
ಅಮೆರಿಕದ ಡಿಟ್ರಾಯಿಟ್ನ ಸ್ಟ್ರಿಪ್ ಕ್ಲಬ್ನಲ್ಲಿ ವಾಗ್ವಾದದ ಬಳಿಕ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಡಿಟ್ರಾಯಿಟ್ ಸ್ಟ್ರಿಪ್ ಕ್ಲಬ್ನಲ್ಲಿ ಗುಂಡಿನ ದಾಳಿ: 3 ಮಂದಿ ಸಾವು
ಘಟನೆಯಲ್ಲಿ ಗಾಯಗೊಂಡ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಅಮೆರಿಕದ ಡಿಟ್ರಾಯಿಟ್ ನಗರದಲ್ಲಿ ಭಾನುವಾರ ಬೆಳಗಿನ ಜಾವ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಣ್ಣ ಪ್ರಮಾಣದ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಸುಮಾರು ೭.21ರ ವೇಳೆಗೆ ಡಿಟ್ರಾಯಿಟ್ನ ಜನವಸತಿ ಪ್ರದೇಶದ ರಸ್ತೆಯೊಂದರಲ್ಲಿ ಗುಂಡಿನ ಶಬ್ದ ಕೇಳಿಬಂದ ತಕ್ಷಣ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಮೂವರು ಪುರುಷರು ಗುಂಡೇಟಿನಿಂದ ರಕ್ತದ ಮಡುವಿನಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ ಎಂದು ಡಿಟ್ರಾಯಿಟ್ ಪೊಲೀಸ್ ಮುಖ್ಯಸ್ಥ ಟಾಡ್ ಬೆಟ್ಟಿಸನ್ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ತಕ್ಷಣವೇ ಖಾಸಗಿ ವಾಹನಗಳ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಗಾಯಾಳುಗಳು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮೃತಪಟ್ಟವರು ಮತ್ತು ಗಾಯಗೊಂಡವರೆಲ್ಲರೂ 20ರಿಂದ 30 ವರ್ಷ ವಯೋಮಾನದವರು ಎಂದು ತಿಳಿದುಬಂದಿದೆ.
ದಾಳಿ ನಡೆದ ಸ್ಥಳದ ಮೇಲೆ ಪೊಲೀಸರ ಹಳೆಯ ನಿಗಾ
ಘಟನೆ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಮುಖ್ಯಸ್ಥರು, "ಸಣ್ಣ ಜಗಳದಿಂದ ಆರಂಭವಾದ ಗಲಾಟೆ, ಕೊನೆಗೆ ಮಾರಕ ಅಸ್ತ್ರಗಳ ಬಳಕೆಗೆ ಕಾರಣವಾಯಿತು" ಎಂದಿದ್ದಾರೆ. ದಾಳಿ ನಡೆದ ಸ್ಥಳವು ಕಾನೂನುಬಾಹಿರವಾಗಿ ನಿಯಮಿತ ಅವಧಿಯ ನಂತರವೂ ಕಾರ್ಯಾಚರಿಸುತ್ತಿದ್ದ (ಅಫ್ಟರ್-ಅವರ್ಸ್) ಸ್ಟ್ರಿಪ್ ಕ್ಲಬ್ ಮಾದರಿಯ ಸ್ಥಳವಾಗಿದೆ. ಈ ನಿರ್ದಿಷ್ಟ ವಿಳಾಸದ ವಿರುದ್ಧ ಈ ವರ್ಷದಲ್ಲೇ ಏಳು ಬಾರಿ ದೂರುಗಳು ಬಂದಿದ್ದವು ಮತ್ತು ಪೊಲೀಸ್ ಇಲಾಖೆ ಈಗಾಗಲೇ ಈ ಜಾಗದ ಮೇಲೆ ನಿಗಾ ಇಟ್ಟಿತ್ತು ಎಂದು ಬೆಟ್ಟಿಸನ್ ಸ್ಪಷ್ಟಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಸುಳಿವುಗಳು ಸಿಕ್ಕಿದ್ದು, ತನಿಖೆ ಚುರುಕುಗೊಂಡಿದೆ.
ಸಾರ್ವಜನಿಕರಲ್ಲಿ ಮೇಯರ್ ಮನವಿ
ನಗರದಲ್ಲಿ ನಡೆದ ಈ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿರುವ ಡಿಟ್ರಾಯಿಟ್ ಮೇಯರ್ ಮೇರಿ ಶೆಫೀಲ್ಡ್, ಈ ಘಟನೆಯ ಕುರಿತು ಯಾವುದೇ ಮಾಹಿತಿ ಇದ್ದರೂ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ. ಇಂತಹ ಸಮಾಜಘಾತುಕ ಕೃತ್ಯಗಳಿಂದ ಇಡೀ ಸಮುದಾಯ ಭಯದಲ್ಲಿ ಬಾಳುವಂತಾಗಬಾರದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಜಾರ್ಜಿಯಾದಲ್ಲೂ ಹದಿಹರೆಯದವರ ಮೇಲೆ ಗುಂಡಿನ ದಾಳಿ
ಇದೇ ಭಾನುವಾರ ಅಮೆರಿಕದ ಜಾರ್ಜಿಯಾ ರಾಜ್ಯದ ಮ್ಯಾಕನ್ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿದ್ದ 12 ಮಂದಿ ಹದಿಹರೆಯದವರು ಗುಂಡಿನ ದಾಳಿಗೆ ತುತ್ತಾಗಿದ್ದಾರೆ. ಬಿಬ್ ಕೌಂಟಿ ಶೆರಿಫ್ ಡೇವಿಡ್ ಡೇವಿಸ್ ನೀಡಿರುವ ಮಾಹಿತಿಯಂತೆ, ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಪ್ರಕರಣದಲ್ಲೂ ತನಿಖೆ ಮುಂದುವರಿದಿದ್ದು, ಹಲವರನ್ನು ವಿಚಾರಣೆಗೊಳಪಡಿಸಲಾಗಿದೆ.

