ಅರುಣಾಚಲ ಪ್ರದೇಶದಲ್ಲಿ ಸೇನಾ ಚಟುವಟಿಕೆ- ಭಾರತದ ಎಚ್ಚರಿಕೆ ನಡುವೆ ಚೀನಾ ಹೇಳಿದ್ದೇನು?
x

ಅರುಣಾಚಲ ಗಡಿಯಲ್ಲಿ ಚೀನಾ ಸೇನಾ ಚಟುವಟಿಕೆ ಹೆಚ್ಚಳದ ವರದಿ ನಡುವೆ ಗಡಿ ಪರಿಸ್ಥಿತಿ ಸ್ಥಿರವಾಗಿದೆ.

ಅರುಣಾಚಲ ಪ್ರದೇಶದಲ್ಲಿ ಸೇನಾ ಚಟುವಟಿಕೆ- ಭಾರತದ ಎಚ್ಚರಿಕೆ ನಡುವೆ ಚೀನಾ ಹೇಳಿದ್ದೇನು?

ಅರುಣಾಚಲ ಗಡಿಯಲ್ಲಿ ಚೀನಾ ಸೇನಾ ಚಟುವಟಿಕೆ ಹೆಚ್ಚಳದ ವರದಿ ನಡುವೆ ಗಡಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ಬೀಜಿಂಗ್ ಹೇಳಿದೆ. ಎಲ್‌ಎಸಿಯಲ್ಲಿ ಶಾಂತಿಗೆ ಭಾರತ ಒತ್ತು ನೀಡಿದೆ.


Click the Play button to hear this message in audio format

ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ಉದ್ವಿಗ್ನತೆ ಹೆಚ್ಚಾಗಿದೆ ಎಂಬ ವರದಿಗಳ ನಡುವೆಯೇ, ಗಡಿ ಪರಿಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ಚೀನಾ ಹೇಳಿದೆ. ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಚೀನಾದ ಸೇನಾ ಚಟುವಟಿಕೆ ಹೆಚ್ಚಾಗಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಲು ಬೀಜಿಂಗ್ ನಿರಾಕರಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಬುಧವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, “ಚೀನಾ-ಭಾರತ ಗಡಿ ಪರಿಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ” ಎಂದು ತಿಳಿಸಿದ್ದಾರೆ. ಆದರೆ ಅರುಣಾಚಲ ಪ್ರದೇಶದ ಸಮೀಪ ಚೀನಾ ತನ್ನ ಸೇನಾ ಚಟುವಟಿಕೆಗಳನ್ನು ಹೆಚ್ಚಿಸಿದೆಯೇ ಎಂಬ ಪ್ರಶ್ನೆಗಳಿಗೆ ಅವರು ನೇರ ಉತ್ತರ ನೀಡಲಿಲ್ಲ. ಕಳೆದ ವಾರ ಭಾರತ ಮತ್ತು ಚೀನಾ ನಡುವೆ ಗಡಿ ವ್ಯವಹಾರಗಳ ಕುರಿತು ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ರಚಿಸಿರುವ ಕಾರ್ಯವಿಧಾನದ 36ನೇ ಸಭೆ ನಡೆದಿತ್ತು. ಸಭೆಯಲ್ಲಿ ರಾಜತಾಂತ್ರಿಕ ಹಾಗೂ ಸೇನಾ ಮಾರ್ಗಗಳ ಮೂಲಕ ನಿರಂತರ ಸಂವಹನ ಕಾಯ್ದುಕೊಂಡು, ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಗುವೊ ಹೇಳಿದ್ದಾರೆ.

ಅರುಣಾಚಲದಲ್ಲಿ ಚೀನಾ ಸೇನಾ ಚಟುವಟಿಕೆ?

ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಪ್ರದೇಶದಲ್ಲಿ ಚೀನಾದ ಸೈನಿಕರು ಆಕ್ರಮಣಕಾರಿ ರೀತಿಯಲ್ಲಿ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ವರದಿಗಳ ನಡುವೆ ಚೀನಾದ ಈ ಹೇಳಿಕೆ ಹೊರಬಿದ್ದಿದೆ. ಅರುಣಾಚಲ ಪ್ರದೇಶವನ್ನು ಚೀನಾ ‘ದಕ್ಷಿಣ ಟಿಬೆಟ್’ ಎಂದು ಪ್ರತಿಪಾದಿಸುತ್ತಿದ್ದು, ಭಾರತದ ಸಾರ್ವಭೌಮತ್ವದ ಹಕ್ಕನ್ನು ಒಪ್ಪುವುದಿಲ್ಲ.

ಇದೇ ವೇಳೆ, ಭಾರತವು ಗಡಿ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದು, ವಾಸ್ತವ ನಿಯಂತ್ರಣ ರೇಖೆ ಅಥವಾ ಎಲ್‌ಎಸಿಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಸ್ಪಷ್ಟಪಡಿಸಿದೆ. ಗಡಿಯಲ್ಲಿನ ಪರಿಸ್ಥಿತಿಯೇ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳ ಮುಂದಿನ ದಿಕ್ಕನ್ನು ನಿರ್ಧರಿಸಲಿದೆ ಎಂದು ನವದೆಹಲಿ ಹೇಳಿದೆ.

ಅರುಣಾಚಲದ ಹೆಸರು ಬದಲಾವಣೆಗೆ ಭಾರತದ ತಿರುಗೇಟು

ಅರುಣಾಚಲ ಪ್ರದೇಶದಲ್ಲಿನ 27 ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳಿಗೆ ಭಾರತ ಅಧಿಕೃತವಾಗಿ ಪ್ರಮಾಣಿತ ಹೆಸರುಗಳನ್ನು ನೀಡಿರುವುದನ್ನು ಚೀನಾ ಟೀಕಿಸಿತ್ತು. ಇದಕ್ಕೆ ಭಾರತ ತೀವ್ರ ಪ್ರತಿಕ್ರಿಯೆ ನೀಡಿದ್ದು, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಮತ್ತು ಅಳಿಸಲಾಗದ ಅಂಗವಾಗಿದೆ ಎಂದು ಪುನರುಚ್ಚರಿಸಿದೆ.ಈ ವಾಸ್ತವವನ್ನು ಯಾವುದೇ ರೀತಿಯ ಕ್ರಮದಿಂದ ಬದಲಿಸಲು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಗಲ್ವಾನ್ ಬಳಿಕ ಸಂಬಂಧ ಸುಧಾರಣೆಗೆ ಪ್ರಯತ್ನ

2020ರ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಭಾರತ ಮತ್ತು ಚೀನಾ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿತ್ತು. ಪೂರ್ವ ಲಡಾಖ್‌ನಲ್ಲಿ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಸೇನಾ ಮುಖಾಮುಖಿ ಮುಂದುವರಿದಿತ್ತು.

2024ರ ಅಕ್ಟೋಬರ್‌ನಲ್ಲಿ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿನ ಕೊನೆಯ ಎರಡು ಸಂಘರ್ಷ ಬಿಂದುಗಳಿಂದ ಸೇನೆ ಹಿಂಪಡೆಯುವ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಬಂದಿದ್ದವು. ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಝಾನ್‌ನಲ್ಲಿ ಮಾತುಕತೆ ನಡೆಸಿ, ದ್ವಿಪಕ್ಷೀಯ ಸಂಬಂಧ ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದರು.

ಕಳೆದ ವರ್ಷ ಆಗಸ್ಟ್‌ನಲ್ಲಿ ಮೋದಿ ಅವರು ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವೆ ವಿಸ್ತೃತ ಮಾತುಕತೆ ನಡೆದಿತ್ತು. ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ಭಾರತ-ಚೀನಾ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಭಾರತ ಬದ್ಧವಾಗಿದೆ ಎಂದು ಮೋದಿ ಹೇಳಿದ್ದರು.

ಇದಾದ ಬಳಿಕ ಎರಡೂ ದೇಶಗಳು ಸಂಬಂಧಗಳನ್ನು ಸಹಜ ಸ್ಥಿತಿಗೆ ತರಲು ಹಲವು ಕ್ರಮಗಳನ್ನು ಕೈಗೊಂಡಿದ್ದು, ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳುವ ವಿಚಾರ ಇದೀಗ ಮತ್ತೊಮ್ಮೆ ಪ್ರಮುಖವಾಗುತ್ತಿದೆ.

Read More
Next Story