x

ಆಕಾಶದ ಮಧ್ಯೆ ರಕ್ತಸಿಕ್ತ ಹೈಜಾಕ್ ಯತ್ನ: ಫ್ಲೈದುಬೈ ವಿಮಾನದಲ್ಲಿ ಉಗ್ರನ ಅಟ್ಟಹಾಸ ಮೆಟ್ಟಿನಿಂತ ಕ್ಯಾಪ್ಟನ್ ಹಾಗೂ ಪ್ರಯಾಣಿಕರು

ಕ್ಯಾಪ್ಟನ್ ಪ್ರತಿರೋಧ ಒಡ್ಡಿದರೋ, ಕಂಗೆಟ್ಟ ಹಮ್ಮಾಮಿ ತಕ್ಷಣವೇ ಆಟೋಪೈಲಟ್ ವ್ಯವಸ್ಥೆಯನ್ನು ಆಫ್ ಮಾಡಿ ವಿಮಾನವನ್ನು ನೇರವಾಗಿ ಮರುಭೂಮಿಗೆ ಅಪ್ಪಳಿಸಲು ಯತ್ನಿಸಿದ. ಕೇವಲ ಒಂದು ನಿಮಿಷದ ಅಂತರದಲ್ಲಿ ವಿಮಾನವು 33,000 ಅಡಿಯಿಂದ 17,000 ಅಡಿಗೆ ಭೀಕರವಾಗಿ ಕುಸಿಯಿತು.


Click the Play button to hear this message in audio format

ಫ್ಲೈದುಬೈ ವಿಮಾನ ಎಫ್‌ಝಡ್1073 (FZ1073) ಮಾರ್ಗಮಧ್ಯೆ 33,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ನಡೆದ ಭೀಕರ ಹೈಜಾಕ್ ಯತ್ನವೊಂದು ಜಾಗತಿಕ ಭದ್ರತಾ ವ್ಯವಸ್ಥೆಯ ಲೋಪಗಳನ್ನು ಬಟಾಬಯಲು ಮಾಡಿದೆ. 174 ಮುಗ್ಧ ಪ್ರಯಾಣಿಕರ ಪ್ರಾಣವನ್ನೇ ಪಣಕ್ಕಿಟ್ಟ ಈ ಘಟನೆಯು ಕೇವಲ ಒಬ್ಬ ಉಗ್ರನ ಕೃತ್ಯವಾಗಿರದೆ,

ಒಮಾನ್, ಯುಎಇ ಹಾಗೂ ಇಸ್ರೇಲ್‌ನಂತಹ ಪ್ರಬಲ ರಾಷ್ಟ್ರಗಳ ಗುಪ್ತಚರ ಇಲಾಖೆಗಳ ಅತಿದೊಡ್ಡ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಅದೃಷ್ಟವಶಾತ್, ಪೈಲಟ್ ಹಾಗೂ ಪ್ರಯಾಣಿಕರ ಅಪ್ರತಿಮ ಸಮಯಪ್ರಜ್ಞೆ ಮತ್ತು ಸಾಹಸದಿಂದಾಗಿ ಭಾರಿ ಪ್ರಾಣಾಪಾಯವೊಂದು ತಪ್ಪಿದೆ.

ಮೂರು ರಾಷ್ಟ್ರಗಳ ಗುಪ್ತಚರ ಇಲಾಖೆಗಳ ಭಾರಿ ವೈಫಲ್ಯ

ಈ ವಿಮಾನದ ಸಹ-ಪೈಲಟ್ ಆಗಿದ್ದ ಹಮ್ಮಾಮ್ ಅಲ್-ಹಮ್ಮಾಮಿ ಎಂಬಾತನೇ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ. ಈತ 2024ರಲ್ಲಿ ಉಗ್ರರ ವೆಬ್‌ಸೈಟ್‌ಗಳನ್ನು ವೀಕ್ಷಿಸುತ್ತಿದ್ದ ವಿಚಾರ ತಿಳಿದ ಒಮಾನ್ ಅಧಿಕಾರಿಗಳು, ಆತನನ್ನು ಹಾರಾಟದಿಂದ ನಿಷೇಧಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದರು.

ಈ ಗಂಭೀರ ಮಾಹಿತಿಯನ್ನು ಜಾಗತಿಕ ಭದ್ರತಾ ಸಂಸ್ಥೆಗಳಿಗೆ ರವಾನಿಸುವಲ್ಲಿ ಒಮಾನ್ ಸಂಪೂರ್ಣ ವಿಫಲವಾಗಿತ್ತು. ಮತ್ತೊಂದೆಡೆ, 2026ರ ಫೆಬ್ರವರಿಯಲ್ಲಿ ಈತನನ್ನು ಕೆಲಸಕ್ಕೆ ಸೇರಿಸಿಕೊಂಡ ಫ್ಲೈದುಬೈ ಸಂಸ್ಥೆಯು, ಆತನ ಕ್ರಿಮಿನಲ್ ಹಿನ್ನೆಲೆಯನ್ನು ಸೂಕ್ತವಾಗಿ ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ. ಇನ್ನು, ಇಸ್ರೇಲ್ ಸಾರಿಗೆ ಸಚಿವಾಲಯ ಕೂಡ ನಿಯಮಗಳ ಪ್ರಕಾರ ಕಡ್ಡಾಯವಾಗಿ ಪಡೆಯುವ ಸಿಬ್ಬಂದಿ ಪಟ್ಟಿಯನ್ನು ಸರಿಯಾಗಿ ಪರಿಶೀಲಿಸದೆ ದೊಡ್ಡ ಪ್ರಮಾದವೆಸಗಿತ್ತು. ಈ ಮೂರು ದೇಶಗಳ ತೀವ್ರ ನಿರ್ಲಕ್ಷ್ಯವೇ ಉಗ್ರನೊಬ್ಬ ಇಸ್ರೇಲ್ ವಿಮಾನದ ಕಾಕ್‌ಪಿಟ್ ಪ್ರವೇಶಿಸಲು ಪ್ರಮುಖ ಕಾರಣವಾಯಿತು.

ಕ್ಯಾಪ್ಟನ್ ವೀರೋಚಿತ ಸಾಹಸ

ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಗಗನಚುಂಬಿ ಕಟ್ಟಡಕ್ಕೆ ವಿಮಾನವನ್ನು ಅಪ್ಪಳಿಸುವುದು ಹಮ್ಮಾಮಿಯ ಪ್ರಮುಖ ಗುರಿಯಾಗಿತ್ತು. ಕಾಕ್‌ಪಿಟ್‌ನಲ್ಲಿ ಪ್ರಾರ್ಥನೆ ಮಾಡುವ ನೆಪದಲ್ಲಿ ಎದ್ದುನಿಂತ ಆತ, ಏಕಾಏಕಿ ಅಲ್ಲಿಯೇ ಇದ್ದ ತುರ್ತು ಕೊಡಲಿಯನ್ನು (ಎಮರ್ಜೆನ್ಸಿ ಆಕ್ಸ್) ಕೈಗೆತ್ತಿಕೊಂಡು ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ತಲೆ ಹಾಗೂ ಕೈಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ. ತೀವ್ರ ರಕ್ತಸ್ರಾವದ ನಡುವೆಯೂ ಎದೆಗುಂದದ ಕ್ಯಾಪ್ಟನ್ ಸ್ಮಿತ್, ತಮ್ಮ ಪ್ರಾಣದ ಹಂಗು ತೊರೆದು ಉಗ್ರನ ವಿರುದ್ಧ ಹೋರಾಟಕ್ಕೆ ಇಳಿದರು. ತಮ್ಮೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ, ಒಳಗಿನಿಂದ ಮುಚ್ಚಿದ್ದ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಅವರು ಯಶಸ್ವಿಯಾದರು.

ಆಪದ್ಬಾಂಧವರಾದ ಪ್ರಯಾಣಿಕರು ಹಾಗೂ ತುರ್ತು ಭೂಸ್ಪರ್ಶ

ಯಾವಾಗ ಕ್ಯಾಪ್ಟನ್ ಪ್ರತಿರೋಧ ಒಡ್ಡಿದರೋ, ಕಂಗೆಟ್ಟ ಹಮ್ಮಾಮಿ ತಕ್ಷಣವೇ ಆಟೋಪೈಲಟ್ ವ್ಯವಸ್ಥೆಯನ್ನು ಆಫ್ ಮಾಡಿ ವಿಮಾನವನ್ನು ನೇರವಾಗಿ ಮರುಭೂಮಿಗೆ ಅಪ್ಪಳಿಸಲು ಯತ್ನಿಸಿದ. ಕೇವಲ ಒಂದು ನಿಮಿಷದ ಅಂತರದಲ್ಲಿ ವಿಮಾನವು 33,000 ಅಡಿಯಿಂದ 17,000 ಅಡಿಗೆ ಭೀಕರವಾಗಿ ಕುಸಿಯಿತು. ಆ ಕ್ಷಣದಲ್ಲಿ ವಿಮಾನದ ವೇಗ ಗಂಟೆಗೆ 970 ಕಿಲೋಮೀಟರ್ ದಾಟಿತ್ತು. ಈ ದಿಗ್ಭ್ರಮೆಗೊಳಿಸುವ ಸನ್ನಿವೇಶದಲ್ಲಿ, ಶೌಚಾಲಯದ ಬಳಿಯಿದ್ದ ಇಸ್ರೇಲಿ ಮಹಿಳೆ ತಾಲಿ ಬೆರ್ಕೊವಿಚ್-ಮಾನೆಸ್ ಕಾಕ್‌ಪಿಟ್‌ನಿಂದ ಬರುತ್ತಿದ್ದ ಅಸಹಜ ಶಬ್ದ ಕೇಳಿ ಎಚ್ಚೆತ್ತುಕೊಂಡರು. ತಕ್ಷಣ ಆಕೆಯ ಪತಿ ಜ್ವಿಕಾ ಸೇರಿದಂತೆ ಇತರ ಕೆಲವು ಪ್ರಯಾಣಿಕರು ಒಳನುಗ್ಗಿ ರಕ್ತಪಿಪಾಸು ದಾಳಿಕೋರನನ್ನು ಮಟ್ಟಹಾಕಿದರು. ಇದೇ ವೇಳೆ ಪ್ಲಂಬರ್ ಆಗಿ ಕೆಲಸ ಮಾಡುವ ಯಾನಿವ್ ಹಯುನ್ ಎಂಬ ಪ್ರಯಾಣಿಕ ಅಸಾಧಾರಣ ಸಮಯಪ್ರಜ್ಞೆ ಮೆರೆದು, ಕಂಟ್ರೋಲ್ ಸ್ಟಿಕ್ ಅನ್ನು ತಮ್ಮತ್ತ ಎಳೆದು ವಿಮಾನದ ಭಾರೀ ಕುಸಿತಕ್ಕೆ ಬ್ರೇಕ್ ಹಾಕಿದರು. ಬಳಿಕ ವಿಮಾನದಲ್ಲಿದ್ದ ಇಬ್ಬರು ರಜೆಯಲ್ಲಿದ್ದ ಪೈಲಟ್‌ಗಳು ಕಾಕ್‌ಪಿಟ್ ನಿಯಂತ್ರಣಕ್ಕೆ ತೆಗೆದುಕೊಂಡರು. ಕೊನೆಗೆ ಸೌದಿ ಅರೇಬಿಯಾದ ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ಮಾರ್ಗದರ್ಶನದಲ್ಲಿ ವಿಮಾನವನ್ನು ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಭದ್ರತಾ ಪಡೆಗಳು ದಾಳಿಕೋರನನ್ನು ಬಂಧಿಸಿವೆ.

Read More
Next Story