
ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ ಬ್ರೆಂಟ್ ಕಚ್ಚಾ ತೈಲ 108.77 ಡಾಲರ್‌ಗೆ ಏರಿದೆ.
ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮ: ಕಚ್ಚಾ ತೈಲ ಬೆಲೆ 108 ಡಾಲರ್‌ಗೆ ಏರಿಕೆ
ಪ್ರಮುಖ ತೈಲ ಆಮದು ರಾಷ್ಟ್ರವಾಗಿರುವ ಭಾರತಕ್ಕೆ ಈ ಬೆಳವಣಿಗೆ ಆತಂಕ ಮೂಡಿಸಿದೆ. ಕಚ್ಚಾ ತೈಲದ ಬೆಲೆ ಏರಿದಂತೆ ದೇಶದ ಆಮದು ವೆಚ್ಚ ಹೆಚ್ಚಲಿದ್ದು, ಹಣದುಬ್ಬರದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆ ಭಾರಿ ಏರಿಕೆಯಾಗಿದೆ. ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 108.77 ಅಮೆರಿಕನ್ ಡಾಲರ್‌ಗೆ ತಲುಪಿ ನಾಲ್ಕು ತಿಂಗಳಲ್ಲಿ ಇದು ಗರಿಷ್ಠ ಮಟ್ಟ ದಾಖಲಿಸಿದೆ.
ಕಳೆದ ಒಂದು ವಾರದಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.12ಕ್ಕೂ ಹೆಚ್ಚು ಏರಿಕೆಯಾಗಿದೆ. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಜಾಗತಿಕ ಇಂಧನ ಪೂರೈಕೆ ಮತ್ತು ಪ್ರಮುಖ ಇಂಧನ ಮಾರ್ಗಗಳ ಸ್ಥಿರತೆ ಕುರಿತು ಆತಂಕ ಮೂಡಿಸಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಮೇ ಬಳಿಕ ಮತ್ತೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ
ಈ ವರ್ಷದ ಆರಂಭದಲ್ಲಿ ಸಂಘರ್ಷ ಕಡಿಮೆಯಾಗುವ ನಿರೀಕ್ಷೆಯಿಂದ ಕಚ್ಚಾ ತೈಲದ ಬೆಲೆ ಇಳಿಕೆಯಾಗಿತ್ತು. ಮೇ ತಿಂಗಳಲ್ಲಿ ಇದೇ ರೀತಿಯ ಮಟ್ಟವನ್ನು ತಲುಪಿದ್ದ ತೈಲ ದರ ಬಳಿಕ 80 ಡಾಲರ್‌ಗಿಂತ ಕೆಳಕ್ಕೆ ಕುಸಿದಿತ್ತು. ಇದೀಗ ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತೆ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ಬೆಲೆ ಮತ್ತೊಮ್ಮೆ ತೀವ್ರವಾಗಿ ಏರಿಕೆಯಾಗಿದೆ.
ಪ್ರಮುಖ ತೈಲ ಆಮದು ರಾಷ್ಟ್ರವಾಗಿರುವ ಭಾರತಕ್ಕೆ ಈ ಬೆಳವಣಿಗೆ ಆತಂಕ ಮೂಡಿಸಿದೆ. ಕಚ್ಚಾ ತೈಲದ ಬೆಲೆ ಏರಿದಂತೆ ದೇಶದ ಆಮದು ವೆಚ್ಚ ಹೆಚ್ಚಲಿದ್ದು, ಹಣದುಬ್ಬರದ ಮೇಲೂ ಒತ್ತಡ ಉಂಟಾಗುವ ಸಾಧ್ಯತೆಯಿದೆ. ಸಾರಿಗೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚುವುದರಿಂದ ಗ್ರಾಹಕರು ಹಾಗೂ ಉದ್ಯಮಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.
ರಾಷ್ಟ್ರೀಯ ಆರ್ಥಿಕ ಸಂಶೋಧನಾ ಮಂಡಳಿ (NCAER)ಯ ಮಾಜಿ ಹಿರಿಯ ಅರ್ಥಶಾಸ್ತ್ರಜ್ಞ ಸುನಿಲ್ ಸಿನ್ಹಾ ಅವರ ಪ್ರಕಾರ, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಪ್ರತಿ 10 ಡಾಲರ್ ಏರಿಕೆಯಾದರೆ ಭಾರತದ ಜಿಡಿಪಿ ಬೆಳವಣಿಗೆ ಸುಮಾರು 20ರಿಂದ 30 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ಭಾರತದ ಇತ್ತೀಚಿನ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ಶೇ.7.8ರಷ್ಟಿದ್ದು, ಕಚ್ಚಾ ತೈಲದ ಬೆಲೆ ನಿರಂತರವಾಗಿ ಹೆಚ್ಚಾದರೆ ಮುಂದಿನ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆಯ ಮೇಲೆ ಒತ್ತಡ ಉಂಟಾಗಬಹುದು ಎಂದು ಸಿನ್ಹಾ ಹೇಳಿದ್ದಾರೆ. ಹೆಚ್ಚುತ್ತಿರುವ ತೈಲ ಆಮದು ಬಿಲ್ ಭಾರತದ ಚಾಲ್ತಿ ಖಾತೆ ಮೇಲೂ ಒತ್ತಡ ತರಬಹುದು. ಪಶ್ಚಿಮ ಏಷ್ಯಾದ ಸಂಘರ್ಷ ಎಷ್ಟು ಕಾಲ ಮುಂದುವರಿಯಲಿದೆ ಮತ್ತು ಕಚ್ಚಾ ತೈಲದ ಬೆಲೆ ಎಷ್ಟು ಮಟ್ಟಿಗೆ ಏರಿಕೆಯಾಗಲಿದೆ ಎಂಬುದು ಭಾರತದ ಮುಂದಿನ ಆರ್ಥಿಕ ಪರಿಸ್ಥಿತಿಗೆ ಪ್ರಮುಖ ಅಂಶವಾಗಲಿದೆ.

