ಅಮೆರಿಕದಲ್ಲಿ ಗುಜರಾತಿ ಮೂಲದ ಅಂಗಡಿ ಮಾಲೀಕನಿಗೆ ಗುಂಡಿಕ್ಕಿ ಹತ್ಯೆ; 19 ವರ್ಷದ ಮಗಳ ಕೃತ್ಯ
x

ಅಮೆರಿಕದಲ್ಲಿ ಗುಜರಾತಿ ಮೂಲದ ಅಂಗಡಿ ಮಾಲೀಕನಿಗೆ ಗುಂಡಿಕ್ಕಿ ಹತ್ಯೆ; 19 ವರ್ಷದ ಮಗಳ ಕೃತ್ಯ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮೂಲದ ಸುರೇಶ್ ಪಟೇಲ್, ಟೆನ್ನೆಸಿ ರಾಜ್ಯದ ಜಾಕ್ಸನ್ ನಗರದಲ್ಲಿರುವ ರಿಡ್ಜ್‌ಕ್ರೆಸ್ಟ್ ಸೆಲ್ಲಾರ್ಸ್ ವೈನ್ ಆ್ಯಂಡ್ ಸ್ಪಿರಿಟ್ಸ್ ಅಂಗಡಿ ನಿರ್ವಹಿಸುತ್ತಿದ್ದರು


Click the Play button to hear this message in audio format

ಅಮೆರಿಕದ ಟೆನ್ನೆಸಿ ರಾಜ್ಯದಲ್ಲಿ ಸಶಸ್ತ್ರ ದರೋಡೆ ವೇಳೆ ಗುಜರಾತಿ ಮೂಲದ 62 ವರ್ಷದ ಅಂಗಡಿ ಮಾಲೀಕ ಸುರೇಶ್ ಪಟೇಲ್ ಎಂಬುವರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಘಟನೆ ನಡೆಯುವ ವೇಳೆ ಅವರ 19 ವರ್ಷದ ಮಗಳು ಅಂಗಡಿಯಲ್ಲೇ ಇದ್ದು, ತಂದೆಯ ಮೇಲಿನ ಗುಂಡಿನ ದಾಳಿಯನ್ನು ಕಣ್ಣಾರೆ ಕಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮೂಲದ ಸುರೇಶ್ ಪಟೇಲ್, ಟೆನ್ನೆಸಿ ರಾಜ್ಯದ ಜಾಕ್ಸನ್ ನಗರದಲ್ಲಿರುವ ರಿಡ್ಜ್‌ಕ್ರೆಸ್ಟ್ ಸೆಲ್ಲಾರ್ಸ್ ವೈನ್ ಆ್ಯಂಡ್ ಸ್ಪಿರಿಟ್ಸ್ ಅಂಗಡಿ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ ಸುಮಾರು 9 ಗಂಟೆಗೆ ಈ ಘಟನೆ ನಡೆದಿದೆ ಎಂದು ಜಾಕ್ಸನ್ ಪೊಲೀಸ್ ಇಲಾಖೆ ತಿಳಿಸಿದೆ.

ಮುಖವಾಡ ಧರಿಸಿ ಅಂಗಡಿಗೆ ನುಗ್ಗಿದ ದುಷ್ಕರ್ಮಿ

ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಮುಖವಾಡ ಧರಿಸಿದ್ದ ವ್ಯಕ್ತಿಯೊಬ್ಬ ಅಂಗಡಿಗೆ ನುಗ್ಗಿದ್ದಾನೆ. ಬಳಿಕ ಬಂದೂಕು ತೋರಿಸಿ ಅಂಗಡಿಯಲ್ಲಿದ್ದ ಸಿಬ್ಬಂದಿಯಿಂದ ಹಣ ನೀಡುವಂತೆ ಬೆದರಿಸಿದ್ದಾನೆ.

ಹಣ ಪಡೆದ ಬಳಿಕವೂ ಆತ ಅಲ್ಲಿಂದ ತೆರಳದೆ ಹಲವು ಸುತ್ತು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಸುರೇಶ್ ಪಟೇಲ್ ಅವರಿಗೆ ಗುಂಡು ತಗುಲಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವೇಳೆ ಸುರೇಶ್ ಪಟೇಲ್ ಅವರ 19 ವರ್ಷದ ಮಗಳು ಕೂಡ ಅಂಗಡಿಯಲ್ಲಿದ್ದಳು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತನ್ನ ಕಣ್ಣೆದುರೇ ತಂದೆಯ ಮೇಲೆ ಗುಂಡಿನ ದಾಳಿ ನಡೆದಿರುವುದು ಕುಟುಂಬಕ್ಕೆ ತೀವ್ರ ಆಘಾತ ಉಂಟುಮಾಡಿದೆ.

ಘಟನೆಗೆ ಮೂರು ದಿನಗಳ ಹಿಂದಷ್ಟೇ ಅಂಗಡಿ ವಹಿಸಿಕೊಂಡಿದ್ದರು

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸುರೇಶ್ ಪಟೇಲ್ ಅವರು ಕಳೆದ ಸೋಮವಾರವಷ್ಟೇ ರಿಡ್ಜ್‌ಕ್ರೆಸ್ಟ್ ಸೆಲ್ಲಾರ್ಸ್ ಅಂಗಡಿಯನ್ನು ಹೊಸ ಮಾಲೀಕರಾಗಿ ವಹಿಸಿಕೊಂಡಿದ್ದರು. ಅಂಗಡಿ ನಿರ್ವಹಣೆಯನ್ನು ಆರಂಭಿಸಿ ಕೇವಲ ಮೂರು ದಿನಗಳಲ್ಲೇ ಅವರನ್ನು ಹತ್ಯೆ ಮಾಡಲಾಗಿದೆ.

ಘಟನೆಯ ಸಂದರ್ಭದಲ್ಲಿ ಹಲವು ವರ್ಷಗಳಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 70 ವರ್ಷದ ಮಹಿಳಾ ಸಿಬ್ಬಂದಿಯೊಬ್ಬರು ಕೆಳಗೆ ಬಿದ್ದಿದ್ದು, ಅವರ ಮಣಿಕಟ್ಟು ಮುರಿದಿದೆ ಎನ್ನಲಾಗಿದೆ.

ಬಿಳಿ ಕಾರಿನಲ್ಲಿ ಪರಾರಿಯಾದ ಆರೋಪಿ

ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಶಂಕಿತ ವ್ಯಕ್ತಿಯ ಚಲನವಲನ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಬೂದು ಬಣ್ಣದ ಅಂಗಿ, ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಬೂಟು ಧರಿಸಿದ್ದ ಎಂದು ಹೇಳಲಾಗಿದೆ. ಆತ ಮುಖವನ್ನು ಪೇಂಟ್‌ಬಾಲ್ ಮಾದರಿಯ ಮುಖವಾಡದಿಂದ ಮುಚ್ಚಿಕೊಂಡಿದ್ದ.

ಕೃತ್ಯ ಎಸಗಿದ ಬಳಿಕ ಆರೋಪಿ ಬಿಳಿ ಬಣ್ಣದ ಸೆಡಾನ್ ಕಾರಿನಲ್ಲಿ ಪರಾರಿಯಾಗಿದ್ದಾನೆ. ಆತ ಶಸ್ತ್ರಸಜ್ಜಿತನಾಗಿದ್ದು, ಅಪಾಯಕಾರಿ ವ್ಯಕ್ತಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಆರೋಪಿಗಾಗಿ ಪೊಲೀಸರ ಶೋಧ

ಸುರೇಶ್ ಪಟೇಲ್ ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಜಾಕ್ಸನ್ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇದ್ದರೆ ಜಾಕ್ಸನ್ ಪೊಲೀಸ್ ಇಲಾಖೆ ಅಥವಾ ಕ್ರೈಂ ಸ್ಟಾಪರ್ಸ್‌ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ದರೋಡೆಯ ಉದ್ದೇಶದಿಂದಲೇ ಈ ದಾಳಿ ನಡೆದಿದೆಯೇ ಅಥವಾ ಇದಕ್ಕೆ ಬೇರೆ ಕಾರಣಗಳಿವೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಭಾರತೀಯರಿಗೆ ಮತ್ತೆ ಆತಂಕ

ಅಮೆರಿಕದಲ್ಲಿ ಗುಜರಾತಿ ಮೂಲದ ಅಂಗಡಿ ಮತ್ತು ಸಣ್ಣ ಉದ್ಯಮಗಳ ಮಾಲೀಕರ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ದರೋಡೆ ಪ್ರಕರಣಗಳ ನಡುವೆ ಸುರೇಶ್ ಪಟೇಲ್ ಹತ್ಯೆ ಮತ್ತೆ ಆತಂಕಕ್ಕೆ ಕಾರಣವಾಗಿದೆ.

2025ರ ಮೇ ತಿಂಗಳಲ್ಲಿ ಟೆನ್ನೆಸಿ ರಾಜ್ಯದ ಗ್ಯಾಸ್ ಸ್ಟೇಷನ್‌ನಲ್ಲಿ ನಡೆದ ದರೋಡೆ ವೇಳೆ 30 ವರ್ಷದ ಪರೇಶ್ 'ಪ್ರಿನ್ಸ್' ಪಟೇಲ್ ಗುಂಡಿನ ದಾಳಿಗೆ ಬಲಿಯಾಗಿದ್ದರು. ಎರಡು ತಿಂಗಳ ಹಿಂದೆ ವರ್ಜೀನಿಯಾ ರಾಜ್ಯದ ನಾರ್ಫೋಕ್ ನಗರದಲ್ಲಿರುವ ತನ್ನ ಅಂಗಡಿಯೊಳಗೇ ಗುಜರಾತಿ ಮೂಲದ ಮಹಿಳೆ ಮೇಘನಾ ಪಟೇಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಇದೇ ರೀತಿ 2025ರ ಸೆಪ್ಟೆಂಬರ್‌ನಲ್ಲಿ ಶಸ್ತ್ರಸಜ್ಜಿತ ದರೋಡೆಕೋರನನ್ನು ಎದುರಿಸಲು ಮುಂದಾದ ಗುಜರಾತ್ ಮೂಲದ ಕಿರಣ್ ಪಟೇಲ್ ಅವರನ್ನು ಪಾರ್ಕಿಂಗ್ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಸುರೇಶ್ ಪಟೇಲ್ ಹತ್ಯೆ ಪ್ರಕರಣದ ಆರೋಪಿಯ ಬಂಧನಕ್ಕಾಗಿ ಅಮೆರಿಕದ ಸ್ಥಳೀಯ ಪೊಲೀಸರು ಶೋಧ ಮುಂದುವರಿಸಿದ್ದು, ತನಿಖೆಯಿಂದಲೇ ದಾಳಿಯ ಸಂಪೂರ್ಣ ಹಿನ್ನೆಲೆ ಬಹಿರಂಗವಾಗಬೇಕಿದೆ.

Read More
Next Story