
ನ್ಯೂಯಾರ್ಕ್‌ನಲ್ಲಿ ಪಿಜ್ಜಾ ತಲುಪಿಸಲು ಹೋಗಿದ್ದ ಪಂಜಾಬ್ ಯುವಕ ಗುಂಡೇಟಿಗೆ ಬಲಿ
ಗುರ್‌ದೀಪ್ ಸಿಂಗ್ ಅವರಿಗೆ ತಂದೆ ಮತ್ತು ಸಹೋದರ ಇದ್ದಾರೆ. ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವು ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಅಮೆರಿಕದಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದ ಪಂಜಾಬ್ ಮೂಲದ 28 ವರ್ಷದ ಯುವಕನೊಬ್ಬ ಪಿಜ್ಜಾ ತಲುಪಿಸಲು ತೆರಳಿದ್ದ ವೇಳೆ ಗುಂಡೇಟಿಗೆ ಬಲಿಯಾಗಿರುವ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ. ಮೃತರನ್ನು ಪಂಜಾಬ್‌ನ ಬೆಗೋವಾಲ್ ಗ್ರಾಮದ ಗುರ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ದರೋಡೆ ಯತ್ನದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ನ್ಯೂಯಾರ್ಕ್ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಗುರ್‌ದೀಪ್ ಸಿಂಗ್ ಸುಮಾರು 13 ವರ್ಷಗಳ ಹಿಂದೆ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶದಿಂದ ಸಾಲ ಮಾಡಿ ಅಮೆರಿಕಕ್ಕೆ ತೆರಳಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಮೆರಿಕದಲ್ಲಿ ನೆಲೆಸಿದ ನಂತರ ಆರಂಭಿಕ ದಿನಗಳಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿದ್ದ ಅವರು, ಕುಟುಂಬದ ಜೀವನ ನಿರ್ವಹಣೆಗಾಗಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ.
ಭಾರತದಲ್ಲಿರುವ ತಂದೆ-ತಾಯಿಗೆ ಉತ್ತಮ ಭವಿಷ್ಯ ಕಲ್ಪಿಸುವ ಉದ್ದೇಶದಿಂದ ಗುರ್‌ದೀಪ್ ಹಗಲು-ರಾತ್ರಿ ದುಡಿಯುತ್ತಿದ್ದರು ಎಂದು ಅವರ ತಂದೆ ಪ್ಯಾರಾ ಲಾಲ್ ತಿಳಿಸಿದ್ದಾರೆ. ಕುಟುಂಬದ ಮೇಲಿದ್ದ ಸಾಲದ ಹೊರೆ ತಗ್ಗಿಸಿ, ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕು ಎಂಬ ಆಶಯದಿಂದಲೇ ಮಗ ಅಮೆರಿಕಕ್ಕೆ ತೆರಳಿದ್ದ ಎಂದು ಅವರು ಹೇಳಿದ್ದಾರೆ.
ಪಿಜ್ಜಾ ಡೆಲಿವರಿ ವೇಳೆ ದಾಳಿ
ನ್ಯೂಯಾರ್ಕ್ ನಗರದಲ್ಲಿ ಪಿಜ್ಜಾ ಡೆಲಿವರಿ ಕೆಲಸದಲ್ಲಿ ತೊಡಗಿದ್ದ ಗುರ್‌ದೀಪ್ ಸಿಂಗ್, ಕೆಲಸದ ನಿಮಿತ್ತ ಹೊರಗೆ ತೆರಳಿದ್ದ ವೇಳೆ ಅಪರಿಚಿತನ ಗುಂಡಿನ ದಾಳಿಗೆ ಒಳಗಾಗಿದ್ದಾರೆ. ಘಟನೆಯ ಹಿಂದಿನ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಆದರೆ ದರೋಡೆ ಯತ್ನದ ಸಂದರ್ಭದಲ್ಲಿ ಈ ಕೃತ್ಯ ನಡೆದಿರಬಹುದು ಎಂಬ ಶಂಕೆ ಇದೆ.
ಪ್ರಕರಣದ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯ ಗುರುತು ಮತ್ತು ದಾಳಿಯ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿ ತನಿಖೆಯ ನಂತರವೇ ಸ್ಪಷ್ಟವಾಗಲಿದೆ. ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಅಮೆರಿಕದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಶೋಕದ ವಾತಾವರಣ
ಗುರ್‌ದೀಪ್ ಸಿಂಗ್ ಸಾವಿನ ಸುದ್ದಿ ಪಂಜಾಬ್‌ನ ಅವರ ಸ್ವಗ್ರಾಮ ಬೆಗೋವಾಲ್‌ಗೆ ತಲುಪುತ್ತಿದ್ದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ತೀವ್ರ ದುಃಖ ಮನೆ ಮಾಡಿದೆ. ಅಮೆರಿಕಕ್ಕೆ ತೆರಳಿ ಕುಟುಂಬದ ಬದುಕನ್ನು ಉತ್ತಮಗೊಳಿಸುವ ಕನಸು ಕಂಡಿದ್ದ ಯುವಕ ಹಿಂಸಾತ್ಮಕ ದಾಳಿಯಲ್ಲಿ ಮೃತಪಟ್ಟಿರುವುದು ಆಘಾತ ತಂದಿದೆ.
ಗುರ್‌ದೀಪ್ ಸಿಂಗ್ ಅವರಿಗೆ ತಂದೆ ಮತ್ತು ಸಹೋದರ ಇದ್ದಾರೆ. ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವು ನೀಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

