
Drishti Satellite| ಸ್ಪೇಸ್ ಎಕ್ಸ್ ರಾಕೆಟ್‌ನಿಂದ ಬೆಂಗಳೂರು ಮೂಲದ ‘ಮಿಷನ್ ದೃಷ್ಟಿ’ ಉಪಗ್ರಹ ಯಶಸ್ವಿ ಉಡಾವಣೆ
ಪ್ರಸ್ತುತ ಭಾರತವು 29 ಸಕ್ರಿಯ ಭೂ ವೀಕ್ಷಣಾ ಉಪಗ್ರಹಗಳನ್ನು ಹೊಂದಿದೆ. ಗ್ಯಾಲಕ್ಸ್ ಐ ಸಂಸ್ಥೆಯ ಈ ನೂತನ 'ದೃಷ್ಟಿ' ಉಪಗ್ರಹವು ಇಸ್ರೋದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ದಾಖಲಾಗಿದೆ. ಬೆಂಗಳೂರು ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ ಆಗಿರುವ ಗ್ಯಾಲಕ್ಸ್ ಐ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಮಿಷನ್ ದೃಷ್ಟಿ ಉಪಗ್ರಹವನ್ನು ಭಾನುವಾರ ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಸ್ಪೇಸ್ಎಕ್ಸ್‌ನ ಫಾಲ್ಕನ್ 9 ರಾಕೆಟ್ ಮೂಲಕ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಆ ಮೂಲಕ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಬೆಂಗಳೂರಿನ ಸ್ಟಾರ್ಟ್ ಅಪ್ ಸಂಸ್ಥೆ ಹೊಸ ಭರವಸೆ ಮೂಡಿಸಿದೆ.
ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಕಳುಹಿಸಲಾದ ಮಿಷನ್ ದೃಷ್ಟಿ ಉಪಗ್ರಹವು ಒಪ್ಟೋ ಸಾರ್ (OptoSAR) ತಂತ್ರಜ್ಞಾನದಲ್ಲಿ ಸಿದ್ಧಪಡಿಸಲಾಗಿದೆ. ಈ ತಂತ್ರಜ್ಞಾನವು ಜಗತ್ತಿನಲ್ಲೇ ಮೊದಲ ಪ್ರಯೋಗವಾಗಿದೆ.
ಉಪಗ್ರಹದ ವಿಶೇಷಗಳೇನು?
ಮಿಷನ್ ದೃಷ್ಟಿ ಉಪಗ್ರಹವು ಎಲೆಕ್ಟ್ರೋ ಆಪ್ಟಿಕಲ್ ಮತ್ತು ಸಿಂಥೆಟಿಕ್ ಅಪರ್ಚರ್ ರೇಡಾರ್ ಸೆನ್ಸಾರ್‌ಗಳನ್ನು ಒಂದೇ ಕಾರ್ಯಾಚರಣಾ ವೇದಿಕೆಯಲ್ಲಿ ಅಳವಡಿಸಲಾಗಿದೆ. ಇಒ ಸೆನ್ಸಾರ್‌ಗಳು ಸೂರ್ಯನ ಬೆಳಕು ಹಾಗೂ ಶುಭ್ರವಾದ ಆಕಾಶವಿದ್ದಾಗ ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯಲಿವೆ.
ಎಸ್ಎಆರ್ ಸೆನ್ಸಾರ್‌ಗಳು ರೇಡಾರ್ ತರಂಗಗಳನ್ನು ಬಳಸುವುದರಿಂದ ದಟ್ಟವಾದ ಮೋಡ, ಮಳೆ, ಹೊಗೆ ಅಥವಾ ಕತ್ತಲಿದ್ದರೂ ಕೂಡ ಭೂಮಿಯ ನಿಖರ ಚಿತ್ರಗಳನ್ನು ಒದಗಿಸುತ್ತವೆ.
ರಕ್ಷಣಾ ಕ್ಷೇತ್ರ, ಕೃಷಿ ರಂಗಕ್ಕೆ ಬಲ
ಬಹುತೇಕ ಉಪಗ್ರಹಗಳು ಸಾಮಾನ್ಯವಾಗಿ ಹವಾಮಾನ ವೈಪರೀತ್ಯವಿದ್ದಾಗ ದತ್ತಾಂಶ ಸಂಗ್ರಹಿಸಲು ವಿಫಲವಾಗಲಿವೆ. ಆದರೆ, 'ದೃಷ್ಟಿ' ಉಪಗ್ರಹವು ಇಂತಹ ಅಡೆತಡೆಗಳನ್ನು ದಾಟಿ ನಿಲ್ಲಲಿದೆ. ಗಡಿ ಪ್ರದೇಶಗಳಲ್ಲಿ ನಿರಂತರ ಕಣ್ಗಾವಲು ಮತ್ತು ಭದ್ರತಾ ಪಡೆಗಳಿಗೆ ನೈಜ ಸಮಯದ ಚಿತ್ರಗಳನ್ನು ಒದಗಿಸಲು ನೆರವಾಗಲಿದೆ.
ಪ್ರವಾಹ, ಚಂಡಮಾರುತ ಹಾಗೂ ಭೂಕುಸಿತದಂತಹ ತುರ್ತು ಸಂದರ್ಭಗಳಲ್ಲಿ ಮೋಡಗಳಿದ್ದರೂ ಹಾನಿಯ ಪ್ರಮಾಣವನ್ನು ನಿಖರವಾಗಿ ಅಳೆಯಲಿದೆ. ಬೆಳೆಗಳ ಆರೋಗ್ಯದ ಮೇಲ್ವಿಚಾರಣೆ, ಸಾಗರ ಪ್ರದೇಶಗಳ ರಕ್ಷಣೆ ಮತ್ತು ದೊಡ್ಡ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲಿಸಲು ಈ ಉಪಗ್ರಹದ ದತ್ತಾಂಶಗಳು ಅತ್ಯಂತ ಉಪಯುಕ್ತವಾಗಲಿವೆ.
ಇಸ್ರೋ ಸಾಮರ್ಥ್ಯಕ್ಕೆ ಪೂರಕ ಬಲ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಾರ್ಷಿಕ ವರದಿ ಪ್ರಕಾರ, ಪ್ರಸ್ತುತ ಭಾರತವು 29 ಸಕ್ರಿಯ ಭೂ ವೀಕ್ಷಣಾ ಉಪಗ್ರಹಗಳನ್ನು ಹೊಂದಿದೆ. ಗ್ಯಾಲಕ್ಸ್ ಐ ಸಂಸ್ಥೆಯ ಈ ನೂತನ 'ದೃಷ್ಟಿ' ಉಪಗ್ರಹವು ಇಸ್ರೋದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತದ ಭೂ ವೀಕ್ಷಣಾ ಮೂಲಸೌಕರ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಇದು ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
2030ರ ವೇಳೆಗೆ 10 ಉಪಗ್ರಹಗಳ ರವಾನೆ
ಮಿಷನ್ ದೃಷ್ಟಿ ಯಶಸ್ವಿ ಉಡಾವಣೆ ಬೆನ್ನಲ್ಲೇ ಸಂತಸ ಹಂಚಿಕೊಂಡಿರುವ ಬೆಂಗಳೂರಿನ ಸ್ಟಾರ್ಟ್ ಅಪ್ ಸಂಸ್ಥೆಯಾದ ಗ್ಯಾಲಕ್ಸ್ ಐ ಸಂಸ್ಥಾಪಕ ಮತ್ತು ಸಿಇಒ ಸುಯಶ್ ಸಿಂಗ್ ಅವರು, "ಮಿಷನ್ ದೃಷ್ಟಿ ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ಸೇರಿದೆ. ನಾವು ಸದ್ಯ ಇದರ ಸಂಪೂರ್ಣ ಕಾರ್ಯಾಚರಣೆಯ ಪ್ರಕ್ರಿಯೆ ಪೂರ್ಣಗೊಳಿಸುವತ್ತ ಗಮನ ಹರಿಸಿದ್ದೇವೆ. ಒಪ್ಟೋಸಾರ್ ಪೇಲೋಡ್ ಮೂಲಕ ದೊರೆಯುವ ವಿಶಿಷ್ಟ ದತ್ತಾಂಶಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಈಗಾಗಲೇ ಭಾರಿ ಕುತೂಹಲ ವ್ಯಕ್ತವಾಗುತ್ತಿದೆ," ಎಂದು ಹೇಳಿದ್ದಾರೆ.
ಗ್ಯಾಲಕ್ಸ್ಐ ಸಂಸ್ಥೆಯು 2030ರ ವೇಳೆಗೆ ಇಂತಹ ಒಟ್ಟು 10 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವ ಗುರಿ ಹೊಂದಿದೆ. ಆ ಮೂಲಕ ಇಡೀ ವಿಶ್ವಕ್ಕೆ ನಿಖರ ಮತ್ತು ವಿಶ್ವಾಸಾರ್ಹ ಭೂ ವೀಕ್ಷಣಾ ದತ್ತಾಂಶ ಒದಗಿಸುವ ಪ್ರಮುಖ ಕೇಂದ್ರವಾಗಿ ಭಾರತವನ್ನು ಬೆಳೆಸಲು ಸಂಸ್ಥೆ ಮುಂದಾಗಿದೆ ಎಂದು ಸುಯಶ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.

