ಇಮ್ರಾನ್ ಖಾನ್‌ಗೆ ಬಿಗ್ ರಿಲೀಫ್: ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಪಾಕ್‌ ಸುಪ್ರೀಂ ಕೋರ್ಟ್ ಆದೇಶ
x

ಇಮ್ರಾನ್ ಖಾನ್‌ಗೆ ಬಿಗ್ ರಿಲೀಫ್: ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಪಾಕ್‌ ಸುಪ್ರೀಂ ಕೋರ್ಟ್ ಆದೇಶ

ಇಮ್ರಾನ್ ಖಾನ್ ಅವರನ್ನು 48 ಗಂಟೆಗಳ ಒಳಗೆ ಇಸ್ಲಾಮಾಬಾದ್‌ನ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಸೆಪ್ಟೆಂಬರ್ 16ರವರೆಗೆ ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ.


Click the Play button to hear this message in audio format

ಪಾಕಿಸ್ತಾನದ ಮಾಜಿ ಪ್ರಧಾನಿ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ತಕ್ಷಣವೇ ಜೈಲಿನಿಂದ ಇಸ್ಲಾಮಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ ಈ ಮಹತ್ವದ ಆದೇಶ ಹೊರಬಿದ್ದಿದೆ.

ಸರ್ಕಾರದ ಆಕ್ಷೇಪವನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಇಮ್ರಾನ್ ಖಾನ್ ಅವರನ್ನು 48 ಗಂಟೆಗಳ ಒಳಗೆ ಇಸ್ಲಾಮಾಬಾದ್‌ನ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದೆ. ಸೆಪ್ಟೆಂಬರ್ 16ರವರೆಗೆ ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ.

ಇಮ್ರಾನ್ ಆರೋಗ್ಯ ತಪಾಸಣೆಗೆ ವೈದ್ಯಕೀಯ ಮಂಡಳಿ ನೇಮಕ

ಇಮ್ರಾನ್ ಖಾನ್ ಅವರ ಆರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಲು ವೈದ್ಯಕೀಯ ಮಂಡಳಿಯನ್ನೂ ರಚಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಮಂಡಳಿಯಲ್ಲಿ ಇಮ್ರಾನ್ ಖಾನ್ ಅವರ ವೈಯಕ್ತಿಕ ವೈದ್ಯರು ಹಾಗೂ ಅವರ ಸಹೋದರಿ, ವೈದ್ಯೆ ಅಲೀಮಾ ಖಾನ್ ಕೂಡ ಇರಲಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿರುವ ಇಮ್ರಾನ್ ಖಾನ್ ಅವರ ಆಪ್ತ ಸಹಾಯಕ ಹಾಗೂ ಸಲಹೆಗಾರ ಜುಲ್ಫಿಕರ್ ಅಲಿ ಬುಖಾರಿ, ಈ ಕ್ರಮ ಇನ್ನಷ್ಟು ಮೊದಲೇ ನಡೆದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಇಮ್ರಾನ್ ಖಾನ್ ಅವರ ವಕೀಲ ಉಜೈರ್ ಭಂಡಾರಿ ಪ್ರಕಾರ, ಆಸ್ಪತ್ರೆಯಲ್ಲಿ ಕುಟುಂಬಸ್ಥರಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಅಲ್ಲದೆ ಬ್ರಿಟನ್‌ನಲ್ಲಿ ವಾಸಿಸುತ್ತಿರುವ ಅವರ ಪುತ್ರರಾದ ಕಾಸಿಮ್ ಮತ್ತು ಸುಲೈಮಾನ್ ಅವರೊಂದಿಗೆ ಮಾತನಾಡಲು ಕೂಡ ಅವಕಾಶ ನೀಡಬೇಕು ಎಂದು ಆದೇಶಿಸಲಾಗಿದೆ.

ಇಮ್ರಾನ್ ಆರೋಗ್ಯ ವರದಿಯಲ್ಲಿ ಏನಿದೆ?

ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿರುವ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಜೈಲು ಅಧಿಕಾರಿಗಳು ಸೋಮವಾರ ಸಕಾರಾತ್ಮಕ ಮಾಹಿತಿ ನೀಡಿದ್ದರು. 73 ವರ್ಷದ ಇಮ್ರಾನ್ ಖಾನ್ ಅವರ ದೃಷ್ಟಿ ಚಿಕಿತ್ಸೆಯ ಬಳಿಕ ಸಾಕಷ್ಟು ಸುಧಾರಿಸಿದ್ದು, ಬಹುತೇಕ ಸಹಜ ಸ್ಥಿತಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದರು.

ಆದರೆ, ಇಮ್ರಾನ್ ಖಾನ್ ಅವರ ಕುಟುಂಬ ಹಾಗೂ PTI ಈ ಹೇಳಿಕೆಯನ್ನು ಪ್ರಶ್ನಿಸಿತ್ತು. ಸುಮಾರು ಆರು ತಿಂಗಳ ಹಿಂದೆ ಅವರ ವಕೀಲರು, ಇಮ್ರಾನ್ ಅವರ ಬಲಗಣ್ಣಿನ ದೃಷ್ಟಿ ಶೇ.85ರಷ್ಟು ಕುಂದಿದೆ ಎಂದು ಹೇಳಿದ್ದರು.

ನ್ಯಾಯಾಲಯಕ್ಕೆ ಸಲ್ಲಿಸಲಾದ ವೈದ್ಯಕೀಯ ದಾಖಲೆಗಳು ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಮತ್ತಷ್ಟು ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಿವೆ. ರಕ್ತದೊತ್ತಡದಲ್ಲಿ ಏರಿಳಿತ, ಹೃದಯ ಬಡಿತದಲ್ಲಿ ವ್ಯತ್ಯಾಸ ಹಾಗೂ ತೀವ್ರ ಮಾನಸಿಕ ಒತ್ತಡ ಇರುವುದಾಗಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಮಾಜಿ ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಕೂಡ ಇಮ್ರಾನ್ ಖಾನ್ ಅವರ ವೈದ್ಯಕೀಯ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ. ಮುಂದಿನ ಮೂರು ತಿಂಗಳು ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತದೆಯೇ ಅಥವಾ ಸಮಸ್ಯೆ ಶಾಶ್ವತವಾಗುತ್ತದೆಯೇ ಎಂಬುದನ್ನು ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.

8 ತಿಂಗಳಿಂದ ಕುಟುಂಬಸ್ಥರ ಭೇಟಿಗೂ ನಿರ್ಬಂಧ?

ಇಮ್ರಾನ್ ಖಾನ್ ಅವರನ್ನು ಸಂಪೂರ್ಣ ಏಕಾಂಗಿಯಾಗಿ ಇರಿಸಲಾಗಿದೆ ಮತ್ತು ಎಂಟು ತಿಂಗಳಿನಿಂದ ಕುಟುಂಬಸ್ಥರಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು PTI ಈ ಹಿಂದೆ ಆರೋಪಿಸಿತ್ತು. 2025ರ ಡಿಸೆಂಬರ್ 2ರಂದು ಭಾರಿ ಪ್ರತಿಭಟನೆಗಳ ಬಳಿಕ ಇಮ್ರಾನ್ ಖಾನ್ ಅವರ ಸಹೋದರಿ ಉಜ್ಮಾ ಖಾನುಮ್ ಅವರಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಗಿತ್ತು. ಜೈಲಿನಲ್ಲಿನ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದ್ದು, ಅದನ್ನು ಮಾನಸಿಕ ಹಿಂಸೆ ಎಂದು ಅವರು ಆರೋಪಿಸಿದ್ದರು.

ಇಮ್ರಾನ್ ಖಾನ್ ಅವರ ಪುತ್ರರಾದ ಕಾಸಿಮ್ ಮತ್ತು ಸುಲೈಮಾನ್ ಕೂಡ ಈ ವರ್ಷದ ಆರಂಭದಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ, ತಮ್ಮ ತಂದೆಯನ್ನು ‘ಡೆತ್ ಸೆಲ್’ನಂತಹ ಪರಿಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಆರೋಪಿಸಿದ್ದರು.

ಮೂರು ವರ್ಷಗಳಿಂದ ಜೈಲಿನಲ್ಲಿರುವ ಇಮ್ರಾನ್

ಇಮ್ರಾನ್ ಖಾನ್ ಆಗಸ್ಟ್‌ನಲ್ಲಿ ಜೈಲುವಾಸದ ಮೂರು ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಅವರ ಬಿಡುಗಡೆಗೆ ಆಗ್ರಹಿಸಿ PTI ಕಾರ್ಯಕರ್ತರು ರಾವಲ್ಪಿಂಡಿ, ಲಾಹೋರ್ ಮತ್ತು ಮಿಯಾನ್ವಾಲಿಯಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು. ರಾವಲ್ಪಿಂಡಿಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಪಕ್ಷದ ಕಾರ್ಯಕರ್ತರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದರು.

ಮಾನವ ಹಕ್ಕುಗಳ ಸಂಘಟನೆಗಳು ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕೂಡ ಇಮ್ರಾನ್ ಖಾನ್ ಅವರಿಗೆ ಕುಟುಂಬಸ್ಥರು, ವಕೀಲರು ಹಾಗೂ ಸೂಕ್ತ ವೈದ್ಯಕೀಯ ಆರೈಕೆಯ ಪ್ರವೇಶ ಕಲ್ಪಿಸುವಂತೆ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿವೆ.

ಇಮ್ರಾನ್ ಖಾನ್ ಬಂಧನಕ್ಕೆ ಕಾರಣವೇನು?

2018ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಇಮ್ರಾನ್ ಖಾನ್ ಸುಮಾರು ನಾಲ್ಕು ವರ್ಷ ಅಧಿಕಾರದಲ್ಲಿದ್ದರು. 2022ರಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲಾಯಿತು. ಅದಾದ ಬಳಿಕ ಅವರ ಪಕ್ಷ PTI ವಿರುದ್ಧ ಹಲವು ನಿರ್ಬಂಧಗಳು ಜಾರಿಯಾಗಿದ್ದು, 2024ರ ಚುನಾವಣೆಯಲ್ಲೂ ಪಕ್ಷಕ್ಕೆ ಹಲವು ರೀತಿಯ ರಾಜಕೀಯ ಅಡೆತಡೆಗಳು ಎದುರಾಗಿದ್ದವು.

ಇಮ್ರಾನ್ ಖಾನ್ ಅವರನ್ನು ಮೊದಲ ಬಾರಿಗೆ 2023ರ ಮೇ 9ರಂದು ಬಂಧಿಸಲಾಗಿತ್ತು. ಇದರಿಂದ ಪಾಕಿಸ್ತಾನದಾದ್ಯಂತ ಭಾರಿ ಪ್ರತಿಭಟನೆ ಹಾಗೂ ಹಿಂಸಾಚಾರ ನಡೆದಿತ್ತು. ಬಳಿಕ 2023ರ ಆಗಸ್ಟ್ 5ರಂದು ಭ್ರಷ್ಟಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು. ಸರ್ಕಾರಿ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದ ತೋಶಖಾನಾ ಪ್ರಕರಣವೂ ಇದರಲ್ಲಿ ಸೇರಿದೆ.

ಇದೀಗ ಸೆಪ್ಟೆಂಬರ್ 16ರಂದು ಮುಂದಿನ ವಿಚಾರಣೆ ನಡೆಯುವವರೆಗೆ ಇಮ್ರಾನ್ ಖಾನ್ ಖಾಸಗಿ ಆಸ್ಪತ್ರೆಯಲ್ಲಿ ಇರಲಿದ್ದು, ಜೈಲಿನ ಹೊರಗೆ ಅವರು ದೀರ್ಘಾವಧಿ ಕಳೆಯುತ್ತಿರುವ ಮೊದಲ ಪ್ರಮುಖ ಸಂದರ್ಭ ಇದಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಅವರ ಆರೋಗ್ಯದ ನೈಜ ಸ್ಥಿತಿ ಹೇಗಿದೆ ಎಂಬುದು ಇದೀಗ ಪಾಕಿಸ್ತಾನ ಮಾತ್ರವಲ್ಲದೆ ಇಡೀ ವಿಶ್ವದ ಗಮನ ಸೆಳೆದಿದೆ.

Read More
Next Story