ಪ್ರತೀಕಾರ ಬೇಡ, ಶಾಂತಿ ಮಾತುಕತೆ ಮುಖ್ಯ: ಇಸ್ರೇಲ್ ಪ್ರಧಾನಿಗೆ ಟ್ರಂಪ್ ಸೂಚನೆ
x

"ಪ್ರತೀಕಾರ ಬೇಡ, ಶಾಂತಿ ಮಾತುಕತೆ ಮುಖ್ಯ": ಇಸ್ರೇಲ್ ಪ್ರಧಾನಿಗೆ ಟ್ರಂಪ್ ಸೂಚನೆ

ಮೂರು ತಿಂಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ತೆರೆ ಎಳೆಯಲು ಅಮೆರಿಕವು ಶಾಂತಿ ಒಪ್ಪಂದ ಮಾತುಕತೆಯನ್ನು ಅಂತಿಮ ಹಂತಕ್ಕೆ ತಂದಿತ್ತು. ಆದರೆ, ಇರಾನ್‌ ದಾಳಿಯು ಶಾಂತಿ ಮಾತುಕತೆಗಳ ಮೇಲೆ ಕರಿನೆರಳು ಬೀರಿದೆ.


Click the Play button to hear this message in audio format

ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷವು ವಿಶ್ವದ ಗಮನ ಸೆಳೆದಿದೆ. ಈ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಇರಾನ್ ವಿರುದ್ಧ ಯಾವುದೇ ಪ್ರತೀಕಾರದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದ್ದಾರೆ.

ಮೂರು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷಕ್ಕೆ ತೆರೆ ಎಳೆಯಲು ಅಮೆರಿಕವು ಶಾಂತಿ ಒಪ್ಪಂದದ ಮಾತುಕತೆಯನ್ನು ಅಂತಿಮ ಹಂತಕ್ಕೆ ತಂದಿತ್ತು. ಆದರೆ, ಇರಾನ್‌ನ ದಾಳಿಯು ಶಾಂತಿ ಮಾತುಕತೆಗಳ ಮೇಲೆ ಕರಿನೆರಳು ಬೀರಿದೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡೋನಾಲ್ಡ್‌ ಟ್ರಂಪ್, "ಸದ್ಯದ ಸ್ಥಿತಿಯಲ್ಲಿ ಇಸ್ರೇಲ್ ಮತ್ತು ಇರಾನ್ ಎರಡೂ ತಮ್ಮ ವಿನೋದವನ್ನು ಪೂರೈಸಿಕೊಂಡಿವೆ. ಇಸ್ರೇಲ್ ತನ್ನ ಪ್ರತೀಕಾರದ ದಾಳಿಯನ್ನು ನಡೆಸಿದೆ, ಇರಾನ್ ತನ್ನ ದಾಳಿಯನ್ನು ನಡೆಸಿದೆ. ಈಗ ಇನ್ನೊಂದು ದಾಳಿಯ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸಂಘರ್ಷವನ್ನು ತಕ್ಷಣ ನಿಲ್ಲಿಸುವಂತೆ ಕರೆ ನೀಡಿದ್ದಾರೆ.

ಸಂಧಾನದ ಮಾತುಕತೆಯಲ್ಲಿ ಅಡಚಣೆ

ಅಮೆರಿಕದ ಪ್ರಮುಖ ಮಾಧ್ಯಮಗಳ ವರದಿಯಂತೆ, ಭಾನುವಾರ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಟ್ರಂಪ್ ಮತ್ತು ನೆತನ್ಯಾಹು ನಡುವೆ ದೂರವಾಣಿ ಸಂಭಾಷಣೆ ನಡೆದಿದೆ. ಶಾಂತಿ ಒಪ್ಪಂದಕ್ಕೆ ಅಮೆರಿಕ ತುಂಬಾ ಹತ್ತಿರದಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ. ನಾವು ಒಪ್ಪಂದದ ಅತ್ಯಂತ ಸಮೀಪದಲ್ಲಿದ್ದೇವೆ. ಬಹುಶಃ ಈ ವಾರದ ಸೋಮವಾರ, ಮಂಗಳವಾರ ಅಥವಾ ಬುಧವಾರದೊಳಗೆ ಒಪ್ಪಂದಕ್ಕೆ ಸಹಿ ಹಾಕಬಹುದು ಎಂದು ನಾನು ಭಾವಿಸಿದ್ದೆ. ಆದರೆ, ಈಗ ಈ ದಾಳಿಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ನಿಮ್ಮ ಕ್ಷಿಪಣಿಗಳನ್ನು ಉಡಾಯಿಸಿದ್ದೀರಿ, ಅದು ಸಾಕು. ಮತ್ತೆ ಮಾತುಕತೆಯ ಮೇಜಿನ ಬಳಿ ಬನ್ನಿ ಮತ್ತು ಒಪ್ಪಂದ ಮಾಡಿಕೊಳ್ಳಿ. ಇರಾನ್‌ನ ಈ ದಾಳಿಯಿಂದ ಯಾರಿಗೂ ಗಂಭೀರವಾದ ಗಾಯಗಳಾಗಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿದ ಟ್ರಂಪ್, ಪ್ರತೀಕಾರದ ಬದಲು ಶಾಂತಿಯೇ ಮಾರ್ಗ ಎಂದು ಒತ್ತಿ ಹೇಳಿದ್ದಾರೆ.

ನೆತನ್ಯಾಹುಗೆ ಟ್ರಂಪ್ ಎಚ್ಚರಿಕೆ

ಅಮೆರಿಕ ಇರಾನ್‌ನೊಂದಿಗೆ ಅಂತಿಮವಾಗಿ ರೂಪಕ್ಕೆ ತರಲಿರುವ ಶಾಂತಿ ಒಪ್ಪಂದಕ್ಕೆ ನೆತನ್ಯಾಹು ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದ್ದಾರೆ. ಅವರಿಗೆ ಬೇರೆ ದಾರಿಯಿಲ್ಲ ಎಂದು ಹೇಳುವ ಮೂಲಕ, ಅಮೆರಿಕವೇ ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನೆತನ್ಯಾಹು ದಾಳಿ ನಡೆಸಿದರೆ, ಅದು ಕಳೆದ 47 ವರ್ಷಗಳಿಂದ, ಅಥವಾ ಕಳೆದ 3,000 ವರ್ಷಗಳಿಂದ ನಡೆದುಕೊಂಡು ಬಂದಿರುವ ಅಂತ್ಯವಿಲ್ಲದ ಯುದ್ಧದ ಸರಣಿಯನ್ನೇ ಮುಂದುವರಿಸಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, ಭಾನುವಾರ ಬೈರುತ್ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, "ಈ ದಾಳಿಯಿಂದ ನನಗೆ ಸಂತೋಷವಿಲ್ಲ" ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

Read More
Next Story