Iran War| ಇರಾನ್ ಅಣ್ವಸ್ತ್ರ ಸಂಘರ್ಷಕ್ಕೆ ಬಿಗ್ ಟ್ವಿಸ್ಟ್: ಯುರೇನಿಯಂ ಹಸ್ತಾಂತರಕ್ಕೆ ಇರಾನ್ ಒಪ್ಪಿಗೆ
x
ಡೊನಾಲ್ಡ್‌ ಟ್ರಂಪ್‌(ಸಂಗ್ರಹ ಚಿತ್ರ)

Iran War| ಇರಾನ್ ಅಣ್ವಸ್ತ್ರ ಸಂಘರ್ಷಕ್ಕೆ ಬಿಗ್ ಟ್ವಿಸ್ಟ್: ಯುರೇನಿಯಂ ಹಸ್ತಾಂತರಕ್ಕೆ ಇರಾನ್ ಒಪ್ಪಿಗೆ

ಇರಾನ್ ತನ್ನ ಯುರೇನಿಯಂ ಸಂಗ್ರಹ ಹಸ್ತಾಂತರಿಸಲು ಒಪ್ಪಿದ್ದು, ಅಮೆರಿಕ ಅಧ್ಯಕ್ಷ ಟ್ರಂಪ್ ಈ ಬೆಳವಣಿಗೆಯನ್ನು ಐತಿಹಾಸಿಕ ಗೆಲುವು ಎಂದು ಬಣ್ಣಿಸಿದ್ದಾರೆ.


Click the Play button to hear this message in audio format

ಕಳೆದ ಆರು ವಾರಗಳಿಂದ ನಡೆಯುತ್ತಿರುವ ಭೀಕರ ಸಂಘರ್ಷಕ್ಕೆ ತೆರೆಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಹಸ್ತಾಂತರಿಸಲು ಒಪ್ಪಿಕೊಂಡಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಐತಿಹಾಸಿಕ ಒಪ್ಪಂದವೊಂದು ಶೀಘ್ರದಲ್ಲೇ ಏರ್ಪಡುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ತಿಳಿಸಿದ್ದಾರೆ.

"ನ್ಯೂಕ್ಲಿಯರ್ ಡಸ್ಟ್" ನೀಡಲು ಇರಾನ್ ಸಿದ್ಧ

ವೈಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಅವರು ನಮಗೆ ನ್ಯೂಕ್ಲಿಯರ್ ಡಸ್ಟ್ (ಸಮೃದ್ಧ ಯುರೇನಿಯಂ) ಹಿಂತಿರುಗಿಸಲು ಒಪ್ಪಿದ್ದಾರೆ. ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳುವ ಅತ್ಯುತ್ತಮ ಅವಕಾಶಗಳು ಈಗ ನಿರ್ಮಾಣವಾಗಿವೆ" ಎಂದರು. ಕಳೆದ ನಾಲ್ಕು ವಾರಗಳ ಬಾಂಬ್ ದಾಳಿ ಮತ್ತು ಕಟ್ಟುನಿಟ್ಟಿನ ದಿಗ್ಬಂಧನದಿಂದಾಗಿ ಇರಾನ್ ಈಗ ಮಾತುಕತೆಗೆ ಮಣಿದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಸ್ಲಾಮಾಬಾದ್‌ನಲ್ಲಿ ಒಪ್ಪಂದಕ್ಕೆ ಸಹಿ?

ವಿಶೇಷವೆಂದರೆ, ಈ ಸಂಧಾನ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಟ್ರಂಪ್ ಶ್ಲಾಘಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಅವರ ಮಧ್ಯಸ್ಥಿಕೆಯನ್ನು ಹೊಗಳಿದ ಟ್ರಂಪ್, "ಒಂದು ವೇಳೆ ಇಸ್ಲಾಮಾಬಾದ್‌ನಲ್ಲಿ ಈ ಒಪ್ಪಂದಕ್ಕೆ ಸಹಿ ಬಿದ್ದರೆ ನಾನು ಅಲ್ಲಿಗೆ ಖುದ್ದಾಗಿ ಭೇಟಿ ನೀಡಬಹುದು" ಎಂದು ಸುಳಿವು ನೀಡಿದ್ದಾರೆ.

ಪೋಪ್ ಲಿಯೋ ವಿರುದ್ಧ ಟ್ರಂಪ್ ವಾಗ್ದಾಳಿ

ಇರಾನ್ ಸಂಘರ್ಷದ ವಿಚಾರದಲ್ಲಿ ಶಾಂತಿಗಾಗಿ ಕರೆ ನೀಡಿದ್ದ ಕ್ಯಾಥೋಲಿಕ್ ಧರ್ಮಗುರು ಪೋಪ್ ಲಿಯೋ XIV ಅವರ ನಿಲುವನ್ನು ಟ್ರಂಪ್ ಟೀಕಿಸಿದ್ದಾರೆ. "ಇರಾನ್ ಅಣ್ವಸ್ತ್ರ ಹೊಂದುವುದು ಇಡೀ ಜಗತ್ತಿಗೆ ಅಪಾಯಕಾರಿ ಎಂಬದನ್ನು ಪೋಪ್ ಅರ್ಥಮಾಡಿಕೊಳ್ಳಬೇಕು. ಯುದ್ಧದ ಬಗ್ಗೆ ಅವರು ಏನು ಬೇಕಾದರೂ ಹೇಳಲಿ, ಆದರೆ ಇರಾನ್ ಕೈಗೆ ಅಣ್ವಸ್ತ್ರ ಸಿಗದಂತೆ ತಡೆಯುವುದು ನನ್ನ ಉದ್ದೇಶ" ಎಂದು ಟ್ರಂಪ್ ಖಡಕ್ ಆಗಿ ಹೇಳಿದರು.

ಒಪ್ಪಂದದ ಪ್ರಮುಖ ಅಂಶಗಳು:

• ಯುರೇನಿಯಂ ಹಸ್ತಾಂತರ: ತನ್ನ ಬಳಿ ಇರುವ ಯುರೇನಿಯಂ ಸಂಗ್ರಹದ ಬಹುಪಾಲನ್ನು ದೇಶದಿಂದ ಹೊರಕ್ಕೆ ಕಳುಹಿಸಲು ಇರಾನ್ ಒಪ್ಪುವ ಸಾಧ್ಯತೆಯಿದೆ.

• ಅಣ್ವಸ್ತ್ರ ಚಟುವಟಿಕೆ ಸ್ಥಗಿತ: ಅಮೆರಿಕವು 20 ವರ್ಷಗಳ ಕಾಲ ಅಣ್ವಸ್ತ್ರ ಚಟುವಟಿಕೆ ನಿಲ್ಲಿಸಲು ಒತ್ತಾಯಿಸುತ್ತಿದ್ದರೆ, ಇರಾನ್ 3 ರಿಂದ 5 ವರ್ಷಗಳ ಕಾಲಾವಧಿಗೆ ಪ್ರಸ್ತಾಪ ನೀಡಿದೆ.

• ನಿರ್ಬಂಧಗಳ ತೆರವು: ಯುರೇನಿಯಂ ನೀಡುವ ಬದಲಾಗಿ ತನ್ನ ಮೇಲೆ ಹೇರಲಾಗಿರುವ ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಇರಾನ್ ಆಗ್ರಹಿಸಿದೆ.

ಒಂದು ವೇಳೆ ಈ ಮಾತುಕತೆ ಯಶಸ್ವಿಯಾಗದಿದ್ದರೆ, ಮುಂದಿನ ವಾರ ಕದನ ವಿರಾಮ ಮುಕ್ತಾಯಗೊಂಡ ಕೂಡಲೇ ಯುದ್ಧ ಮತ್ತೆ ತೀವ್ರಗೊಳ್ಳುವ ಆತಂಕವೂ ಇದೆ.

Read More
Next Story