
ಇಸ್ರೇಲ್ ಹಾಗೂ ಗಾಜಾದ ಯುದ್ದದ ತೀವ್ರತೆಗೆ ಸಾಕ್ಷಿಯಾಗಿರುವ ಕಟ್ಟಡದ ಅವಶೇಷಗಳು
ಯುದ್ಧದ ಭೀಕರತೆ ನಡುವೆ ಗಾಜಾ ಆಡಳಿತ ಬಿಡಲು ಹಮಾಸ್ ಸಿದ್ಧತೆ: ಒಪ್ಪಂದ ತಳ್ಳಿಹಾಕಿದ ಇಸ್ರೇಲ್
ವರ್ಷಗಳ ಕಾಲ ನಡೆದ ಭೀಕರ ಯುದ್ಧದ ನಂತರ ಗಾಜಾದ ಪುನರ್ನಿರ್ಮಾಣಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಮಾಸ್ ವಿವರಿಸಿದೆ.
ಅಮೆರಿಕ ಮಧ್ಯಸ್ಥಿಕೆಯ ಕದನ ವಿರಾಮ ಒಪ್ಪಂದದ ಭಾಗವಾಗಿ ಹಮಾಸ್ ಉಗ್ರಗಾಮಿ ಸಂಘಟನೆಯು ಗಾಜಾದಲ್ಲಿನ ತನ್ನ ಸರ್ಕಾರವನ್ನು ವಿಸರ್ಜಿಸುವುದಾಗಿ ಘೋಷಿಸಿದೆ. ಅಲ್ಲದೆ, ವಿಶ್ವಸಂಸ್ಥೆ ಬೆಂಬಲಿತ ತಾಂತ್ರಿಕ ಸಮಿತಿಗೆ ಅಧಿಕಾರವನ್ನು ಹಸ್ತಾಂತರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದೆ.
ವರ್ಷಗಳ ಕಾಲ ನಡೆದ ಭೀಕರ ಯುದ್ಧದ ನಂತರ ಗಾಜಾದ ಪುನರ್ನಿರ್ಮಾಣಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಮಾಸ್ ವಿವರಿಸಿದೆ. ಆದರೆ, ಅಂತರರಾಷ್ಟ್ರೀಯ ಪಡೆಗಳಿಗೆ ತನ್ನ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವ ಅಥವಾ ಭದ್ರತಾ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹಸ್ತಾಂತರಿಸುವ ಕುರಿತು ಹಮಾಸ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಕೆಳ ಹಂತದ ಅಧಿಕಾರಿಯೊಬ್ಬರು ಈ ಪ್ರಕಟಣೆ ಹೊರಡಿಸಿರುವುದರಿಂದ, ಇದು ಯಾವುದೇ ಮಹತ್ವದ ಬದಲಾವಣೆ ತರಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವಿಶ್ವಸಂಸ್ಥೆ ಬೆಂಬಲಿತ ಪರಿವರ್ತನೆಗೆ ಚಾಲನೆ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಹೊಸ ಸಂಸ್ಥೆಯಾದ 'ಶಾಂತಿ ಮಂಡಳಿ'ಯು ಹಮಾಸ್‌ನ ಈ ಘೋಷಣೆಯನ್ನು ಗಮನಿಸಿದೆ. ಆದರೆ ತಾವು ಕೇವಲ ಭರವಸೆಗಳನ್ನಲ್ಲ, ಬದಲಿಗೆ ಅವರ ಕ್ರಮಗಳನ್ನು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮಂಡಳಿ ತಿಳಿಸಿದೆ. ಕದನ ವಿರಾಮ ಒಪ್ಪಂದದ ಪ್ರಕಾರ, ತಾಂತ್ರಿಕ ಸಮಿತಿಯು ಗಾಜಾದಲ್ಲಿನ ಎಲ್ಲಾ ಶಸ್ತ್ರಾಸ್ತ್ರಗಳ ಮೇಲೆ ನಿಯಂತ್ರಣ ಹೊಂದಿರಬೇಕು ಎಂದು ಮಂಡಳಿಯು ಎಕ್ಸ್‌ನಲ್ಲಿ ಸ್ಪಷ್ಟಪಡಿಸಿದೆ.
ಡೀರ್ ಅಲ್-ಬಲಹ್‌ನ ಅಲ್-ಅಕ್ಸಾ ಆಸ್ಪತ್ರೆಯ ಆವರಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹಮಾಸ್ ಸರ್ಕಾರದ ಮಾಧ್ಯಮ ಕಚೇರಿಯ ಜನರಲ್ ಡೈರೆಕ್ಟರ್ ಇಸ್ಮಾಯಿಲ್ ಅಲ್-ಥವಾಬ್ತಾ, "ಗಾಜಾದ ನಾಗರಿಕರ ದಿನನಿತ್ಯದ ವ್ಯವಹಾರಗಳನ್ನು ನಿರ್ವಹಿಸಲು ತಾಂತ್ರಿಕ ಮತ್ತು ವೃತ್ತಿಪರ ಸಿಬ್ಬಂದಿ ಮಾತ್ರ ತಮ್ಮ ಸ್ಥಾನಗಳಲ್ಲಿ ಮುಂದುವರಿಯಲಿದ್ದಾರೆ. ಇವರೆಲ್ಲರೂ ರಾಜ್ಯ ನೌಕರರಾಗಿದ್ದು, ಗಾಜಾ ಆಡಳಿತದ ರಾಷ್ಟ್ರೀಯ ಸಮಿತಿಯ ಅಡಿಯಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ" ಎಂದು ಹೇಳಿದ್ದಾರೆ.
ಹಮಾಸ್ ಘೋಷಣೆ ಅಪ್ರಸ್ತುತ ಎಂದ ಇಸ್ರೇಲ್
ಇಸ್ರೇಲ್ ಈ ಒಪ್ಪಂದ ಮತ್ತು ಘೋಷಣೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಇಸ್ರೇಲಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, "ಹಮಾಸ್ ಸರ್ಕಾರದ ರಾಜೀನಾಮೆಗೆ ಯಾವುದೇ ಮಹತ್ವವಿಲ್ಲ. ಏಕೆಂದರೆ ಹಮಾಸ್ ಸದಸ್ಯರು ಇನ್ನೂ ತಮ್ಮ ಹಳೆಯ ಸ್ಥಾನಗಳಲ್ಲೇ ಮುಂದುವರಿದಿದ್ದಾರೆ" ಎಂದು ಟೀಕಿಸಿದ್ದಾರೆ. ಪ್ರಸ್ತುತ ಕೈರೋದಲ್ಲಿ ನೆಲೆಗೊಂಡಿರುವ ಈ ತಂತ್ರಜ್ಞರ ಸಮಿತಿಯ ನೇತೃತ್ವವನ್ನು ಗಾಜಾ ಮೂಲದ ಎಂಜಿನಿಯರ್ ಹಾಗೂ ಪ್ಯಾಲೆಸ್ಟೀನಿಯನ್ ಪ್ರಾಧಿಕಾರದ ಮಾಜಿ ಅಧಿಕಾರಿ ಅಲಿ ಶಾತ್ ವಹಿಸಿಕೊಂಡಿದ್ದಾರೆ. ಯುಎನ್ ಮತ್ತು ಶಾಂತಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ಗಾಜಾದಲ್ಲಿ ಅಗತ್ಯ ಸೇವೆಗಳನ್ನು ಪುನಃಸ್ಥಾಪಿಸುವುದು ಮತ್ತು ನಾಗರಿಕ ವ್ಯವಹಾರಗಳನ್ನು ನೋಡಿಕೊಳ್ಳುವುದು ಈ ಸಮಿತಿಯ ಮುಖ್ಯ ಜವಾಬ್ದಾರಿಯಾಗಿದೆ.
ಮುಂದುವರಿದ ಬಿಕ್ಕಟ್ಟು
ಈ ಕುರಿತು ಪ್ರತಿಕ್ರಿಯಿಸಿರುವ ಸಮಿತಿಯ ಅಧ್ಯಕ್ಷ ಅಲಿ ಶಾತ್, ಹಮಾಸ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ ಸಮಿತಿಯು ಪರಿಣಾಮಕಾರಿಯಾಗಿ ಕೆಲಸ ಮಾಡಲು "ಒಂದೇ ಕಾನೂನು ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುವ ಒಂದೇ ಆಡಳಿತ ಪ್ರಾಧಿಕಾರ" ಮತ್ತು "ಏಕೀಕೃತ ಭದ್ರತಾ ವ್ಯವಸ್ಥೆ" ಇರಬೇಕು ಎಂದು ಪ್ರತಿಪಾದಿಸಿದ್ದಾರೆ. ಕದನ ವಿರಾಮಕ್ಕೆ ಸಹಿ ಹಾಕಿ ಒಂಬತ್ತು ತಿಂಗಳು ಕಳೆದರೂ, ಹಮಾಸ್‌ನ ನಿಶ್ಯಸ್ತ್ರೀಕರಣ ಮತ್ತು ಗಾಜಾ ಪುನರ್ನಿರ್ಮಾಣದ ಎರಡನೇ ಹಂತದ ಅನುಷ್ಠಾನದ ಕುರಿತು ಇಸ್ರೇಲ್-ಹಮಾಸ್ ನಡುವಿನ ಮಾತುಕತೆಗಳು ಸದ್ಯ ಸ್ಥಗಿತಗೊಂಡಿವೆ. ತನ್ನ ಶಸ್ತ್ರಾಸ್ತ್ರಗಳ ಬಗ್ಗೆ ಚರ್ಚಿಸುವ ಮುನ್ನ ಮೊದಲ ಹಂತದ ಒಪ್ಪಂದ ಜಾರಿಯಾಗಬೇಕು ಎಂದು ಹಮಾಸ್ ಪಟ್ಟು ಹಿಡಿದಿದೆ.
ಯುದ್ಧದ ಭೀಕರತೆ
2023 ಅ. 7ರಂದು ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನ 1,200 ಜನ ಮೃತಪಟ್ಟಿದ್ದರು ಮತ್ತು 251 ಜನರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಇಸ್ರೇಲ್ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಇದುವರೆಗೆ 73,098 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದು ಇದರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಕದನ ವಿರಾಮ ಜಾರಿಗೆ ಬಂದ ನಂತರ ಇಸ್ರೇಲಿ ದಾಳಿಗಳು ಗಣನೀಯವಾಗಿ ಕಡಿಮೆಯಾಗಿದ್ದರೂ, ಹಮಾಸ್ ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ಇಂದಿಗೂ ಸಣ್ಣ ಪ್ರಮಾಣದ ದಾಳಿಗಳನ್ನು ಮುಂದುವರಿಸಿದೆ.

