End of war with Iran: Trump signs historic deal, Hormuz is free!
x

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಇರಾನ್ ಜೊತೆಗಿನ ಯುದ್ಧ ಅಂತ್ಯ: ಐತಿಹಾಸಿಕ ಒಪ್ಪಂದಕ್ಕೆ ಟ್ರಂಪ್ ಅಸ್ತು, ಹಾರ್ಮುಜ್‌ ಮುಕ್ತ!

ಜಾರ್ಜಿಯಾದ ಲೆಫ್ಟಿನೆಂಟ್ ಗವರ್ನರ್ ಬರ್ಟ್ ಜೋನ್ಸ್ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಟೆಲಿ- ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ಇರಾನ್ ಜತೆಗಿನ ಯುದ್ಧ ಮುಕ್ತಾಯಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದರು.


Click the Play button to hear this message in audio format

ಇರಾನ್ ದೇಶದೊಂದಿಗಿನ ಯುದ್ಧ ಕೊನೆಗೊಳಿಸುವ ಒಪ್ಪಂದ, ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಈ ವಾರಾಂತ್ಯದಲ್ಲಿ ಯುರೋಪ್‌ನಲ್ಲಿ ಉಭಯ ದೇಶಗಳ ನಡುವೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಇರಾನ್‌ ತೈಲ ಉದ್ಯಮದ ಮೇಲೆ ನಿಯಂತ್ರಣ ಸಾಧಿಸುವುದಾಗಿ ಬೆದರಿಕೆ ಹಾಕಿದ ಕೆಲವೇ ಗಂಟೆಗಳ ನಂತರ ಟ್ರಂಪ್ ಮಿಲಿಟರಿ ದಾಳಿ ಹಿಂಪಡೆಯುವ ನಿರ್ಧಾರ ಪ್ರಕಟಿಸಿರುವುದು ಭಾರಿ ಸಂಚಲನ ಮೂಡಿಸಿದೆ.

ಗುರುವಾರ (ಜೂ.11) ಮಧ್ಯಾಹ್ನ ಶ್ವೇತಭವನದ ಓವಲ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, "ಈ ವಾರಾಂತ್ಯ ಯುರೋಪ್‌ನಲ್ಲಿ ನಡೆಯಲಿರುವ ಸಹಿ ಸಮಾರಂಭದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಭಾಗವಹಿಸುವ ನಿರೀಕ್ಷೆಯಿದೆ," ಎಂದು ತಿಳಿಸಿದರು. ಒಪ್ಪಂದಕ್ಕೂ ಮುನ್ನ ತಾವು ಕತಾರ್, ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಕುವೈತ್ ಮತ್ತು ಪಾಕಿಸ್ತಾನ ಸೇರಿ ಮಧ್ಯಪ್ರಾಚ್ಯದ ಪ್ರಮುಖ ದೇಶಗಳ ನಾಯಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿರುವುದಾಗಿ ಸ್ಪಷ್ಟಪಡಿಸಿದರು.

ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದುವಂತಿಲ್ಲ!

ಜಾರ್ಜಿಯಾದ ಲೆಫ್ಟಿನೆಂಟ್ ಗವರ್ನರ್ ಬರ್ಟ್ ಜೋನ್ಸ್ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಟೆಲಿ-ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಟ್ರಂಪ್, ಇರಾನ್ ಜತೆಗಿನ ಯುದ್ಧ ಮುಕ್ತಾಯಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದರು. "ನಾವು ಇರಾನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸಿದ್ದೇವೆ. ಅವರು ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅದನ್ನು ನಾವು ಕಡ್ಡಾಯವಾಗಿ ಒತ್ತಾಯಿಸಿದ್ದೆವು. ನಮ್ಮ ಸಂಪೂರ್ಣ ಉದ್ದೇಶವೂ ಅದೇ ಆಗಿತ್ತು. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವ ಯಾವುದೇ ಪ್ರಯತ್ನವನ್ನು ಶಾಶ್ವತವಾಗಿ ತ್ಯಜಿಸಲು ಒಪ್ಪಿಕೊಂಡಿದೆ. ಯಾವುದೇ ರೀತಿಯಲ್ಲಿ ಪರಮಾಣು ಶಸ್ತ್ರಾಸ್ತ್ರ ಖರೀದಿಸುವುದಿಲ್ಲ, ಅಭಿವೃದ್ಧಿಪಡಿಸುವುದಿಲ್ಲ ಮತ್ತು ರೂಪಿಸುವುದೂ ಇಲ್ಲ," ಎಂದು ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ ಮುಕ್ತ!

ಈ ಜಾಗತಿಕ ಒಪ್ಪಂದವನ್ನು ಷೇರು ಮಾರುಕಟ್ಟೆಗಳು ಕೂಡ ಸಕಾರಾತ್ಮಕವಾಗಿ ಬರಮಾಡಿಕೊಳ್ಳಲಿವೆ ಎಂದ ಟ್ರಂಪ್, ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿದ್ದ ತಕ್ಷಣವೇ ಜಾಗತಿಕ ತೈಲ ಸಾರಿಗೆಯ ಪ್ರಮುಖ ಮಾರ್ಗವಾಗಿರುವ 'ಹಾರ್ಮುಜ್ ಜಲಸಂಧಿ' ಮತ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು. "ಇದು ಅತ್ಯಂತ ವಿವರವಾದ ಮತ್ತು ಬಲವಾದ ತಿಳುವಳಿಕೆಯ ಒಪ್ಪಂದವಾಗಿದೆ. ಪ್ರಸ್ತುತ ಇದು ಪರಿಕಲ್ಪನಾತ್ಮಕ ಹಂತದಲ್ಲಿದ್ದರೂ, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೆಲವೇ ಗಂಟೆಗಳಲ್ಲಿ ಬದಲಾದ ಟ್ರಂಪ್ ನಿಲುವು!

ವಿಶೇಷವೆಂದರೆ, ಗುರುವಾರ ಬೆಳಗ್ಗೆಯಷ್ಟೇ ಇರಾನ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದ ಟ್ರಂಪ್, ಇರಾನ್ ದೇಶಕ್ಕೆ ಭೀಕರ ಹೊಡೆತ ನೀಡುವುದಾಗಿ ಮತ್ತು ಅದರ ಪ್ರಮುಖ ತೈಲ ರಫ್ತು ಕೇಂದ್ರವಾದ 'ಖಾರ್ಗ್ ದ್ವೀಪ'ವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ, ಈ ಬೆದರಿಕೆ ಹಾಕಿದ ಕೆಲವೇ ಗಂಟೆಗಳಲ್ಲಿ ಶಾಂತಿ ಮಾತುಕತೆಯಲ್ಲಿ ಗಣನೀಯ ಪ್ರಗತಿ ಕಂಡುಬಂದ ಹಿನ್ನೆಲೆಯಲ್ಲಿ ಅವರು ತಮ್ಮ ಮಿಲಿಟರಿ ದಾಳಿಯ ಆದೇಶವನ್ನು ಹಠಾತ್ತನೆ ರದ್ದುಗೊಳಿಸಿದರು.

"ಇರಾನ್ ಈಗಾಗಲೇ ಅಮೆರಿಕದಿಂದ ತಡೆದುಕೊಳ್ಳಲು ಸಾಧ್ಯವಾಗದಷ್ಟು ದೊಡ್ಡ ಮಟ್ಟದ ಹೊಡೆತಗಳನ್ನು ತಿಂದಿದೆ. ಹೀಗಾಗಿ ನನಗಿಂತಲೂ ಹೆಚ್ಚಾಗಿ ಅವರೇ ಈ ಒಪ್ಪಂದವನ್ನು ಮಾಡಿಕೊಳ್ಳಲು ತೀವ್ರ ಆತುರ ವಹಿಸಿದ್ದರು," ಎಂದು ಇರಾನ್ ನಿಲುವಿನ ಬಗ್ಗೆ ಟ್ರಂಪ್ ಲೇವಡಿ ಮಾಡಿದರು. ಪೆಸಿಫಿಕ್ ಮಹಾಸಾಗರದ ಸಂರಕ್ಷಿತ ಪ್ರದೇಶಗಳಲ್ಲಿ ವಾಣಿಜ್ಯ ಮೀನುಗಾರಿಕೆಯನ್ನು ಪುನಃಸ್ಥಾಪಿಸುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಟ್ರಂಪ್ ಈ ಮಹತ್ವದ ಬೆಳವಣಿಗೆಗಳನ್ನು ಹಂಚಿಕೊಂಡಿದ್ದಾರೆ.

Read More
Next Story