
ಚೋಳರ ಕಾಲದ ‘ಲೈಡನ್ ತಾಮ್ರ ಶಾಸನಗಳು’
ನೆದರ್‌ಲ್ಯಾಂಡ್ಸ್ ನಿಂದ ಚೋಳರ ‘ಲೈಡನ್ ತಾಮ್ರ ಶಾಸನ’ ವಾಪಸ್!
ಕ್ರಿ.ಶ. 1687-1700ರ ಅವಧಿಯಲ್ಲಿ ತಮಿಳುನಾಡಿನ ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ, ಅಲ್ಲಿ ಕೋಟೆ ನಿರ್ಮಾಣದ ವೇಳೆ ಈ ಶಾಸನಗಳನ್ನು ಅಗೆದು ತೆಗೆಯಲಾಗಿತ್ತು.
ವಸಾಹತುಶಾಹಿ ಕಾಲದಲ್ಲಿ ಭಾರತದಿಂದ ಕಳುವಾಗಿದ್ದ ದೇಶದ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯ ವಸ್ತುಗಳು ಒಂದೊಂದಾಗಿ ತಾಯ್ನಾಡಿಗೆ ಮರಳುತ್ತಿವೆ.
1862 ರಿಂದ ನೆದರ್ಲ್ಯಾಂಡ್ಸ್‌ನ ಲೈಡನ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿದ್ದ ಚೋಳರ ಕಾಲದ ತಾಮ್ರ ಶಾಸನಗಳನ್ನು ಮೇ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಭಾರತಕ್ಕೆ ಮರಳಿ ಹಸ್ತಾಂತರಿಸಲಾಗಿದೆ.
ಡಚ್ಚರ ಕೈ ಸೇರಿದ ಇತಿಹಾಸ
ಕ್ರಿ.ಶ. 1687-1700ರ ಅವಧಿಯಲ್ಲಿ ತಮಿಳುನಾಡಿನ ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ, ಅಲ್ಲಿ ಕೋಟೆ ನಿರ್ಮಾಣದ ವೇಳೆ ಈ ಶಾಸನಗಳನ್ನು ಅಗೆದು ತೆಗೆಯಲಾಗಿತ್ತು. 1712ರಲ್ಲಿ ಫ್ಲೋರೆಂಟಿಯಸ್ ಕ್ಯಾಂಪರ್ ಎಂಬ ಕ್ರಿಶ್ಚಿಯನ್ ಮಿಷನರಿ ಇದನ್ನು ನೆದರ್ಲ್ಯಾಂಡ್ಸ್‌ಗೆ ಕೊಂಡೊಯ್ದಿದ್ದರು.
ಯುನೆಸ್ಕೋ ಮಧ್ಯಸ್ಥಿಕೆ ಮತ್ತು ಜಯ
ಭಾರತ ಸರ್ಕಾರ 2012 ರಿಂದಲೂ ಇದನ್ನು ವಾಪಸ್ ಪಡೆಯಲು ಪ್ರಯತ್ನಿಸುತ್ತಿತ್ತು. ಅಕ್ಟೋಬರ್ 2023 ರಲ್ಲಿ ಯುನೆಸ್ಕೋ (UNESCO) ಸಮಿತಿಯ ಮುಂದೆ ಭಾರತ ಬಲವಾದ ವಾದ ಮಂಡಿಸಿತು. ನೆದರ್ಲ್ಯಾಂಡ್ಸ್‌ನ 'ಕಲೋನಿಯಲ್ ಕಲೆಕ್ಷನ್ಸ್ ಕಮಿಟಿ' ನಡೆಸಿದ ತನಿಖೆಯಲ್ಲಿ, ಈ ಶಾಸನಗಳನ್ನು ಭಾರತೀಯರ ಒಪ್ಪಿಗೆಯಿಲ್ಲದೆ ಕೊಂಡೊಯ್ಯಲಾಗಿತ್ತು ಎಂಬುದು ಸಾಬೀತಾಯಿತು. ಹೀಗಾಗಿ ಇವುಗಳನ್ನು ಬೇಷರತ್ತಾಗಿ ಭಾರತಕ್ಕೆ ನೀಡಲು ಶಿಫಾರಸು ಮಾಡಲಾಯಿತು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ವಿದೇಶಗಳಿಂದ ಮರಳಿ ತಂದ 668 ಪ್ರಾಚೀನ ವಸ್ತುಗಳಲ್ಲಿ ಇದು ಅತ್ಯಂತ ಪ್ರಮುಖವಾಗಿದೆ.
ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟೆನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಶನಿವಾರ (ಮೇ 16) ನೆದರ್ಲ್ಯಾಂಡ್ಸ್‌ನ ದಿ ಹೇಗ್‌ನಲ್ಲಿ ನಡೆದ ಭವ್ಯ ರಾಜತಾಂತ್ರಿಕ ಕಾರ್ಯಕ್ರಮದಲ್ಲಿ ಈ ಸಾಂಸ್ಕೃತಿಕ ಪರಂಪರೆಯನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, "ಇದು ಪ್ರತಿ ಭಾರತೀಯನಿಗೂ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಕ್ಷಣ" ಎಂದು ಬರೆದುಕೊಂಡಿದ್ದಾರೆ.
ಏನಿದು ಆನೈಮಂಗಲಂ ಶಾಸನಗಳು?
ಇತಿಹಾಸಕಾರರ ಪ್ರಕಾರ, ಈ ಶಾಸನಗಳನ್ನು ‘ಆನೈಮಂಗಲಂ ಶಾಸನಗಳು’ ಎಂದೂ ಕರೆಯಲಾಗುತ್ತದೆ. ಇವು ಚೋಳ ಸಾಮ್ರಾಜ್ಯದ ಶ್ರೇಷ್ಠ ದೊರೆ 1ನೇ ರಾಜರಾಜ ಚೋಳ ಮತ್ತು ಅವರ ಮಗ 1ನೇ ರಾಜೇಂದ್ರ ಚೋಳರ ಕಾಲದ ಇತಿಹಾಸವನ್ನು ಸಾರುತ್ತವೆ. ಸುಮಾರು 30 ಕೆ.ಜಿ. ತೂಕದ ಈ ಶಾಸನಗಳಲ್ಲಿ 21 ದೊಡ್ಡ ತಾಮ್ರದ ಫಲಕಗಳು ಮತ್ತು 3 ಸಣ್ಣ ಫಲಕಗಳಿವೆ. ಇವುಗಳನ್ನು ರಾಜೇಂದ್ರ ಚೋಳನ ಅಧಿಕೃತ ರಾಜಮುದ್ರೆಯಿರುವ ಬೃಹತ್ ಕಂಚಿನ ಉಂಗುರದಿಂದ ಜೋಡಿಸಲಾಗಿದೆ. ತಮಿಳುನಾಡು ನಾಗಪಟ್ಟಣಂನಲ್ಲಿದ್ದ ಬೌದ್ಧ ವಿಹಾರಕ್ಕೆ ಚೋಳ ಅರಸರು ಆನೈಮಂಗಲಂ ಸೇರಿದಂತೆ 26 ಹಳ್ಳಿಗಳ ಕಂದಾಯವನ್ನು ದಾನವಾಗಿ ನೀಡಿದ್ದನ್ನು ಈ ಶಾಸನಗಳು ದಾಖಲಿಸಿವೆ. ಇದು ಅಂದಿನ ಧಾರ್ಮಿಕ ಸಾಮರಸ್ಯ ಮತ್ತು ಆಗ್ನೇಯ ಏಷ್ಯಾದ ದೇಶಗಳೊಂದಿಗಿನ ಚೋಳರ ನೌಕಾ ಬಾಂಧವ್ಯವನ್ನು ಸಾಬೀತುಪಡಿಸುತ್ತದೆ.
ಶಾಸನಗಳ ವಿನ್ಯಾಸ, ವಿಶೇಷತೆ
ಈ ಶಾಸನಗಳ ಒಟ್ಟು ತೂಕ ಸುಮಾರು 30 ಕೆ.ಜಿ. ಇದ್ದು, ಇವುಗಳನ್ನು ಎರಡು ಪ್ರತ್ಯೇಕ ಸೆಟ್‌ಗಳಾಗಿ ವಿಂಗಡಿಸಲಾಗಿದೆ. ದೊಡ್ಡ ಸೆಟ್ 21 ಫಲಕಗಳಿದ್ದು, ಇದರಲ್ಲಿ 5 ಫಲಕಗಳನ್ನು ಸಂಸ್ಕೃತ ಭಾಷೆಯಲ್ಲಿ ಮತ್ತು 16 ಫಲಕಗಳನ್ನು ತಮಿಳು ಲಿಪಿಯಲ್ಲಿ ಕೆತ್ತಲಾಗಿದೆ. ಸಣ್ಣ ಸೆಟ್ 3 ಫಲಕಗಳಿದ್ದು, ಇದು ಸಂಪೂರ್ಣವಾಗಿ ತಮಿಳು ಭಾಷೆಯ ಬರಹಗಳನ್ನು ಒಳಗೊಂಡಿದೆ.
ರಾಜಮುದ್ರೆ
ಈ ಎಲ್ಲಾ 24 ತಾಮ್ರದ ಫಲಕಗಳನ್ನು ಒಂದು ಬೃಹತ್ ಕಂಚಿನ ಉಂಗುರದಿಂದ ಒಟ್ಟಿಗೆ ಜೋಡಿಸಲಾಗಿದ್ದು, ಅದರ ಮೇಲೆ ಚೋಳ ರಾಜವಂಶದ ಅಧಿಕೃತ ರಾಜಮುದ್ರೆಯನ್ನು (ಹುಲಿ ಮತ್ತು ಮೀನಿನ ಲಾಂಛನ) ಕೆತ್ತಲಾಗಿದೆ.

