Meta Layoff| ಐಟಿ ವಲಯದಲ್ಲಿ ಲೇ-ಆಫ್ ಸುನಾಮಿ: ಒರಾಕಲ್‌ ಬೆನ್ನಲ್ಲೇ ಮೆಟಾದಲ್ಲಿ 8,000 ಉದ್ಯೋಗಿಗಳ ವಜಾ
x
ಮೆಟಾ ಸಂಸ್ಥೆಯಲ್ಲಿ ಉದ್ಯೋಗ ಕಡಿತ

Meta Layoff| ಐಟಿ ವಲಯದಲ್ಲಿ ಲೇ-ಆಫ್ ಸುನಾಮಿ: ಒರಾಕಲ್‌ ಬೆನ್ನಲ್ಲೇ ಮೆಟಾದಲ್ಲಿ 8,000 ಉದ್ಯೋಗಿಗಳ ವಜಾ

ಮೆಟಾ ಮತ್ತು ಒರಾಕಲ್ ಸಂಸ್ಥೆಗಳಿಂದ ಬೃಹತ್ ಉದ್ಯೋಗ ಕಡಿತ ಘೋಷಣೆ. ಮೆಟಾದಲ್ಲಿ 8,000 ಸಿಬ್ಬಂದಿ ವಜಾ ಭೀತಿ ಎದುರಿಸುತ್ತಿದೆ.


ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾತೃಸಂಸ್ಥೆಯಾದ ಮೆಟಾ ಪ್ಲಾಟ್‌ಫಾರ್ಮ್ಸ್ (Meta Platforms), 2026ನೇ ಸಾಲಿನ ತನ್ನ ಬೃಹತ್ ಉದ್ಯೋಗ ಕಡಿತದ ಪ್ರಕ್ರಿಯೆಯನ್ನು ಮೇ 20ರಿಂದ ಆರಂಭಿಸಲು ಸಜ್ಜಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಮೊದಲ ಹಂತದಲ್ಲಿ ಶೇ. 10ರಷ್ಟು ಸಿಬ್ಬಂದಿ ವಜಾ

ವರದಿಗಳ ಪ್ರಕಾರ, ಮೊದಲ ಹಂತದ ಈ ಪ್ರಕ್ರಿಯೆಯಲ್ಲಿ ಮೆಟಾ ತನ್ನ ಜಾಗತಿಕ ಕಾರ್ಯಪಡೆಯ ಸುಮಾರು ಶೇ. 10ರಷ್ಟು ಭಾಗವನ್ನು ಕಡಿತಗೊಳಿಸಲಿದೆ. ಅಂದರೆ ಸುಮಾರು 8,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕಂಪನಿಯ ಆಂತರಿಕ ಪುನರ್ರಚನೆಯ ಭಾಗವಾಗಿ ನಡೆಯುತ್ತಿರುವ ಇತ್ತೀಚಿನ ವರ್ಷಗಳ ಅತಿದೊಡ್ಡ ಉದ್ಯೋಗ ಕಡಿತ ಇದಾಗಿದೆ.

ಎರಡನೇ ಹಂತದಲ್ಲೂ ಮುಂದುವರಿಯಲಿದೆ ಲೇ-ಆಫ್

2026ರ ದ್ವಿತೀಯಾರ್ಧದಲ್ಲಿ (ವರ್ಷದ ಕೊನೆಯಲ್ಲಿ) ಮತ್ತೊಂದು ಸುತ್ತಿನ ಉದ್ಯೋಗ ಕಡಿತ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಎಐ ತಂತ್ರಜ್ಞಾನಗಳು ಕಂಪನಿಯ ಕೆಲಸದ ಹರಿವಿನಲ್ಲಿ ಎಷ್ಟು ವೇಗವಾಗಿ ಅಳವಡಿಕೆಯಾಗುತ್ತವೆ ಎಂಬುದರ ಆಧಾರದ ಮೇಲೆ ಮುಂದಿನ ಕಡಿತದ ಪ್ರಮಾಣವನ್ನು ನಿರ್ಧರಿಸಲಾಗುವುದು ಎಂದು ಎಕ್ಸಿಕ್ಯೂಟಿವ್‌ಗಳು ಸೂಚಿಸಿದ್ದಾರೆ.

AI ಮೇಲೆ ಹೂಡಿಕೆ ಮತ್ತು ಕಾರ್ಯಾಚರಣೆ ಬದಲಾವಣೆ

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಕೃತಕ ಬುದ್ಧಿಮತ್ತೆ (AI) ಉಪಕ್ರಮಗಳ ಮೇಲೆ ನೂರಾರು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುತ್ತಿದ್ದಾರೆ. ಕಂಪನಿಯ ಉತ್ಪನ್ನಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ಆಂತರಿಕ ಕೆಲಸದ ವಿಧಾನಗಳನ್ನು ಎಐ ತಂತ್ರಜ್ಞಾನದ ಸುತ್ತ ಮರುರೂಪಿಸುವುದು ಅವರ ಪ್ರಮುಖ ಗುರಿಯಾಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಆಟೊಮೇಷನ್ ಮತ್ತು ಎಐ ಪ್ರಭಾವ ಹೆಚ್ಚಾಗುತ್ತಿರುವ ಪರಿಣಾಮವಾಗಿ ಮೆಟಾ ಈ ಆಕ್ರಮಣಕಾರಿ ಹೆಜ್ಜೆಯನ್ನು ಇಟ್ಟಿದೆ. ಇದು ಇಡೀ ಟೆಕ್ ವಲಯದಲ್ಲಿ ಆತಂಕ ಮೂಡಿಸಿದೆ.

ಒರಾಕಲ್‌ನಲ್ಲಿ ಉದ್ಯೋಗ ಕಡಿತ

ಕೆಲವೇ ಕೆಲವು ದಿನಗಳ ಹಿಂದೆ ಅಮೆರಿಕ ಮೂಲದ ಐಟಿ ದೈತ್ಯ ಕಂಪನಿ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 (ಶೇ. 18) ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಆದರೆ, ಈ ನಿರ್ಧಾರದ ಅತಿ ದೊಡ್ಡ ಹೊಡೆತ ಬಿದ್ದಿರುವುದು ಭಾರತದ ಮೇಲೆ. ಭಾರತದಲ್ಲಿರುವ ಒಟ್ಟು 30,000 ಉದ್ಯೋಗಿಗಳ ಪೈಕಿ ಬರೋಬ್ಬರಿ ಶೇ. 40ರಷ್ಟು (12,000 ಉದ್ಯೋಗಿಗಳನ್ನು) ಕಂಪನಿ ಮನೆಗೆ ಕಳುಹಿಸಿದೆ. ವೆಚ್ಚ ಕಡಿತ ಮತ್ತು ಕಂಪನಿಯ ಪುನರ್ರಚನೆಯ ಹೆಸರಿನಲ್ಲಿ ಈ ಗೇಟ್‌ಪಾಸ್‌ ನೀಡಲಾಗಿದೆ.

Read More
Next Story