
ಟ್ರಂಪ್ ಆಡಳಿತದ ಪ್ರಸ್ತಾವಿತ ವೀಸಾ ನಿಯಮಕ್ಕೆ ಅಮೆರಿಕದ ಫೆಡರಲ್ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ.
ವಿದೇಶಿ ವಿದ್ಯಾರ್ಥಿಗಳು, ಪತ್ರಕರ್ತರಿಗೆ ಟ್ರಂಪ್ ಸರ್ಕಾರದ ವೀಸಾ ನಿಯಮಕ್ಕೆ ತಡೆ
ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಪ್ರಸ್ತುತ ಚಾಲ್ತಿಯಲ್ಲಿರುವ ‘ಡ್ಯುರೇಷನ್ ಆಫ್ ಸ್ಟೇಟಸ್’ (ವಿದ್ಯಾಭ್ಯಾಸ ಮುಗಿಯುವವರೆಗೂ ಉಳಿಯುವ ಅವಕಾಶ) ವ್ಯವಸ್ಥೆಯನ್ನು ರದ್ದುಗೊಳಿಸಲು ಮುಂದಾಗಿತ್ತು. ಹೊಸ ನಿಯಮವು ಸೆಪ್ಟೆಂಬರ್ 15ರಿಂದ ಅಧಿಕೃತವಾಗಿ ಜಾರಿಗೆ ಬರಬೇಕಿತ್ತು.
ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿ ಇರುವವರ ವಾಸ್ತವ್ಯದ ಅವಧಿಗೆ ಗರಿಷ್ಠ ಮಿತಿ ವಿಧಿಸುವ ಟ್ರಂಪ್ ಆಡಳಿತದ ಪ್ರಸ್ತಾವಿತ ವೀಸಾ ನಿಯಮಕ್ಕೆ ಅಮೆರಿಕದ ಫೆಡರಲ್ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ.
ಟ್ರಂಪ್ ಆಡಳಿತ ಜಾರಿಗೆ ತರಲು ಉದ್ದೇಶಿಸಿದ್ದ ಹೊಸ ನಿಯಮದ ಪ್ರಕಾರ, F (ವಿದ್ಯಾರ್ಥಿ) ಮತ್ತು J (ಸಾಂಸ್ಕೃತಿಕ ವಿನಿಮಯ) ವೀಸಾದಡಿ ಬರುವ ವಿದೇಶಿ ವಿದ್ಯಾರ್ಥಿಗಳು ಅಮೆರಿಕದಲ್ಲಿ ಗರಿಷ್ಠ 4 ವರ್ಷಗಳವರೆಗೆ ಮಾತ್ರ ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಉಳಿದುಕೊಳ್ಳಲು ಅವಕಾಶವಿತ್ತು. ನಾಲ್ಕು ವರ್ಷಗಳ ನಂತರ ಶಿಕ್ಷಣ ಮುಂದುವರಿಸಬೇಕಾದರೆ ವಾಸ್ತವ್ಯ ವಿಸ್ತರಣೆಗೆ ಪ್ರತ್ಯೇಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿತ್ತು. ಇದರೊಂದಿಗೆ ಪತ್ರಕರ್ತರಿಗೆ ನೀಡಲಾಗುವ I ವೀಸಾ ವಾಸ್ತವ್ಯವನ್ನು ಕೇವಲ 240 ದಿನಗಳಿಗೆ ಸೀಮಿತಗೊಳಿಸಲು ಪ್ರಸ್ತಾಪಿಸಲಾಗಿತ್ತು.
ಸೆ.15ರಿಂದ ಜಾರಿಗೆ ಬರಬೇಕಿದ್ದ ನಿಯಮ
ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಪ್ರಸ್ತುತ ಚಾಲ್ತಿಯಲ್ಲಿರುವ ‘ಡ್ಯುರೇಷನ್ ಆಫ್ ಸ್ಟೇಟಸ್’ (ವಿದ್ಯಾಭ್ಯಾಸ ಮುಗಿಯುವವರೆಗೂ ಉಳಿಯುವ ಅವಕಾಶ) ವ್ಯವಸ್ಥೆಯನ್ನು ರದ್ದುಗೊಳಿಸಿ, ನಿಗದಿತ ದಿನಾಂಕದ ಆಧಾರದ ಮೇಲೆ ವಾಸ್ತವ್ಯ ನಿಗದಿಪಡಿಸಲು ಮುಂದಾಗಿತ್ತು. ಈ ನಿಯಮವು ಸೆಪ್ಟೆಂಬರ್ 15ರಿಂದ ಅಧಿಕೃತವಾಗಿ ಜಾರಿಗೆ ಬರಬೇಕಿತ್ತು.
ಅಮೆರಿಕ ನ್ಯಾಯಾಲಯದ ಪ್ರಮುಖ ಆದೇಶ
ಬೋಸ್ಟನ್‌ನ ಅಮೆರಿಕ ಜಿಲ್ಲಾ ನ್ಯಾಯಾಧೀಶ ಎಫ್. ಡೆನ್ನಿಸ್ ಸೇಲರ್ ಅವರು ನಿಯಮ ಜಾರಿಗೆ ತಡೆ ನೀಡಿ ಆದೇಶಿಸಿದ್ದಾರೆ. ಈ ಕಠಿಣ ನಿಯಮವನ್ನು ಜಾರಿಗೆ ತರಲು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲ ಹಾಗೂ ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ತಂದಿರುವ ಈ ನಿಯಮಕ್ಕೆ ಬಲವಾದ ಆಧಾರವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ಸಾರ್ವಜನಿಕ ಮತ್ತು ಶಿಕ್ಷಣ ಕ್ಷೇತ್ರದ ಕಳವಳಗಳನ್ನು ಆಡಳಿತ ಮಂಡಳಿ ಸರಿಯಾಗಿ ಪರಿಗಣಿಸಿಲ್ಲ ಎಂದು ಕೋರ್ಟ್ ಹೇಳಿದೆ.
ಈ ಹೊಸ ವೀಸಾ ಕಟ್ಟುಪಾಡುಗಳಿಂದಾಗಿ ವಿದೇಶಿ ವಿದ್ಯಾರ್ಥಿಗಳು ಅಮೆರಿಕಕ್ಕೆ ಬರುವುದು ಕಡಿಮೆಯಾಗಿ, ಅಲ್ಲಿನ ಉನ್ನತ ಶಿಕ್ಷಣ ಕ್ಷೇತ್ರ ಮತ್ತು ಆರ್ಥಿಕತೆಗೆ ಭಾರಿ ಪೆಟ್ಟು ಬೀಳುವ ಆತಂಕ ವ್ಯಕ್ತವಾಗಿತ್ತು. ವಿದೇಶಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಅಮೆರಿಕದ ನಾವೀನ್ಯತೆ, ಸಂಶೋಧನೆ ಮತ್ತು ತಂತ್ರಜ್ಞಾನ ರಂಗಕ್ಕೆ ನೀಡುತ್ತಿರುವ ಕೊಡುಗೆಯನ್ನು ನ್ಯಾಯಾಲಯವೂ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಭಾರತೀಯ ವಿದ್ಯಾರ್ಥಿಗಳಿಗೆ ನಿರಾಳತೆ
ಅಮೆರಿಕದಲ್ಲಿ ಉನ್ನತ ವ್ಯಾಸಂಗ (ವಿಶೇಷವಾಗಿ ಪಿಎಚ್‌ಡಿ ಮತ್ತು ಸಂಶೋಧನೆ) ಮಾಡುತ್ತಿರುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳಿಗೆ ಈ ನಿಯಮ ಜಾರಿಯಾದರೆ ಸಂಕಷ್ಟ ಎದುರಾಗುವ ಭೀತಿಯಿತ್ತು. ನ್ಯಾಯಾಲಯ ನೀಡಿದ ಈ ತಾತ್ಕಾಲಿಕ ತಡೆ ಆದೇಶವು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ದೊಡ್ಡ ಸಮಾಧಾನ ತಂದಿದೆ.

