
Trump Assassination Attempt |ಡೊನಾಲ್ಡ್ ಟ್ರಂಪ್ ಹತ್ಯೆಗೆ ಸ್ಕೆಚ್: ವಾಷಿಂಗ್ಟನ್ ಶೂಟಿಂಗ್ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಭೀತಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿದ ಇಂಜಿನಿಯರ್ ಕೋಲ್ ಅಲೆನ್ ಬಂಧನ. ವಾಷಿಂಗ್ಟನ್‌ನಲ್ಲಿ ನಡೆದ ಶೂಟಿಂಗ್ ಹಾರರ್ ಮತ್ತು ಆರೋಪಿಯ 'ಮ್ಯಾನಿಫೆಸ್ಟೋ' ಇಲ್ಲಿದೆ.
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಶನಿವಾರ ರಾತ್ರಿ ನಡೆದ 'ವಾಷಿಂಗ್ಟನ್ ಕರೆಸ್ಪಾಂಡೆಂಟ್ಸ್ ಡಿನ್ನರ್' (Washington Correspondents' Dinner) ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಘಟನೆ ಏನು?
ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಹಿರಿಯ ಅಧಿಕಾರಿಗಳು ಮತ್ತು ಪತ್ರಕರ್ತರು ಔತಣಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಭದ್ರತಾ ಕೋಟೆಯನ್ನು ಭೇದಿಸಿ ಒಳನುಗ್ಗಿದ 31 ವರ್ಷದ ಕೋಲ್ ಟೋಮಸ್ ಅಲೆನ್ (Cole Tomas Allen), ವೇದಿಕೆಯತ್ತ ನುಗ್ಗುತ್ತಾ ಗುಂಡಿನ ದಾಳಿ ನಡೆಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಟ್ರಂಪ್ ಮತ್ತು ವ್ಯಾನ್ಸ್ ಅವರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಯಾರು ಈ ಕೋಲ್ ಅಲೆನ್?
ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (Caltech) ಪದವೀಧರನಾದ ಅಲೆನ್, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಕಂಪ್ಯೂಟರ್ ಸೈಂಟಿಸ್ಟ್ ಆಗಿದ್ದಾನೆ. ಲಾಸ್ ಏಂಜಲೀಸ್ ಮೂಲದ ಈತ ಗೇಮ್ ಡೆವಲಪರ್ ಹಾಗೂ ಅರೆಕಾಲಿಕ ಶಿಕ್ಷಕನಾಗಿಯೂ ಕೆಲಸ ಮಾಡುತ್ತಿದ್ದನು.
ಹತ್ಯೆಗೂ ಮುನ್ನ 'ಮ್ಯಾನಿಫೆಸ್ಟೋ' ರವಾನೆ!
ಗುಂಡಿನ ದಾಳಿ ನಡೆಸುವ ಕೇವಲ 10 ನಿಮಿಷಗಳ ಮೊದಲು ಅಲೆನ್ ತನ್ನ ಕುಟುಂಬ ಸದಸ್ಯರಿಗೆ ಟ್ರಂಪ್ ವಿರೋಧಿ ಪ್ರಣಾಳಿಕೆಯನ್ನು (Manifesto) ಕಳುಹಿಸಿದ್ದಾನೆ. ಅದರಲ್ಲಿ ತನ್ನನ್ನು ತಾನು "ಫ್ರೆಂಡ್ಲಿ ಫೆಡರಲ್ ಅಸಾಸಿನ್" (Friendly Federal Assassin) ಎಂದು ಕರೆದುಕೊಂಡಿದ್ದಾನೆ.
ಅಲೆನ್ ಬರೆದ ಮ್ಯಾನಿಫೆಸ್ಟೋದ ಸಾರಾಂಶ:
"ಅನ್ಯಾಯ ನಡೆದಾಗ ಸುಮ್ಮನಿರುವುದು ಕ್ರಿಶ್ಚಿಯನ್ ಗುಣವಲ್ಲ, ಅದು ಅಪರಾಧಕ್ಕೆ ಸಾಥ್ ನೀಡಿದಂತೆ. ಈ ಆಡಳಿತದಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ನೋಡಿ ನಾನು ಸುಮ್ಮನಿರಲು ಸಾಧ್ಯವಿಲ್ಲ. ಒಬ್ಬ ಅತ್ಯಾಚಾರಿ ಮತ್ತು ದೇಶದ್ರೋಹಿಯ ಕೃತ್ಯಗಳಿಗೆ ನಾನು ಸಾಕ್ಷಿಯಾಗಲು ಇಷ್ಟಪಡುವುದಿಲ್ಲ," ಎಂದು ಅಲೆನ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದಾನೆ.
ಕೋರ್ಟ್ ಕಲಾಪ:
ಅಲೆನ್ ವಿರುದ್ಧ ಅಧ್ಯಕ್ಷರ ಹತ್ಯೆ ಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಅಲೆನ್ ಪರ ವಕೀಲರು, "ಈತನಿಗೆ ಯಾವುದೇ ಹಳೆಯ ಕ್ರಿಮಿನಲ್ ದಾಖಲೆಗಳಿಲ್ಲ, ಸದ್ಯಕ್ಕೆ ಈತ ನಿರಪರಾಧಿ" ಎಂದು ವಾದಿಸಿದ್ದಾರೆ.

