
ಎಚ್-1ಬಿ ವೀಸಾದ 60 ದಿನಗಳ ಗಡುವು ರದ್ದಾಗುತ್ತಾ? ಉದ್ಯೋಗ ಅಮೆರಿಕದಲ್ಲಿ ಕಳೆದುಕೊಂಡಿರುವ ಭಾರತೀಯರ ಗತಿ ಏನು?
ಉದ್ಯೋಗ ಕಳೆದುಕೊಂಡ ಎಚ್-1ಬಿ ವೀಸಾ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ 60 ದಿನಗಳ ಅವಧಿಯನ್ನು ರದ್ದುಗೊಳಿಸಲು ಟ್ರಂಪ್ ಸರ್ಕಾರ ಮುಂದಾಗಿದೆ. ಹೊಸ ನಿಯಮ ಜಾರಿಯಾದರೆ ಭಾರತೀಯ ಉದ್ಯೋಗಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡ ಬಳಿಕ ಹೊಸ ಉದ್ಯೋಗ ಹುಡುಕಲು ವಿದೇಶಿ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ 60 ದಿನಗಳ ಅವಧಿಯನ್ನು ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಸರ್ಕಾರ ಇದೀಗ ಮುಂದಾಗಿದೆ. ಎಚ್-1ಬಿ ಸೇರಿದಂತೆ ಕೆಲವು ತಾತ್ಕಾಲಿಕ ಉದ್ಯೋಗ ವೀಸಾಗಳನ್ನು ಹೊಂದಿರುವವರು ಉದ್ಯೋಗ ಕಳೆದುಕೊಂಡ ತಕ್ಷಣವೇ ಅಮೆರಿಕ ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
ಟ್ರಂಪ್ ಆಡಳಿತದ ಈ ಪ್ರಸ್ತಾವನೆ ಜಾರಿಗೆ ಬಂದರೆ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಎಚ್-1ಬಿ ವೀಸಾ ಉದ್ಯೋಗಿಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ತಂತ್ರಜ್ಞಾನ, ಸಾಫ್ಟ್‌ವೇರ್, ಸಲಹಾ ಸೇವೆ ಮತ್ತು ಹೊರಗುತ್ತಿಗೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಭಾರತೀಯ ವೃತ್ತಿಪರರಿಗೆ ಉದ್ಯೋಗ ಕಳೆದುಕೊಂಡ ಸಂದರ್ಭದಲ್ಲಿ ಹೊಸ ಉದ್ಯೋಗ ಹುಡುಕಲು ಸಿಗುತ್ತಿದ್ದ 60 ದಿನಗಳ ಅವಕಾಶ ಇಲ್ಲವಾಗಬಹುದು.
ಪ್ರಸ್ತುತ ಉದ್ಯೋಗ ಕಳೆದುಕೊಂಡ ಎಚ್-1ಬಿ ವೀಸಾ ಹೊಂದಿರುವವರು 60 ದಿನಗಳೊಳಗೆ ಹೊಸ ಉದ್ಯೋಗದಾತರನ್ನು ಹುಡುಕಿ, ಅವರ ಮೂಲಕ ಹೊಸ ವೀಸಾ ಅರ್ಜಿ ಪ್ರಕ್ರಿಯೆ ಆರಂಭಿಸಬಹುದು. ಆದರೆ ಈ ಅವಧಿ ರದ್ದಾದರೆ, ಉದ್ಯೋಗ ಕೊನೆಗೊಂಡ ತಕ್ಷಣವೇ ಅಮೆರಿಕ ತೊರೆಯಬೇಕಾದ ಒತ್ತಡ ಎದುರಾಗಬಹುದು. ಇದರಿಂದ ಹೊಸ ಉದ್ಯೋಗ ಹುಡುಕಲು ಭಾರತೀಯ ಉದ್ಯೋಗಿಗಳಿಗೆ ಬಹಳ ಕಡಿಮೆ ಸಮಯ ಸಿಗಲಿದೆ.
ಭಾರತೀಯ ಐಟಿ ಕಂಪನಿಗಳ ಮೇಲೂ ಪರಿಣಾಮ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ ಮತ್ತು ಎಲ್‌ಟಿಐಮೈಂಡ್‌ಟ್ರೀ ಸೇರಿದಂತೆ ಹಲವು ಭಾರತೀಯ ಐಟಿ ಕಂಪನಿಗಳು ಅಮೆರಿಕದಲ್ಲಿ ಎಚ್-1ಬಿ ವೀಸಾ ಮೂಲಕ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ. ಹೊಸ ನಿಯಮ ಜಾರಿಗೆ ಬಂದರೆ, ಉದ್ಯೋಗ ಕಡಿತ, ಉದ್ಯೋಗಿಗಳ ವರ್ಗಾವಣೆ ಮತ್ತು ವೀಸಾ ಪ್ರಕ್ರಿಯೆಗಳನ್ನು ಕಂಪನಿಗಳು ಇನ್ನಷ್ಟು ವೇಗವಾಗಿ ನಿರ್ವಹಿಸಬೇಕಾಗಬಹುದು.
ಇದರ ಪರಿಣಾಮವಾಗಿ ಅಮೆರಿಕದಲ್ಲಿರುವ ಭಾರತೀಯ ಉದ್ಯೋಗಿಗಳು ಹೊಸ ಉದ್ಯೋಗದಾತರನ್ನು ಹುಡುಕುವ ಸಂದರ್ಭದಲ್ಲಿ ಹೆಚ್ಚಿನ ಅನಿಶ್ಚಿತತೆಯನ್ನು ಎದುರಿಸಬಹುದು. ಕಂಪನಿಗಳಿಗೂ ವಿದೇಶಿ ಉದ್ಯೋಗಿಗಳ ಉದ್ಯೋಗ ಕಡಿತದ ಸಂದರ್ಭದಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಅಮೆರಿಕದ ಗೃಹ ಭದ್ರತಾ ಇಲಾಖೆ ಈ ಕುರಿತು ಪ್ರಸ್ತಾವಿತ ನಿಯಮ ಬದಲಾವಣೆಯನ್ನು ಗುರುವಾರ ಫೆಡರಲ್ ರಿಜಿಸ್ಟರ್‌ನಲ್ಲಿ ಪ್ರಕಟಿಸಿದೆ. 2017ರಿಂದ ಜಾರಿಯಲ್ಲಿರುವ ನಿಯಮದ ಪ್ರಕಾರ, ಎಚ್-1ಬಿ ವೀಸಾ ಹೊಂದಿರುವವರು ಉದ್ಯೋಗ ಕಳೆದುಕೊಂಡ ನಂತರ ಗರಿಷ್ಠ 60 ದಿನಗಳವರೆಗೆ ಅಮೆರಿಕದಲ್ಲಿದ್ದು, ಹೊಸ ಉದ್ಯೋಗ ಹುಡುಕಲು ಅಥವಾ ತಮ್ಮ ವೀಸಾ ಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ.
ಹೊಸ ನಿಯಮದಿಂದ ಉದ್ಯೋಗ ಕಡಿತ ಮತ್ತು ವಿದೇಶಿ ಉದ್ಯೋಗಿಗಳ ನಿರ್ಗಮನ ಪ್ರಕ್ರಿಯೆಗಳನ್ನು ಕಂಪನಿಗಳ ಮಾನವ ಸಂಪನ್ಮೂಲ ವಿಭಾಗಗಳು ತ್ವರಿತವಾಗಿ ನಿರ್ವಹಿಸಬೇಕಾಗುತ್ತದೆ ಎಂದು ವಲಸೆ ಕಾನೂನು ತಜ್ಞರು ಹೇಳಿದ್ದಾರೆ. ಮತ್ತೊಂದೆಡೆ, ಈ ಹುದ್ದೆಗಳನ್ನು ಸಮಾನ ಅರ್ಹತೆ ಹೊಂದಿರುವ ಅಮೆರಿಕನ್ನರಿಗೆ ನೀಡುವ ಸಾಧ್ಯತೆ ಇದೆ ಎಂದು ಗೃಹ ಭದ್ರತಾ ಇಲಾಖೆ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಉದ್ಯೋಗ ಕಳೆದುಕೊಂಡು ಅಮೆರಿಕ ತೊರೆದ ವಿದೇಶಿ ಉದ್ಯೋಗಿಗಳು, ಅವರ ಹಿಂದಿನ ಅಥವಾ ಹೊಸ ಉದ್ಯೋಗದಾತರು ಮತ್ತೆ ಅರ್ಜಿ ಸಲ್ಲಿಸಿದರೆ, ಮುಂದಿನ ದಿನಗಳಲ್ಲಿ ವೀಸಾ ಮೂಲಕ ಮರುಪ್ರವೇಶಿಸಲು ಅವಕಾಶ ಇರಬಹುದು ಎಂದು ಇಲಾಖೆ ಹೇಳಿದೆ.
ಈ ನಿಯಮ ಬದಲಾವಣೆ ಎಚ್-1ಬಿ ಮಾತ್ರವಲ್ಲದೆ, ಇ-1 ಅಂತರರಾಷ್ಟ್ರೀಯ ವ್ಯಾಪಾರಿ ವೀಸಾ, ಇ-2 ವಾಣಿಜ್ಯ ವಾಹನ ಚಾಲಕರ ವೀಸಾ, ಎಲ್-1 ವ್ಯವಸ್ಥಾಪಕರು ಮತ್ತು ಕಾರ್ಯನಿರ್ವಾಹಕರ ವೀಸಾ, ವಿಜ್ಞಾನ, ಕ್ರೀಡೆ ಅಥವಾ ಕಲೆ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವವರಿಗೆ ನೀಡುವ ಓ-1 ವೀಸಾ ಹಾಗೂ ಟಿಎನ್ ವೃತ್ತಿಪರ ವೀಸಾಗಳಿಗೂ ಅನ್ವಯಿಸುವ ಸಾಧ್ಯತೆ ಇದೆ.
ಇದರ ಜೊತೆಗೆ ಸಿಂಗಾಪುರ ಮತ್ತು ಚಿಲಿಯ ನುರಿತ ಉದ್ಯೋಗಿಗಳಿಗೆ ನೀಡುವ ಎಚ್-1ಬಿ1 ವೀಸಾ ಹಾಗೂ ಆಸ್ಟ್ರೇಲಿಯಾದ ವಿಶೇಷ ಕೌಶಲ್ಯ ಹೊಂದಿರುವ ಉದ್ಯೋಗಿಗಳಿಗೆ ನೀಡುವ ಇ-3 ವೀಸಾಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಈ ನಿಯಮ ಇನ್ನೂ ಜಾರಿಗೆ ಬಂದಿಲ್ಲ. ಪ್ರಸ್ತಾವಿತ ಬದಲಾವಣೆಯ ಕುರಿತು ಎರಡು ತಿಂಗಳ ಕಾಲ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸ್ವೀಕರಿಸಲಾಗುತ್ತದೆ. ಆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

