ಟ್ರಂಪ್-ಮೋದಿ ಮಾತುಕತೆ ಫಲಪ್ರದ: ಮೇಕ್ ಇನ್ ಇಂಡಿಯಾ ಉತ್ಪನ್ನಗಳ ಮೇಲಿನ ಸುಂಕ 18%ಕ್ಕೆ ಇಳಿಕೆ
x

ಟ್ರಂಪ್ ಮತ್ತು ಮೋದಿಯ ಗೆಳೆತನದ ದೃಶ್ಯ ( ಸಂಗ್ರಹ ಚಿತ್ರ)

ಟ್ರಂಪ್-ಮೋದಿ ಮಾತುಕತೆ ಫಲಪ್ರದ: 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳ ಮೇಲಿನ ಸುಂಕ 18%ಕ್ಕೆ ಇಳಿಕೆ

ಮಾತುಕತೆಯ ವೇಳೆ ಪ್ರಧಾನಿ ಮೋದಿ ಅವರು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ಅಮೆರಿಕ ಹಾಗೂ ವೆನೆಜುವೆಲಾದಿಂದ ತೈಲ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.


Click the Play button to hear this message in audio format

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬೆನ್ನಲ್ಲೇ, ಭಾರತೀಯ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ. 25 ರಿಂದ ಶೇ. 18ಕ್ಕೆ ಇಳಿಸುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ. ಈ ನಿರ್ಧಾರವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದು, 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಇದು ದೊಡ್ಡ ಉತ್ತೇಜನ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ 'ಟ್ರುತ್ ಸೋಷಿಯಲ್'ನಲ್ಲಿ ಬರೆದುಕೊಂಡಿರುವ ಟ್ರಂಪ್, "ಪ್ರಧಾನಿ ಮೋದಿ ಅವರ ಮೇಲಿನ ಗೌರವ ಮತ್ತು ಸ್ನೇಹದ ಸಂಕೇತವಾಗಿ ಹಾಗೂ ಅವರ ಕೋರಿಕೆಯ ಮೇರೆಗೆ ಪರಸ್ಪರ ಸುಂಕವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಶೇ. 25 ರಿಂದ ಶೇ. 18ಕ್ಕೆ ಇಳಿಸಲು ಒಪ್ಪಿಗೆ ನೀಡಲಾಗಿದೆ," ಎಂದು ತಿಳಿಸಿದ್ದಾರೆ.

ಈ ಹಿಂದೆ ಕೃಷಿ ವಲಯವನ್ನು ತೆರೆಯಲು ಭಾರತ ನಿರಾಕರಿಸಿದ್ದರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದಕ್ಕೆ ಹಲವು ಅಡೆತಡೆಗಳು ಎದುರಾಗಿದ್ದವು. ಆದರೆ ಈಗ ಅಂತಿಮವಾಗಿ ಒಪ್ಪಂದ ಏರ್ಪಟ್ಟಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ರಷ್ಯಾ ತೈಲ ಖರೀದಿ ಸ್ಥಗಿತ? ಉಕ್ರೇನ್ ಯುದ್ಧಕ್ಕೆ ಅಂತ್ಯ?

ಮಾತುಕತೆಯ ವೇಳೆ ಪ್ರಧಾನಿ ಮೋದಿ ಅವರು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಮತ್ತು ಅಮೆರಿಕ ಹಾಗೂ ವೆನೆಜುವೆಲಾದಿಂದ ತೈಲ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. "ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ನಿರ್ಧಾರವು ಪ್ರಸ್ತುತ ನಡೆಯುತ್ತಿರುವ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಮತ್ತು ಸಾವಿರಾರು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ," ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬದಲಾಗಿ, ರಷ್ಯಾದ ತೈಲದ ಮೇಲಿದ್ದ ಹೆಚ್ಚುವರಿ ಶೇ. 25ರ ಸುಂಕವನ್ನು ತೆಗೆದುಹಾಕುವುದಾಗಿ ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

500 ಬಿಲಿಯನ್ ಡಾಲರ್ ವ್ಯಾಪಾರ ಭರವಸೆ

ಪ್ರಧಾನಿ ಮೋದಿ ಅವರು ಅಮೆರಿಕದಿಂದ 500 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಮೌಲ್ಯದ ಇಂಧನ, ತಂತ್ರಜ್ಞಾನ, ಕೃಷಿ ಮತ್ತು ಕಲ್ಲಿದ್ದಲು ಉತ್ಪನ್ನಗಳನ್ನು ಖರೀದಿಸಲು ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಅಮೆರಿಕದ ವಿರುದ್ಧದ ಸುಂಕ ಮತ್ತು ಸುಂೇತರ ಅಡೆತಡೆಗಳನ್ನು ಶೂನ್ಯಕ್ಕೆ (Zero) ಇಳಿಸಲು ಭಾರತ ಮುಂದಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಹರ್ಷ

ಟ್ರಂಪ್ ಘೋಷಣೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, "140 ಕೋಟಿ ಭಾರತೀಯರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದಗಳು. 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಶೇ. 18ರಷ್ಟು ಕಡಿಮೆ ಸುಂಕ ವಿಧಿಸಲಿರುವುದು ಸಂತಸದ ವಿಷಯ," ಎಂದು ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ (Sergio Gor) ಅವರು 'ಇಂಡಿಯಾ ಟುಡೆ'ಗೆ ಪ್ರತಿಕ್ರಿಯಿಸಿ, "ಸುಂಕದ ಅಂತಿಮ ದರ ಶೇ. 18 ಆಗಿರಲಿದೆ. ಕಾಗದ ಪತ್ರಗಳ ಕೆಲಸ ಮುಗಿದ ನಂತರ ಇದು ಅಧಿಕೃತವಾಗಲಿದೆ," ಎಂದು ಖಚಿತಪಡಿಸಿದ್ದಾರೆ. ಅಲ್ಲದೆ, ಗಣರಾಜ್ಯೋತ್ಸವದಂದು ತಾವು ಕಳುಹಿಸಿದ್ದ 'ಇಂಡಿಯಾ ಟುಡೆ' ಮ್ಯಾಗಜೀನ್ ಮುಖಪುಟವನ್ನು ಟ್ರಂಪ್ ಹಂಚಿಕೊಂಡಿದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Read More
Next Story