
ಅಮೆರಿಕದಲ್ಲಿ ಭಾರತೀಯ ಮೂಲದ ಎಂಜಿನಿಯರ್ ಹತ್ಯೆ; ಪತಿ ಬಂಧನ, ಪುತ್ರನಿಗೂ ಗುಂಡೇಟು
ಪ್ರಾಥಮಿಕ ತನಿಖೆಯಲ್ಲಿ ಈ ದುರ್ಘಟನೆ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯ ಮೂಲದ ಗೂಗಲ್‌ನ ಹಿರಿಯ ಎಂಜಿನಿಯರಿಂಗ್ ಅಧಿಕಾರಿಯಾಗಿದ್ದ ಶೀತಲ್ ವ್ರ್ಜೆಸಿಯನ್ ಅವರನ್ನು ಅವರ ಪತಿಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಘಟನೆಯಲ್ಲಿ ದಂಪತಿಯ 23 ವರ್ಷದ ಪುತ್ರ ಜೇಸನ್ ವ್ರ್ಜೆಸಿಯನ್ ಅವರಿಗೂ ಗುಂಡೇಟು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿರ್ಕ್ ಬಿ. ವ್ರ್ಜೆಸಿಯನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜಾರ್ಜಿಯಾದ ಕಾಬ್ ಕೌಂಟಿಯ ಸ್ಮಿರ್ನಾ ನಗರದ ನಿವಾಸವೊಂದರಲ್ಲಿ ಸ್ಥಳೀಯ ಕಾಲಮಾನ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಗುಂಡಿನ ದಾಳಿ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ 57 ವರ್ಷದ ಶೀತಲ್ ವ್ರ್ಜೆಸಿಯನ್ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವೈದ್ಯರು ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿತು.
ಅದೇ ವೇಳೆ ಮನೆಯ ಹೊರಭಾಗದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಪುತ್ರ ಜೇಸನ್ ವ್ರ್ಜೆಸಿಯನ್ ಪತ್ತೆಯಾಗಿದ್ದು, ತುರ್ತು ಚಿಕಿತ್ಸಾ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಗುಂಡೇಟಿನಿಂದ ಗಾಯಗೊಂಡಿದ್ದ ಜೇಸನ್ ನೆರೆಯ ಮನೆಗಳಿಗೆ ಓಡಿ ಹೋಗಿ ಸಹಾಯ ಕೋರಿದ್ದರು.
ಪತಿಯ ವಿರುದ್ಧ ಕೊಲೆ ಪ್ರಕರಣ
ಪ್ರಕರಣಕ್ಕೆ ಸಂಬಂಧಿಸಿದಂತೆ 56 ವರ್ಷದ ಕಿರ್ಕ್ ಬಿ. ವ್ರ್ಜೆಸಿಯನ್ ಅವರನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ, ಎರಡು ಮಾರಣಾಂತಿಕ ಹಲ್ಲೆ ಪ್ರಕರಣಗಳು ಹಾಗೂ ಅಪರಾಧ ಎಸಗುವ ವೇಳೆ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಕಾಬ್ ಕೌಂಟಿ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.
ಕುಟುಂಬ ಕಲಹವೇ ಕಾರಣ ಎನ್ನುವ ಶಂಕೆ
ಪ್ರಾಥಮಿಕ ತನಿಖೆಯಲ್ಲಿ ಇದು ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಗುಂಡಿನ ದಾಳಿಗೆ ನಿಖರ ಕಾರಣವೇನು ಎಂಬುದನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ಅಪಾಯ ಇಲ್ಲ ಎಂದೂ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವ
ಶೀತಲ್ ವ್ರ್ಜೆಸಿಯನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡು ದಶಕಗಳಿಗಿಂತ ಹೆಚ್ಚು ಅನುಭವ ಹೊಂದಿದ್ದರು. ಗೂಗಲ್‌ನಲ್ಲಿ ಎಂಜಿನಿಯರಿಂಗ್ ವಿಭಾಗದ ಹಿರಿಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಹೋಮ್ ಡಿಪೋ ಸಂಸ್ಥೆಯಲ್ಲಿ ಮೊಬೈಲ್ ಮತ್ತು ಡಿಜಿಟಲ್ ಪರಿವರ್ತನೆ ಯೋಜನೆಗಳಿಗೆ ನೇತೃತ್ವ ವಹಿಸಿದ್ದರು. ಹವಾಮಾನ ಮಾಹಿತಿ ತಂತ್ರಜ್ಞಾನ ಹಾಗೂ ಹಣಕಾಸು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಜಾರ್ಜಿಯಾ ಟೆಕ್‌ನ ಹಳೆಯ ವಿದ್ಯಾರ್ಥಿನಿ
ಇಂಗ್ಲೆಂಡ್, ಭಾರತ ಮತ್ತು ಘಾನಾದಲ್ಲಿ ಬಾಲ್ಯ ಕಳೆದಿದ್ದ ಶೀತಲ್ ನಂತರ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು. ಜಾರ್ಜಿಯಾ ಟೆಕ್ ಕಾಲೇಜ್ ಆಫ್ ಕಂಪ್ಯೂಟಿಂಗ್ ಸಲಹಾ ಮಂಡಳಿಯ ಸದಸ್ಯೆಯಾಗಿಯೂ, ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘದ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದರು. ಎರಡು ಸಾಫ್ಟ್‌ವೇರ್ ಪೇಟೆಂಟ್‌ಗಳಲ್ಲಿ ಸಹ-ಆವಿಷ್ಕಾರಕರಾಗಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರನ್ನು ಉತ್ತೇಜಿಸುವ ಕಾರ್ಯದಲ್ಲಿಯೂ ಅವರು ಸಕ್ರಿಯರಾಗಿದ್ದರು.

