ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗೆ ಭಾರತದ ಆಗ್ರಹ
x

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತುರ್ತು ಸುಧಾರಣೆಗಳನ್ನು ಕೈಗೊಳ್ಳಬೇಕು  ಎಂದು ಭಾರತ ಆಗ್ರಹಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗೆ ಭಾರತದ ಆಗ್ರಹ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯವಿಧಾನಗಳ ಕುರಿತು ನಡೆದ ಮುಕ್ತ ಚರ್ಚೆಯಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ನಿಯೋಗದ ಚಾರ್ಜ್ ಡಿ ಅಫೇರ್ಸ್, ರಾಯಭಾರಿ ಯೋಜನಾ ಪಟೇಲ್, ಭಾರತದ ನಿಲುವನ್ನು ಮಂಡಿಸಿದರು.


Click the Play button to hear this message in audio format

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ತುರ್ತು ಸುಧಾರಣೆಗಳನ್ನು ಕೈಗೊಳ್ಳಬೇಕು ಹಾಗೂ ದಕ್ಷಿಣ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಭಾರತ ಆಗ್ರಹಿಸಿದೆ. ಭದ್ರತಾ ಮಂಡಳಿಯ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯು ಇಂದಿನ ಜಾಗತಿಕ ವಾಸ್ತವತೆಗಳನ್ನು ಪ್ರತಿಬಿಂಬಿಸುವಂತಿರಬೇಕು ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯವಿಧಾನಗಳ ಕುರಿತು ನಡೆದ ಮುಕ್ತ ಚರ್ಚೆಯಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ನಿಯೋಗದ ಚಾರ್ಜ್ ಡಿ ಅಫೇರ್ಸ್, ರಾಯಭಾರಿ ಯೋಜನಾ ಪಟೇಲ್, ಭಾರತದ ನಿಲುವನ್ನು ಮಂಡಿಸಿದರು. ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚು ತುರ್ತು ಮತ್ತು ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

1945ರ ಜಗತ್ತು ಈಗ ಬದಲಾಗಿದೆ

1945ರ ಜಾಗತಿಕ ವ್ಯವಸ್ಥೆ ಈಗ ಸಂಪೂರ್ಣವಾಗಿ ಬದಲಾಗಿದೆ. ಅಂದಿನಿಂದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. 80 ವರ್ಷಗಳ ಹಿಂದೆ ನಡೆದ ಒಂದು ಸಂಘರ್ಷದ ಪರಿಣಾಮವನ್ನು ಆಧರಿಸಿ ಭದ್ರತಾ ಮಂಡಳಿಯ ರಚನೆ, ಕಾರ್ಯವಿಧಾನ ಮತ್ತು ನಿರ್ಧಾರ ಪ್ರಕ್ರಿಯೆಗಳನ್ನು ಶಾಶ್ವತವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಯೋಜ್ನಾ ಪಟೇಲ್ ತಿಳಿಸಿದರು.

ಎರಡೂ ವರ್ಗಗಳ ಸದಸ್ಯತ್ವ ವಿಸ್ತರಣೆಗೆ ಒತ್ತಾಯ

ಭದ್ರತಾ ಮಂಡಳಿಯ ಶಾಶ್ವತ ಮತ್ತು ಅಶಾಶ್ವತ ಎರಡೂ ವರ್ಗಗಳ ಸದಸ್ಯತ್ವವನ್ನು ವಿಸ್ತರಿಸಬೇಕು ಎಂದು ಭಾರತ ಆಗ್ರಹಿಸಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಹಾಗೂ ಜಾಗತಿಕ ದಕ್ಷಿಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರೆಯಬೇಕು ಎಂದು ಭಾರತ ಹೇಳಿದ್ದು, ಇದಕ್ಕಾಗಿ ಸ್ಪಷ್ಟ ಗುರಿಗಳು ಮತ್ತು ಸಮಯಮಿತಿಯೊಂದಿಗೆ ಪಠ್ಯಾಧಾರಿತ ಮಾತುಕತೆ ನಡೆಯಬೇಕು ಎಂದು ಒತ್ತಾಯಿಸಿದೆ.

ವೀಟೋ ಸೇರಿ ಸಮಗ್ರ ಸುಧಾರಣೆಗೆ ಕರೆ

ಭದ್ರತಾ ಮಂಡಳಿಯ ಕಾರ್ಯವಿಧಾನ ಸುಧಾರಣೆಯನ್ನು ಸದಸ್ಯತ್ವ ವಿಸ್ತರಣೆ, ಪ್ರಾದೇಶಿಕ ಪ್ರಾತಿನಿಧ್ಯ ಮತ್ತು ವೀಟೋ ಅಧಿಕಾರದಂತಹ ಇತರ ಪ್ರಮುಖ ವಿಷಯಗಳಿಂದ ಪ್ರತ್ಯೇಕವಾಗಿ ಚರ್ಚಿಸಬಾರದು ಎಂದು ಭಾರತ ತಿಳಿಸಿದೆ. ಇವೆಲ್ಲವೂ ಭದ್ರತಾ ಮಂಡಳಿಯ ಸಮಗ್ರ ಸುಧಾರಣೆಯ ಭಾಗವಾಗಿವೆ ಎಂದು ಪಟೇಲ್ ಹೇಳಿದರು.

ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಸಮಾನ ಮಾಹಿತಿ

ಭದ್ರತಾ ಮಂಡಳಿಯ ಎಲ್ಲ ಸದಸ್ಯ ರಾಷ್ಟ್ರಗಳಿಗೆ ದಾಖಲೆಗಳು ಮತ್ತು ಮಾಹಿತಿಗೆ ಸಮಾನ ಪ್ರವೇಶ ಇರಬೇಕು ಎಂದು ಭಾರತ ಒತ್ತಾಯಿಸಿದೆ. ಐತಿಹಾಸಿಕ ದಾಖಲೆಗಳ ಪ್ರವೇಶವು ಕೆಲವೇ ರಾಷ್ಟ್ರಗಳ ಸ್ವತ್ತಾಗಿ ಉಳಿಯಬಾರದು ಎಂದು ಪಟೇಲ್ ಹೇಳಿದ್ದಾರೆ.

ಶಾಂತಿಪಾಲನಾ ಪಡೆ ಕಳುಹಿಸುವ ರಾಷ್ಟ್ರಗಳಿಗೆ ನಿರ್ಧಾರದಲ್ಲಿ ಪಾತ್ರ

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಸೈನಿಕರು ಮತ್ತು ಪೊಲೀಸ್ ಸಿಬ್ಬಂದಿಯನ್ನು ಕಳುಹಿಸುವ ರಾಷ್ಟ್ರಗಳಿಗೂ ಪ್ರಮುಖ ನಿರ್ಧಾರಗಳಲ್ಲಿ ಪಾತ್ರ ನೀಡಬೇಕು ಎಂದು ಭಾರತ ಆಗ್ರಹಿಸಿದೆ. ಶಾಂತಿಪಾಲನಾ ಕಾರ್ಯಾಚರಣೆಗಳ ಆದೇಶಗಳು ಮತ್ತು ಸಂಪನ್ಮೂಲಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಈ ರಾಷ್ಟ್ರಗಳನ್ನು ಒಳಗೊಳ್ಳಬೇಕು ಎಂದು ಪಟೇಲ್ ಹೇಳಿದರು.

ಉಪಸಮಿತಿಗಳ ಅಧ್ಯಕ್ಷರ ನೇಮಕಕ್ಕೆ ಸಮಯಮಿತಿ

ಭದ್ರತಾ ಮಂಡಳಿಯ ಅಧೀನ ಸಂಸ್ಥೆಗಳ ಅಧ್ಯಕ್ಷರ ನೇಮಕದಲ್ಲಿ ಆಗುತ್ತಿರುವ ವಿಳಂಬವನ್ನು ತುರ್ತಾಗಿ ಪರಿಹರಿಸಬೇಕು ಎಂದು ಭಾರತ ಒತ್ತಾಯಿಸಿದೆ. ಅಧ್ಯಕ್ಷರ ನೇಮಕಕ್ಕೆ ನಿಶ್ಚಿತ ಮತ್ತು ಕಡ್ಡಾಯ ಸಮಯಮಿತಿ ನಿಗದಿಪಡಿಸುವಂತೆ ‘ನೋಟ್ 507’ ಅನ್ನು ಸೂಕ್ತವಾಗಿ ತಿದ್ದುಪಡಿ ಮಾಡಬೇಕು ಎಂದು ಭಾರತ ಹೇಳಿದೆ.

ಭಯೋತ್ಪಾದನೆ ವಿಚಾರದಲ್ಲೂ ಭಾರತದ ಎಚ್ಚರಿಕೆ

ಭಯೋತ್ಪಾದನೆ ವಿಚಾರದಲ್ಲೂ ಭಾರತ ತನ್ನ ನಿಲುವು ಸ್ಪಷ್ಟಪಡಿಸಿದೆ. ಭದ್ರತಾ ಮಂಡಳಿಯ ಸದಸ್ಯತ್ವವನ್ನು ರಾಜಕೀಯ ಹಿತಾಸಕ್ತಿಗಳಿಗಾಗಿ ಬಳಸಬಾರದು. ಯಾವುದೇ ಸಂಘಟನೆಯನ್ನು ಭಯೋತ್ಪಾದಕ ಪಟ್ಟಿಯಿಂದ ತೆಗೆದುಹಾಕುವುದು ಅಥವಾ ರಾಜಕೀಯ ಕಾರಣಗಳ ಆಧಾರದ ಮೇಲೆ ಹೊಸ ಸಂಘಟನೆಗಳನ್ನು ಭಯೋತ್ಪಾದಕರೆಂದು ಘೋಷಿಸುವುದು ನಡೆಯಬಾರದು ಎಂದು ಭಾರತ ಎಚ್ಚರಿಸಿದೆ.

ಸಾಮಾನ್ಯ ಸಭೆ ಜತೆ ಉತ್ತಮ ಸಮನ್ವಯಕ್ಕೆ ಕರೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅತ್ಯಂತ ಸಾರ್ವತ್ರಿಕ ಮತ್ತು ಪ್ರಜಾಸತ್ತಾತ್ಮಕ ಅಂಗವಾಗಿದೆ ಎಂದು ಬಣ್ಣಿಸಿದ ಭಾರತ, ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆಯ ಇತರ ಪ್ರಮುಖ ಅಂಗಗಳ ನಡುವೆ ಹೆಚ್ಚಿನ ಸಮನ್ವಯ ಮತ್ತು ಸಂವಹನಕ್ಕೆ ಅವಕಾಶ ಕಲ್ಪಿಸುವಂತೆ ಕಾರ್ಯವಿಧಾನಗಳನ್ನು ಸುಧಾರಿಸಬೇಕು ಎಂದು ಕರೆ ನೀಡಿದೆ.

Read More
Next Story