x

ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಕಾಳಗ: ಹಾರಾಟದ ನಡುವೆ 174 ಜೀವ ಉಳಿಸಿದ ಭಾರತೀಯ ಪೈಲಟ್

ಫ್ಲೈದುಬೈಗೆ ಸೇರಿದ ಬೋಯಿಂಗ್ 737 (FZ1073) ವಿಮಾನವು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದಾಗ ಘಟನೆ ನಡೆದಿದೆ.


Click the Play button to hear this message in audio format

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್‌ನಿಂದಲೇ ಮಾರಣಾಂತಿಕ ದಾಳಿಗೊಳಗಾಗಿದ್ದರೂ, ತೀವ್ರ ರಕ್ತಸ್ರಾವದ ನಡುವೆ ಕಾಕ್‌ಪಿಟ್ ಬಾಗಿಲು ತೆರೆದು 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸ ಜಗತ್ತಿನಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ. ಸೆಪ್ಟೆಂಬರ್ 30ರಂದು ನಡೆದ ಈ ಘಟನೆ ವಿಮಾನಯಾನ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಅಮೆರಿಕ, ಇಸ್ರೇಲ್ ಮತ್ತು ಭಾರತದ ನಾಯಕರು ಪೈಲಟ್ ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ.

ಫ್ಲೈದುಬೈಗೆ ಸೇರಿದ ಬೋಯಿಂಗ್ 737 (FZ1073) ವಿಮಾನವು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ ಇಸ್ರೇಲ್, ಭಾರತ, ಅಮೆರಿಕ ಹಾಗೂ ಯುಎಇ ಮೂಲದ 174 ಪ್ರಯಾಣಿಕರಿದ್ದರು. ವಿಮಾನವು ಆಕಾಶದಲ್ಲಿ ಚಲಿಸುತ್ತಿದ್ದಾಗ, ಕಾಕ್‌ಪಿಟ್‌ನೊಳಗೆ ಸಹ ಪೈಲಟ್ ಏಕಾಏಕಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಈ ದಾಳಿಯಿಂದ ಮಚ್ಚಾರ್ ಅವರ ತಲೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವ ಶುರುವಾಗಿದೆ. ಇದೇ ವೇಳೆ ವಿಮಾನದ ನಿಯಂತ್ರಣ ತಪ್ಪಿದ್ದು, ಕೇವಲ ಎರಡು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 17,400 ಅಡಿಯಷ್ಟು ತೀವ್ರವಾಗಿ ಕುಸಿದಿದೆ. ವಿಮಾನದಿಂದ ಮೊದಲು ಸಾಮಾನ್ಯ ತುರ್ತು ಸಂಕೇತ ಹಾಗೂ ಆನಂತರ ಹೈಜಾಕ್ ಅಥವಾ ಅಕ್ರಮ ಹಸ್ತಕ್ಷೇಪವನ್ನು ಸೂಚಿಸುವ 7500 ಸಂಕೇತ ರವಾನೆಯಾಗಿದೆ.

ಪ್ರಯಾಣಿಕರ ಪ್ರವೇಶಕ್ಕೆ ದಾರಿಮಾಡಿಕೊಟ್ಟ ಕ್ಯಾಪ್ಟನ್

ತೀವ್ರ ದಾಳಿಗೊಳಗಾಗಿ, ರಕ್ತದ ಮಡುವಿನಲ್ಲಿ ಕುಸಿದು ಬೀಳುವ ಹಂತದಲ್ಲಿದ್ದರೂ ಕ್ಯಾಪ್ಟನ್ ಮಚ್ಚಾರ್ ಅವರು ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಅವರ ಈ ಒಂದು ನಡೆಯೇ ಇಡೀ ವಿಮಾನದ ಸುರಕ್ಷತೆಗೆ ನಿರ್ಣಾಯಕವಾಯಿತು. ಬಾಗಿಲು ತೆರೆದುಕೊಳ್ಳುತ್ತಿದ್ದಂತೆ, ಇಸ್ರೇಲಿ ಪ್ರಯಾಣಿಕ ಯಾನಿವ್ ಹಯೂನ್ ಸೇರಿದಂತೆ ಕೆಲವರು ಹಾಗೂ ವಿಮಾನದಲ್ಲಿದ್ದ ಆಫ್-ಡ್ಯೂಟಿ ಪೈಲಟ್ ಕಾಕ್‌ಪಿಟ್ ಒಳಗೆ ನುಗ್ಗಿದ್ದಾರೆ. ದಾಳಿ ನಡೆಸುತ್ತಿದ್ದ ಪೈಲಟ್‌ನನ್ನು ಹಿಂದಕ್ಕೆ ಎಳೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ಆಫ್-ಡ್ಯೂಟಿ ಪೈಲಟ್ ವಿಮಾನದ ನಿಯಂತ್ರಣ ವ್ಯವಸ್ಥೆಯನ್ನು ಮರಳಿ ಸಮತೋಲನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ಯಾಪ್ಟನ್ ಮಚ್ಚಾರ್ ಅವರು ಈ ಹಿಂದೆ 10 ವರ್ಷಗಳಿಗೂ ಹೆಚ್ಚು ಕಾಲ ಸ್ಪೈಸ್‌ಜೆಟ್‌ನಲ್ಲಿ ಸೇವೆ ಸಲ್ಲಿಸಿದ್ದರು. ಬರೋಬ್ಬರಿ 9,750 ಗಂಟೆಗಳ ಹಾರಾಟದ ಅನುಭವ ಹೊಂದಿದ್ದ ಅವರ ಸಮಯಪ್ರಜ್ಞೆ ಭಾರಿ ಅನಾಹುತವನ್ನು ತಪ್ಪಿಸಿದೆ.

ತುರ್ತು ಭೂಸ್ಪರ್ಶ ಮತ್ತು ವೈದ್ಯಕೀಯ ನೆರವು

ವಿಮಾನದ ನಿಯಂತ್ರಣ ಸಿಕ್ಕ ಬಳಿಕ ಗಾಯಾಳು ಕ್ಯಾಪ್ಟನ್‌ಗೆ ವಿಮಾನದಲ್ಲಿದ್ದ ಇಸ್ರೇಲಿ ದಂತವೈದ್ಯ ಮುಸಾವ್ ಶೋಟಾ ಅವರು ಪ್ರಾಥಮಿಕ ಚಿಕಿತ್ಸೆ ನೀಡಿದರು. ರಕ್ತಸ್ರಾವ ತಡೆಯಲು ಅವರು ಶ್ರಮಿಸಿದರು. ಬಳಿಕ ವಿಮಾನವು ಟೆಲ್ ಅವೀವ್ ಬದಲಾಗಿ ಮಾರ್ಗ ಬದಲಿಸಿ ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಸೌದಿ ಅಧಿಕಾರಿಗಳು ತಕ್ಷಣವೇ ದಾಳಿಕೋರ ಪೈಲಟ್‌ನನ್ನು ವಶಕ್ಕೆ ಪಡೆದರು ಮತ್ತು ಕ್ಯಾಪ್ಟನ್ ಮಚ್ಚಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಭಾರತೀಯ ರಾಯಭಾರ ಕಚೇರಿಯು ಕ್ಯಾಪ್ಟನ್ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದೆ.

ಭಯೋತ್ಪಾದನಾ ಆಯಾಮದ ತನಿಖೆ ಮತ್ತು ಜಾಗತಿಕ ಪ್ರಶಂಸೆ

ಘಟನೆಯು ವಿಮಾನವನ್ನು ಅಸ್ತ್ರವಾಗಿ ಬಳಸುವ ಮತ್ತೊಂದು 9/11 ಮಾದರಿಯ ಸಂಚು ಆಗಿತ್ತೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ವಿಮಾನದಲ್ಲಿ ಬಹುಪಾಲು ಇಸ್ರೇಲಿಗರೇ ಇದ್ದ ಕಾರಣ, ಇದು ಇಸ್ರೇಲ್ ವಿರುದ್ಧದ ಪೂರ್ವಯೋಜಿತ ದಾಳಿಯೇ ಅಥವಾ ಕೇವಲ ವೈಯಕ್ತಿಕ ಸಂಘರ್ಷವೇ ಎಂಬ ನಿಟ್ಟಿನಲ್ಲಿ ಸೌದಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕದ ಡೊನಾಲ್ಡ್ ಟ್ರಂಪ್ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಕರ್ತವ್ಯನಿಷ್ಠೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅವರ ಹಿಂದಿನ ಸಂಸ್ಥೆ ಸ್ಪೈಸ್‌‌ಜೆಟ್‌ನ ಆಡಳಿತ ಮಂಡಳಿ ಕೂಡ ಭಾರತೀಯ ಪೈಲಟ್‌ನ ಕಾರ್ಯಕ್ಕೆ ಇಡೀ ದೇಶವೇ ಹೆಮ್ಮೆಪಡುತ್ತದೆ ಎಂದು ಹೇಳಿಕೆ ನೀಡಿದೆ. ಇಸ್ರೇಲಿ ನಾಗರಿಕರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಪ್ಟನ್ ಮಚ್ಚಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

Read More
Next Story