ಹಿಂದೂ ಧಾರ್ಮಿಕ ತಂಡದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಡುವಂತೆ ಸೂಚನೆ- ಐಫೆಲ್‌ ಟವರ್‌ನಲ್ಲಿ ಮುಷ್ಕರ
x

ಹಿಂದೂ ಧಾರ್ಮಿಕ ತಂಡದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಡುವಂತೆ ಸೂಚನೆ- ಐಫೆಲ್‌ ಟವರ್‌ನಲ್ಲಿ ಮುಷ್ಕರ

ಐಫೆಲ್ ಟವರ್ ಸಿಬ್ಬಂದಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ನಿಯೋಗದ ಭೇಟಿಯ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳನ್ನು ಬದಿಗೊತ್ತಿ, ಅವರ ಸ್ಥಾನಕ್ಕೆ ಪುರುಷರನ್ನು ನಿಯೋಜಿಸಲಾಗಿತ್ತು ಎಂದು ಆರೋಪಿಸಲಾಗಿದೆ.


Click the Play button to hear this message in audio format

ಫ್ರಾನ್ಸ್‌ನ ಪ್ಯಾರಿಸ್‌ನ ಪ್ರಸಿದ್ಧ ಐಫೆಲ್ ಟವರ್‌ನಲ್ಲಿ ಮಹಿಳಾ ಸಿಬ್ಬಂದಿಯನ್ನು ಲಿಂಗದ ಆಧಾರದ ಮೇಲೆ ಕೆಲಸದ ಸ್ಥಳದಿಂದ ದೂರ ಸರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರ ವಿರುದ್ಧ ಸಿಬ್ಬಂದಿ ಮುಷ್ಕರ ನಡೆಸಿದ್ದಾರೆ. ಸೋಮವಾರ ಹಿಂದೂ ಧಾರ್ಮಿಕ ತಂಡಯೊಂದರ ನಿಯೋಗ ಐಫೆಲ್ ಟವರ್‌ಗೆ ಖಾಸಗಿ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿ ಆ ಸ್ಥಳದಲ್ಲಿ ಇರದಿರುವಂತೆ ಸೂಚಿಸಲಾಗಿತ್ತು ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಈ ವಿವಾದವು ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS)ಗೆ ಸಂಬಂಧಿಸಿದ ಸುಮಾರು 100 ಮಂದಿಯ ನಿಯೋಗದ ಖಾಸಗಿ ಭೇಟಿಯಿಂದ ಆರಂಭವಾಗಿದೆ. ಪ್ಯಾರಿಸ್‌ನ ಹೊರವಲಯದಲ್ಲಿ ಹೊಸ ದೇವಾಲಯದ ಉದ್ಘಾಟನೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ಬಂದಿದ್ದ ನಿಯೋಗವು ಕಳೆದ ವಾರ ಐಫೆಲ್ ಟವರ್‌ಗೆ ಭೇಟಿ ನೀಡಿತ್ತು.

ಮಹಿಳಾ ಸಿಬ್ಬಂದಿಗೆ ಸ್ಥಳದಿಂದ ದೂರ ಸರಿಯುವಂತೆ ಸೂಚನೆ

ಐಫೆಲ್ ಟವರ್ ಸಿಬ್ಬಂದಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ನಿಯೋಗದ ಭೇಟಿಯ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳನ್ನು ಬದಿಗೊತ್ತಿ, ಅವರ ಸ್ಥಾನಕ್ಕೆ ಪುರುಷರನ್ನು ನಿಯೋಜಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಮಹಿಳಾ ಸಿಬ್ಬಂದಿ ಮತ್ತು ಗುತ್ತಿಗೆದಾರರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ನಿಯೋಗವನ್ನು ಸ್ವಾಗತಿಸುವ ಸಂದರ್ಭದಲ್ಲಿ ತಮ್ಮನ್ನು ಎದುರು ‘ಕಾಣಿಸಿಕೊಳ್ಳದಂತೆ’ ಇರಲು ಸೂಚಿಸಲಾಗಿತ್ತು ಎಂದು ಸಿಬ್ಬಂದಿ ಹೇಳಿದ್ದಾರೆ.

ಕೆಲ ಮಹಿಳಾ ಸಿಬ್ಬಂದಿಗೆ ತಮ್ಮ ಕೆಲಸದ ಸ್ಥಳವನ್ನು ತೊರೆದು ಬೇರೆ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿತ್ತು. ಕೆಲವು ಹುದ್ದೆಗಳಲ್ಲಿ ಅವರ ಬದಲಿಗೆ ಪುರುಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲದೆ, ನಿಯೋಗ ಐಫೆಲ್ ಟವರ್‌ನಲ್ಲಿರುವ ಅವಧಿಯಲ್ಲಿ ಮಹಿಳಾ ಸಿಬ್ಬಂದಿ ಕೆಲವು ನಿರ್ದಿಷ್ಟ ಪ್ರದೇಶಗಳ ಮೂಲಕ ಸಂಚರಿಸಬಾರದು ಅಥವಾ ಅವುಗಳನ್ನು ದಾಟಬಾರದು ಎಂಬ ಸೂಚನೆಯನ್ನೂ ನೀಡಲಾಗಿತ್ತು ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಈ ರೀತಿಯ ಪರಿಸ್ಥಿತಿಗೆ ತಮ್ಮನ್ನು ಒಳಪಡಿಸಿರುವುದಕ್ಕೆ ತೀವ್ರ ಆಘಾತವಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಫ್ರಾನ್ಸ್‌ನಲ್ಲಿ ತೀವ್ರ ಆಕ್ರೋಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾರಿಸ್ ಮೇಯರ್ ಎಮ್ಯಾನುಯೆಲ್ ಗ್ರೆಗ್ವಾರ್ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಸಿಬ್ಬಂದಿಯ ಆಕ್ರೋಶದ ಬಗ್ಗೆ ತಮಗೆ ಮಾಹಿತಿ ಇದ್ದು, ಅವರ ಅಸಮಾಧಾನ ನ್ಯಾಯಸಮ್ಮತವಾಗಿದೆ ಎಂದು ಅವರು ತಿಳಿಸಿದ್ದಾರೆ. “ಈ ಪ್ರತಿಭಟನೆಗೆ ಕಾರಣವಾದ ಘಟನೆಗಳ ಬಗ್ಗೆ ಸಾಧ್ಯವಾದಷ್ಟು ಬೇಗ ಸಂಪೂರ್ಣ ಬೆಳಕು ಚೆಲ್ಲುವುದು ತುರ್ತು ಅಗತ್ಯ,” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಫ್ರಾನ್ಸ್‌ನ ಸಮಾನತೆ ಸಚಿವೆ ಔರೋರ್ ಬರ್ಗೆ ಕೂಡ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಫ್ರಾನ್ಸ್‌ನಲ್ಲಿ ಮಹಿಳೆಯರಿಗೆ ತಮ್ಮನ್ನು ತಾವು ಅಳಿಸಿಕೊಳ್ಳುವಂತೆ ನಾವು ಹೇಳುವುದಿಲ್ಲ. ಯಾವುದೇ ಸಿದ್ಧಾಂತ, ಯಾವುದೇ ಧರ್ಮವೂ ಗಣರಾಜ್ಯದ ಕಾನೂನುಗಳಿಗಿಂತ ಮೇಲಲ್ಲ,” ಎಂದು ಅವರು ಹೇಳಿದ್ದಾರೆ.

ಫ್ರಾನ್ಸ್‌ನ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮರೀನ್ ಲೆ ಪೆನ್ ಕೂಡ ಘಟನೆಯನ್ನು ಖಂಡಿಸಿದ್ದು, ಮಹಿಳೆಯರ ಉಪಸ್ಥಿತಿಯನ್ನು ಸೀಮಿತಗೊಳಿಸುವುದನ್ನು ಫ್ರಾನ್ಸ್ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಕೇಂದ್ರಪಂಥೀಯ ನಾಯಕ ಗ್ಯಾಬ್ರಿಯೆಲ್ ಅಟ್ಟಾಲ್ ಕೂಡ ಪ್ರತಿಕ್ರಿಯಿಸಿದ್ದು, “ಫ್ರಾನ್ಸ್‌ನಲ್ಲಿ ಯಾವುದೇ ಸಂಸ್ಕೃತಿ, ನಂಬಿಕೆ, ಧರ್ಮ ಅಥವಾ ವ್ಯಕ್ತಿ ಮಹಿಳೆಯರ ಸ್ಥಾನ ಏನಾಗಿರಬೇಕು ಎಂಬುದನ್ನು ನಿರ್ದೇಶಿಸಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.

ಒಂದು ದಿನ ಬಂದ್ ಆಗಿದ್ದ ಐಫೆಲ್ ಟವರ್

ಪ್ರತಿವರ್ಷ ಸುಮಾರು 70 ಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ಐಫೆಲ್ ಟವರ್ ಸೋಮವಾರ ಇಡೀ ದಿನ ಮುಚ್ಚಲ್ಪಟ್ಟಿತ್ತು. ಸಿಬ್ಬಂದಿ ಪ್ರತಿನಿಧಿಯ ಪ್ರಕಾರ, ಮಂಗಳವಾರದಿಂದ ಗೋಪುರವು ಎಂದಿನಂತೆ ಪ್ರವಾಸಿಗರಿಗೆ ತೆರೆಯಲಿದೆ.

Read More
Next Story