
ಸಾಂದರ್ಭಿಕ ಚಿತ್ರ
ಜರ್ಮನಿಯಲ್ಲಿ ಭೀಕರ ಗುಂಡಿನ ದಾಳಿ: ಐವರ ಸಾವು, ಇಬ್ಬರು ಶಂಕಿತರು ಅರೆಸ್ಟ್
ಗುಂಡಿನ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ, ತುರ್ತು ಸೇವಾ ವಾಹನಗಳು ಹಾಗೂ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದು, ಇಡೀ ಪ್ರದೇಶವನ್ನು ಸುತ್ತುವರೆದಿವೆ.
ಉತ್ತರ ಜರ್ಮನಿಯ ಸ್ಟೇಡ್ ಪಟ್ಟಣದಲ್ಲಿರುವ ಯುವ ಕಲ್ಯಾಣ ಕೇಂದ್ರವೊಂದರಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಶಂಕಿತ ಬಂದೂಕುಧಾರಿ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗರ್ಭಿಣಿಯರು ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗೆ ತಾತ್ಕಾಲಿಕ ವಸತಿ ಒದಗಿಸುವ ಕೇಂದ್ರದ ಆವರಣದಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸ್ಥಳದಲ್ಲೇ ಇಬ್ಬರು ಶಂಕಿತರ ಬಂಧನ
ಗುಂಡಿನ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ, ತುರ್ತು ಸೇವಾ ವಾಹನಗಳು ಹಾಗೂ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದು, ಇಡೀ ಪ್ರದೇಶವನ್ನು ಸುತ್ತುವರೆದಿವೆ. ಕಾರ್ಯಾಚರಣೆಯ ವೇಳೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಅವರಲ್ಲಿ ಒಬ್ಬ ಪ್ರಮುಖವಾಗಿ ಗುಂಡು ಹಾರಿಸಿದ್ದಾನೆ ಎಂದು ಶಂಕಿಸಲಾಗಿದೆ. ದಾಳಿಗೆ ನಿಖರವಾದ ಕಾರಣವೇನೆಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಯ ಹೇಳಿಕೆ
ಕಲ್ಯಾಣ ಕೇಂದ್ರದ ಬಳಿ ಗುಂಡಿನ ಸದ್ದು ಕೇಳಿಸಿತು. ತಕ್ಷಣವೇ ಇಡೀ ಪ್ರದೇಶವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡರು ಮತ್ತು ನಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದರು ಎಂದು ಸ್ಥಳೀಯ ನಿವಾಸಿ ವಿಟಾಲಿ ಮೆರ್ಟೆನ್ಸ್ ತಿಳಿಸಿದ್ದಾರೆ.
ಶಾಲಾ ಮಕ್ಕಳು ಸುರಕ್ಷಿತ
ದಾಳಿ ನಡೆದ ಸ್ಥಳದ ಸಮೀಪದಲ್ಲೇ ಪ್ರಾಥಮಿಕ ಶಾಲೆ ಮತ್ತು ಡೇಕೇರ್ ಕೇಂದ್ರಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಪರಿಶೀಲನೆ ನಡೆಸಲಾಗಿದೆ. "ನಮ್ಮ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. ಇಂತಹ ಸವಾಲಿನ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದಗಳು. ಘಟನೆಯಲ್ಲಿ ಮಡಿದವರ ಕುಟುಂಬಗಳಿಗೆ ನಮ್ಮ ಸಂತಾಪಗಳು," ಎಂದು ಸ್ಥಳೀಯ ಕೌನ್ಸಿಲರ್ ಕಾರ್ಸ್ಟನ್ ಬ್ರೋಕೆಲ್‌ಮನ್ ತಿಳಿಸಿದ್ದಾರೆ.
ವದಂತಿ ಹರಡದಂತೆ ಪೊಲೀಸರ ಮನವಿ
ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅಪೂರ್ಣ ಅಥವಾ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಇಂತಹ ವದಂತಿಗಳು ನಡೆಯುತ್ತಿರುವ ತನಿಖೆಗೆ ಅಡ್ಡಿಪಡಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಕಟ್ಟುನಿಟ್ಟಿನ ಬಂದೂಕು ಕಾಯ್ದೆ
ಅಮೆರಿಕಕ್ಕೆ ಹೋಲಿಸಿದರೆ ಜರ್ಮನಿಯಲ್ಲಿ ಬಂದೂಕು ಪರವಾನಗಿ ನಿಯಮಗಳು ಅತ್ಯಂತ ಕಟ್ಟುನಿಟ್ಟಾಗಿವೆ. ಅಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಅಪರೂಪ. ಬಂದೂಕು ಪರವಾನಗಿ ಪಡೆಯಲು ಅರ್ಜಿದಾರರು ಕಡ್ಡಾಯ ತರಬೇತಿ, ಪರೀಕ್ಷೆ ಎದುರಿಸಬೇಕಲ್ಲದೆ, ಆಯುಧ ಹೊಂದುವ ಸೂಕ್ತ ಕಾರಣವನ್ನು ಸಾಬೀತುಪಡಿಸಬೇಕಾಗುತ್ತದೆ. ಸುಮಾರು 8.3 ಕೋಟಿ ಜನಸಂಖ್ಯೆ ಹೊಂದಿರುವ ಜರ್ಮನಿಯಲ್ಲಿ ಪ್ರಸ್ತುತ 9.29 ಲಕ್ಷ ಜನರು ಕಾನೂನುಬದ್ಧವಾಗಿ ಬಂದೂಕುಗಳನ್ನು ಹೊಂದಿದ್ದಾರೆ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿವೆ.

