ಭಾರತದ ಚುನಾವಣಾ ವ್ಯವಸ್ಥೆ ಮೆಚ್ಚಿದ ಟ್ರಂಪ್; ಅಮೆರಿಕದಲ್ಲೂ ಮತದಾರರ ಐಡಿಗೆ ಒತ್ತಾಯ
x

ಭಾರತದ ಮಾದರಿ ಉಲ್ಲೇಖಿಸಿ ಅಮೆರಿಕದಲ್ಲಿ ಮತದಾರರ ಐಡಿ ಕಡ್ಡಾಯಕ್ಕೆ ಟ್ರಂಪ್ ಒತ್ತಾಯ

ಭಾರತದ ಚುನಾವಣಾ ವ್ಯವಸ್ಥೆ ಮೆಚ್ಚಿದ ಟ್ರಂಪ್; ಅಮೆರಿಕದಲ್ಲೂ ಮತದಾರರ ಐಡಿಗೆ ಒತ್ತಾಯ

ಭಾರತದ ಮತದಾರರ ಗುರುತಿನ ವ್ಯವಸ್ಥೆಯನ್ನು ಉಲ್ಲೇಖಿಸಿದ ಡೊನಾಲ್ಡ್‌ ಟ್ರಂಪ್, ಅಮೆರಿಕದಲ್ಲಿ ಪೌರತ್ವ ಪುರಾವೆ ಮತ್ತು ಫೋಟೋ ಐಡಿ ಕಡ್ಡಾಯಗೊಳಿಸುವ ಸೇವ್ ಅಮೆರಿಕ ಆಕ್ಟ್‌ಗೆ ಬೆಂಬಲ ಕೋರಿದ್ದಾರೆ.


Click the Play button to hear this message in audio format

ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಗುರುತಿನ ಚೀಟಿ ಕಡ್ಡಾಯಗೊಳಿಸುವ ವಿಚಾರ ಭಾರೀ ಚರ್ಚೆಯಲ್ಲಿದೆ. ಭಾರತದ ಚುನಾವಣಾ ವ್ಯವಸ್ಥೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಠಿಣ ಮತದಾರರ ಗುರುತಿನ ನಿಯಮ ಜಾರಿಗೆ ಒತ್ತಾಯಿಸಿದ್ದು, ‘ಸೇವ್ ಅಮೆರಿಕ ಆಕ್ಟ್’ಗೆ ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ.

ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಇತ್ತೀಚೆಗೆ ಅಮೆರಿಕದಲ್ಲಿ ಮಾನ್ಯ ಫೋಟೋ ಗುರುತಿನ ಚೀಟಿ ಇಲ್ಲದೆ ಚುನಾವಣೆ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿದ್ದರು ಎಂದು ಹೇಳಿದ್ದಾರೆ. ಚುನಾವಣಾ ಅಕ್ರಮಗಳನ್ನು ತಡೆಯಲು ಪ್ರತಿಯೊಬ್ಬ ಮತದಾರನಿಗೂ ಕಡ್ಡಾಯ ಫೋಟೋ ಐಡಿ ಇರಬೇಕು ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಭಾರತದ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ 64.6 ಕೋಟಿ ಮತದಾರರು ಮತ ಚಲಾಯಿಸಿದ್ದು, ಶೇ.1ಕ್ಕಿಂತಲೂ ಕಡಿಮೆ ಮಂದಿ ಅಂಚೆ ಮತದಾನ ಬಳಸಿದ್ದಾರೆ. ಪ್ರತಿಯೊಬ್ಬ ಮತದಾರನೂ ಮಾನ್ಯ ಫೋಟೋ ಗುರುತಿನ ದಾಖಲೆ ಹೊಂದಿರಬೇಕಾಗಿತ್ತು ಎಂದು ಟ್ರಂಪ್ ಹೇಳಿದ್ದಾರೆ.

‘ಸೇವ್ ಅಮೆರಿಕ ಆಕ್ಟ್’ನಲ್ಲಿ ಏನಿದೆ?

ಜನವರಿ 29ರಂದು ಮಂಡನೆಯಾದ ಸೇವ್ ಅಮೆರಿಕ ಆಕ್ಟ್, ಅಮೆರಿಕದ ಫೆಡರಲ್ ಚುನಾವಣೆಗಳಲ್ಲಿ ಮತದಾರರು ನೋಂದಣಿ ಮಾಡಿಕೊಳ್ಳುವಾಗ ಪೌರತ್ವದ ಪುರಾವೆ ಮತ್ತು ಮಾನ್ಯ ಗುರುತಿನ ದಾಖಲೆ ನೀಡುವುದನ್ನು ಕಡ್ಡಾಯಗೊಳಿಸುವ ಪ್ರಸ್ತಾವ ಹೊಂದಿದೆ. ಅಲ್ಲದೆ, ದೇಶಾದ್ಯಂತ ಮತದಾರರ ಗುರುತಿನ ಚೀಟಿ ನಿಯಮ ಜಾರಿಗೆ ತರುವ ಹಾಗೂ ಅಂಚೆ ಮತದಾನಕ್ಕೆ ನಿರ್ಬಂಧ ವಿಧಿಸುವ ಅಂಶಗಳೂ ಮಸೂದೆಯಲ್ಲಿವೆ.

ಅನಾರೋಗ್ಯ, ಅಂಗವೈಕಲ್ಯ, ಸೇನಾ ಸೇವೆ ಅಥವಾ ಪ್ರಯಾಣದಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅಂಚೆ ಮತದಾನಕ್ಕೆ ಅವಕಾಶ ನೀಡುವ ಪ್ರಸ್ತಾವವಿದೆ. ಮತದಾರರ ಪಟ್ಟಿಯಿಂದ ಅಮೆರಿಕೇತರ ನಾಗರಿಕರನ್ನು ತೆಗೆದುಹಾಕಲು ರಾಜ್ಯಗಳಿಗೆ ನಿರ್ದೇಶನ ನೀಡುವ ಅಂಶವೂ ಮಸೂದೆಯಲ್ಲಿದೆ.

ಅಮೆರಿಕದ ಚುನಾವಣೆಯಲ್ಲಿ ನಾಗರಿಕರಿಗೆ ಮಾತ್ರ ಅವಕಾಶ

ಅಮೆರಿಕದ ಚುನಾವಣೆಯಲ್ಲಿ ಅಮೆರಿಕದ ನಾಗರಿಕರು ಮಾತ್ರ ನಿರ್ಧಾರ ಕೈಗೊಳ್ಳಬೇಕು ಎಂದು ಶ್ವೇತಭವನ ಹೇಳಿದೆ. ಮತದಾರರ ನೋಂದಣಿಗೆ ಪೌರತ್ವದ ಪುರಾವೆ ಕಡ್ಡಾಯಗೊಳಿಸುವುದು ಮಸೂದೆಯ ಪ್ರಮುಖ ಉದ್ದೇಶ ಎಂದು ಆಡಳಿತ ತಿಳಿಸಿದೆ.

ಅಮೆರಿಕದ ಚುನಾವಣಾ ವ್ಯವಸ್ಥೆಯನ್ನು ಇತರ ದೇಶಗಳೊಂದಿಗೆ ಹೋಲಿಸಿರುವ ಶ್ವೇತಭವನ, ಭಾರತ ಮತ್ತು ಬ್ರೆಜಿಲ್‌ನಲ್ಲಿ ಮತದಾರರ ಗುರುತನ್ನು ಬಯೋಮೆಟ್ರಿಕ್ ವ್ಯವಸ್ಥೆಗೆ ಜೋಡಿಸಲಾಗಿದೆ ಎಂದು ಹೇಳಿದೆ. ಆದರೆ ಅಮೆರಿಕದಲ್ಲಿ ಪೌರತ್ವದ ಕುರಿತು ಸ್ವಯಂ ಘೋಷಣೆಯನ್ನೇ ಹೆಚ್ಚಾಗಿ ಅವಲಂಬಿಸಲಾಗಿದೆ ಎಂದು ಆಡಳಿತ ವಾದಿಸಿದೆ.

ಸೆನೆಟ್‌ನಲ್ಲಿ ಇನ್ನೂ ಒಮ್ಮತವಿಲ್ಲ

ಸೇವ್ ಅಮೆರಿಕಾ ಆಕ್ಟ್ಗೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಸೆನೆಟ್ ಐದು ವಾರಗಳ ವಿರಾಮಕ್ಕೆ ತೆರಳಿದ್ದು, ಮಸೂದೆ ಅಂಗೀಕಾರದ ಕುರಿತು ಇದುವರೆಗೆ ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ.

Read More
Next Story