವಹಣೆ ಮತ್ತು ದೈನಂದಿನ ಅಗತ್ಯಗಳನ್ನು ಪೂರೈಸಲು ಅರೆಕಾಲಿಕ ಉದ್ಯೋಗಗಳು ಅನಿವಾರ್ಯವಾಗಿವೆ. ಕೆಲಸದ ಪಾಳಿಗಳು ಮತ್ತು ಶೈಕ್ಷಣಿಕ ಜವಾಬ್ದಾರಿಗಳ (ಅಸೈನ್‌ಮೆಂಟ್, ತರಗತಿಗಳು) ನಡುವೆ ಸಮತೋಲನ ಕಾಯ್ದುಕೊಳ್ಳುವುದು ವಿದ್ಯಾರ್ಥಿಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬುದಕ್ಕೆ ಈ ವಿಡಿಯೋ ತಾಜಾ ಉದಾಹರಣೆಯಾಗಿದೆ.

