
ಬಾಲಕಿಯರು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ… ಭಾರತ ಮೂಲದ ಇಮಾಮ್ ಲಂಡನ್‌ನಲ್ಲಿ ಜೀವಾವಧಿ ಶಿಕ್ಷೆ!
ಲಂಡನ್‌ನಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಭಾರತೀಯ ಮೂಲದ ಮಾಜಿ ಇಮಾಮ್ ಅಬ್ದುಲ್ ಹಲೀಮ್ ಖಾನ್‌ಗೆ ಬ್ರಿಟನ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಪೂರ್ವ ಲಂಡನ್‌ನಲ್ಲಿ ಧಾರ್ಮಿಕ ಗುರುವಾಗಿದ್ದ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಮಹಿಳಾ ಭಕ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಭಾರತೀಯ ಮೂಲದ ಮಾಜಿ ಇಮಾಮ್‌ಗೆ ಅಲ್ಲಿನ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.
54 ವರ್ಷದ ಅಬ್ದುಲ್ ಹಲೀಮ್ ಖಾನ್ ಎಂಬಾತನಿಗೆ ಸ್ನಾರೆಸ್‌ಬ್ರೂಕ್ ಕ್ರೌನ್ ಕೋರ್ಟ್ ಗುರುವಾರ ಈ ಕಠಿಣ ಶಿಕ್ಷೆ ಪ್ರಕಟಿಸಿದೆ. 2004 ಮತ್ತು 2015 ರ ನಡುವೆ ಏಳು ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ವಿರುದ್ಧ ಬರೋಬ್ಬರಿ 21 ಲೈಂಗಿಕ ಅಪರಾಧಗಳನ್ನು ಎಸಗಿದ್ದಕ್ಕಾಗಿ ಈತನನ್ನು ದೋಷಿ ಎಂದು ಘೋಷಿಸಲಾಗಿದೆ. ನ್ಯಾಯಮೂರ್ತಿ ಲೆಸ್ಲಿ ಕತ್ಬರ್ಟ್ ಅವರು, ಖಾನ್ ಪೆರೋಲ್ ಪಡೆಯಲು ಅರ್ಹನಾಗುವ ಮುನ್ನ ಕನಿಷ್ಠ 20 ವರ್ಷಗಳ ಕಾಲ ಕಡ್ಡಾಯವಾಗಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ.
ಆಧ್ಯಾತ್ಮಿಕ ಶಕ್ತಿಯ ಹೆಸರಲ್ಲಿ ವಂಚನೆ
ಲಂಡನ್ ಮೆಟ್ರೋಪಾಲಿಟನ್ ಪೊಲೀಸರ ಪ್ರಕಾರ, ಅಬ್ದುಲ್ ಹಲೀಮ್ ಖಾನ್ ತನಗೆ ದೈವಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳಿವೆ ಎಂದು ಸುಳ್ಳು ಹೇಳಿ, ಕೇವಲ 12 ವರ್ಷದ ಸಣ್ಣ ವಯಸ್ಸಿನ ಬಾಲಕಿಯರನ್ನು ಮಾನಸಿಕವಾಗಿ ನಿಯಂತ್ರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.
ಟವರ್ ಹ್ಯಾಮ್ಲೆಟ್ಸ್ ಪ್ರದೇಶದ ಬಾಂಗ್ಲಾದೇಶಿ ಮುಸ್ಲಿಂ ಸಮುದಾಯದ ಮಹಿಳೆಯರು ಮತ್ತು ಬಾಲಕಿಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ. ಸಮಾಜದಲ್ಲಿ ತನಗಿದ್ದ ಗೌರವ ಹಾಗೂ ಲೈಂಗಿಕ ದೌರ್ಜನ್ಯದ ಬಗ್ಗೆ ಹೊರಗೆ ಹೇಳಿಕೊಳ್ಳಲು ಸಂತ್ರಸ್ತೆಯರು ಪಡುವ ಮುಜುಗರ ಮತ್ತು ಕೀಳರಿಮೆಯನ್ನೇ ಈತ ಬಂಡವಾಳ ಮಾಡಿಕೊಂಡಿದ್ದ ಎಂದು ಕೋರ್ಟ್‌ಗೆ ತಿಳಿಸಲಾಗಿದೆ.
ಸ್ಥಳೀಯ ಮಸೀದಿಯೊಂದರಲ್ಲಿ ಇಮಾಮ್ ಆಗಿದ್ದ ಖಾನ್, ಮೊದಲು ಸಂತ್ರಸ್ತೆಯರ ನಂಬಿಕೆ ಗಳಿಸುತ್ತಿದ್ದ. ನಂತರ ಅವರನ್ನು ಜನರಿಲ್ಲದ ನಿರ್ಜನ ಪ್ರದೇಶಗಳಿಗೆ ಅಥವಾ ಅವರದ್ದೇ ಮನೆಗಳಿಗೆ ಕರೆಸಿಕೊಳ್ಳುತ್ತಿದ್ದ. ದೌರ್ಜನ್ಯ ಎಸಗುವ ಸಮಯದಲ್ಲಿ, "ನಿಮ್ಮ ದೇಹಕ್ಕೆ 'ಜಿನ್' (ದುಷ್ಟ ಶಕ್ತಿ) ಆವರಿಸಿದೆ, ಅದನ್ನು ಬಿಡಿಸಬೇಕು" ಎಂದು ನಂಬಿಸಿ ಅತ್ಯಾಚಾರ ಎಸಗುತ್ತಿದ್ದ ಎನ್ನಲಾಗಿದೆ.
ಬ್ಲ್ಯಾಕ್ ಮ್ಯಾಜಿಕ್ ಹೆಸರಲ್ಲಿ ಬೆದರಿಕೆ
"ಅಬ್ದುಲ್ ಖಾನ್ ಸಮಾಜದಲ್ಲಿ ಒಬ್ಬ ಗೌರವಾನ್ವಿತ ವ್ಯಕ್ತಿಯಂತೆ ನಟಿಸುತ್ತಿದ್ದ. ಆದರೆ ಆ ಮುಖವಾಡದ ಹಿಂದೆ ಆತ ಮಹಿಳೆಯರನ್ನು ಬೇಟೆಯಾಡುವ ಕ್ರೂರಿಯಾಗಿದ್ದ," ಎಂದು ಮೆಟ್ ಪೊಲೀಸ್ ಪತ್ತೇದಾರಿ ಚೀಫ್ ಇನ್ಸ್‌ಪೆಕ್ಟರ್ ಜೆನ್ನಿ ರೋನಾನ್ ಹೇಳಿದ್ದಾರೆ.
ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (CPS) ನ ವಿಶೇಷ ಪ್ರಾಸಿಕ್ಯೂಟರ್ ಮೆಲಿಸ್ಸಾ ಗಾರ್ನರ್ ಮಾತನಾಡಿ, "ಅಬ್ದುಲ್ ಹಲೀಮ್ ಖಾನ್ ತನ್ನ ಕಾಮತೃಷೆ ನೀಗಿಸಿಕೊಳ್ಳಲು ಮಹಿಳೆಯರ ಧಾರ್ಮಿಕ ನಂಬಿಕೆಗಳನ್ನು ಬಳಸಿಕೊಂಡಿದ್ದಾನೆ. ಮಾಟ-ಮಂತ್ರದ ಮೂಲಕ ನಿಮ್ಮ ಕುಟುಂಬಕ್ಕೆ ಕಂಟಕ ತರುತ್ತೇನೆ ಎಂದು ಹೆದರಿಸಿ ವರ್ಷಗಳ ಕಾಲ ಅವರು ಬಾಯಿ ಬಿಡದಂತೆ ಸೌಂಡ್ ಇಲ್ಲದಂತೆ ಮಾಡಿದ್ದ," ಎಂದು ತಿಳಿಸಿದ್ದಾರೆ.
2018 ರಲ್ಲಿ ಹೊರಬಂದ ಸತ್ಯ!
2018 ರ ಫೆಬ್ರವರಿಯಲ್ಲಿ ಅತ್ಯಂತ ಕಿರಿಯ ಸಂತ್ರಸ್ತೆ ತನಗೆ ಶಾಲೆಯಲ್ಲಾದ ದೌರ್ಜನ್ಯದ ಬಗ್ಗೆ ಶಿಕ್ಷಕಿಯೊಬ್ಬರಿಗೆ ತಿಳಿಸಿದಾಗ ಈ ಭೀಕರ ಹಗರಣ ಬೆಳಕಿಗೆ ಬಂದಿತ್ತು. ಪೊಲೀಸರು ಈ ಪ್ರಕರಣದಲ್ಲಿ 50 ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು, 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿದ್ದರು. ಆದರೆ ವಿಚಾರಣೆ ವೇಳೆ ಉಗ್ರ ಇಮಾಮ್ ಖಾನ್ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಇದೆಲ್ಲಾ ನನ್ನ ವಿರುದ್ಧ ನಡೆದಿರುವ ಪಿತೂರಿ ಮತ್ತು ಹಗೆತನದ ರಾಜಕೀಯ ಎಂದು ವಾದಿಸಿದ್ದ. ಆದರೆ ಆತನ ವಿರುದ್ಧ ಸಾಕ್ಷ್ಯಾಧಾರಗಳು ಬಲವಾಗಿದ್ದವು.
ಸಂತ್ರಸ್ತೆಯೊಬ್ಬರ ಹೇಳಿಕೆ
"ಎಂಟು ಸುದೀರ್ಘ ವರ್ಷಗಳ ನಂತರ ನನಗೆ ನ್ಯಾಯ ಸಿಕ್ಕಿರುವುದು ನೆಮ್ಮದಿ ತಂದಿದೆ. ಆದರೆ ಇದರಿಂದ ನನ್ನ ಮನಸ್ಸಿನ ಮೇಲಾಗಿರುವ ಗಾಯಗಳು ಮಾಯವಾಗುವುದಿಲ್ಲ. ಧ್ವನಿ ಎತ್ತುವುದು ತುಂಬಾ ಭಯಾನಕವಾಗಿತ್ತು, ಆದರೆ ನನ್ನ ಶಕ್ತಿಯನ್ನು ಮರಳಿ ಪಡೆಯಲು ಇದು ಅಗತ್ಯವಾಗಿತ್ತು. ನನ್ನಂತೆ ನೊಂದಿರುವ ಇತರ ಮಹಿಳೆಯರಿಗೂ ಇದು ಧೈರ್ಯ ತುಂಬಲಿದೆ ಎಂದು ನಂಬಿದ್ದೇನೆ" ಎಂದು ಮೆಟ್ ಪೊಲೀಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.

