
ಬೀಜಿಂಗ್‌ನಲ್ಲಿ ಇತಿಹಾಸ ಸೃಷ್ಟಿಸಿದ ರೋಬೋಟ್: 8.86 ಸೆಕೆಂಡ್‌ನಲ್ಲಿ 100 ಮೀ. ಪೂರ್ಣ
ಇದೇ ಕ್ರೀಡಾಕೂಟದಲ್ಲಿ ಒಂದು ರೋಬೋಟ್ 9.39 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟ ಪೂರ್ಣಗೊಳಿಸಿ ಅಚ್ಚರಿ ಮೂಡಿಸಿತ್ತು. ಕೇವಲ ಮೂರೇ ದಿನಗಳಲ್ಲಿ ಆ ದಾಖಲೆಯನ್ನು ಈ ಹೊಸ ರೋಬೋಟ್ ಮುರಿದಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಲೋಕದಲ್ಲಿ ಮತ್ತೊಂದು ಅಸಾಧ್ಯವೆಂದು ಭಾವಿಸಲಾಗಿದ್ದ ಮೈಲಿಗಲ್ಲನ್ನು ಚೀನಾ ದಾಟಿದೆ. ಬೀಜಿಂಗ್‌ನಲ್ಲಿ ನಡೆಯುತ್ತಿರುವ ‘ವರ್ಲ್ಡ್ ಹ್ಯೂಮನಾಯ್ಡ್ ರೋಬೋಟ್ ಗೇಮ್ಸ್’ನಲ್ಲಿ ಚೀನಾದ ಮಾನವ ರೂಪಿ ರೋಬೋಟ್ ಒಂದು ಅಪ್ರತಿಮ ಸಾಧನೆ ಮಾಡಿದ್ದು, 100 ಮೀಟರ್ ಓಟವನ್ನು ಕೇವಲ 8.86 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಇದು ಕೇವಲ ಒಂದು ಯಂತ್ರದ ಓಟವಲ್ಲ, ಬದಲಾಗಿ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ಕ್ಷೇತ್ರ ಮನುಕುಲದ ಸಾಮರ್ಥ್ಯವನ್ನೇ ಮೀರಿಸುವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ಹಿಂದೆ ಇದೇ ಕ್ರೀಡಾಕೂಟದಲ್ಲಿ ಒಂದು ರೋಬೋಟ್ 9.39 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟ ಪೂರ್ಣಗೊಳಿಸಿ ಅಚ್ಚರಿ ಮೂಡಿಸಿತ್ತು. ಆದರೆ, ಕೇವಲ ಮೂರೇ ದಿನಗಳಲ್ಲಿ ಆ ದಾಖಲೆಯನ್ನು ಮುರಿದಿರುವ ಈ ಹೊಸ ರೋಬೋಟ್, ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯನ್ನು ಜಗತ್ತಿಗೆ ಪರಿಚಯಿಸಿದೆ. ಹೋಲಿಕೆಗೆ ಬಂದರೆ, ವಿಶ್ವದ ಅತ್ಯಂತ ವೇಗದ ಮಾನವ ಎಂದೇ ಕರೆಯಲ್ಪಡುವ ಜಮೈಕಾದ ಉಸೇನ್ ಬೋಲ್ಟ್ 2009ರಲ್ಲಿ ಬರ್ಲಿನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟವನ್ನು 9.58 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ್ದರು. ಈಗ ಒಂದು ಯಂತ್ರವು ಮಾನವನ ಶ್ರೇಷ್ಠ ದಾಖಲೆಗಿಂತ ವೇಗವಾಗಿ ಓಡಿರುವುದು ವೈಜ್ಞಾನಿಕ ಸಮುದಾಯದಲ್ಲಿ ರೋಚಕ ಚರ್ಚೆಗೆ ಕಾರಣವಾಗಿದೆ.
ತಜ್ಞರ ವಿಶ್ಲೇಷಣೆ-ವೇಗಕ್ಕಿಂತ ಮುಖ್ಯ ಸವಾಲುಗಳು
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡೆನ್ನಿಸ್ ಹಾಂಗ್ ಪ್ರಕಾರ, ಇದು ರೋಬೋಟಿಕ್ಸ್ ಇತಿಹಾಸದಲ್ಲಿ ಒಂದು ಐತಿಹಾಸಿಕ ಘಟನೆ. ಒಂದು ರೋಬೋಟ್ ಮಾನವನಿಗಿಂತ ವೇಗವಾಗಿ ಓಡಿತು ಎಂಬುದು ಮುಖ್ಯವಲ್ಲ. ಆದರೆ, ಎರಡು ಕಾಲುಗಳಿರುವ ರೋಬೋಟ್ ಇಷ್ಟು ವೇಗದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಕಠಿಣವಾದ ಕೆಲಸ ಎಂದು ಅಭಿಪ್ರಾಯಪಟ್ಟಿದ್ದಾರೆ. ವೇಗ ಹೆಚ್ಚಾದಂತೆ ರೋಬೋಟ್‌ನ ಮೇಲೆ ಬೀರುವ ಭೌತಿಕ ಒತ್ತಡಗಳು ಅಗಾಧವಾಗಿರುತ್ತವೆ. ಡಿಕ್ಕಿಯ ಪರಿಣಾಮ, ದೇಹದ ಯಾಂತ್ರಿಕ ಗಟ್ಟಿತನ ಮತ್ತು ಹಠಾತ್ ದಿಕ್ಕು ಬದಲಾವಣೆಯಂತಹ ಸವಾಲುಗಳನ್ನು ಎದುರಿಸುವುದು ಯಾವುದೇ ಇಂಜಿನಿಯರ್‌ಗೆ ದೊಡ್ಡ ಪರೀಕ್ಷೆಯಾಗಿರುತ್ತದೆ. ದಾಖಲೆ ಬರೆದ ನಂತರ ಈ ರೋಬೋಟ್ ಫಿನಿಶ್ ಲೈನ್‌ನ ತಡೆಗೋಡೆಗೆ ಡಿಕ್ಕಿ ಹೊಡೆದು ಬಿದ್ದಿದೆ, ಅದರ ಸೊಂಟದಿಂದ ಕಿಡಿಗಳು ಹಾರಿವೆ. ಇದು ಯಂತ್ರವು ಇನ್ನು ಕೂಡ ಭೌತಿಕ ನಿರ್ವಹಣೆಯಲ್ಲಿ ಇನ್ನಷ್ಟು ಸುಧಾರಣೆಯಾಗಬೇಕಿದೆ ಎಂಬುದನ್ನು ತೋರಿಸುತ್ತದೆ ಎಂದು ಹಾಂಗ್ ವಿಶ್ಲೇಷಿಸಿದ್ದಾರೆ.
ರೋಬೋಟ್ ಒಲಿಂಪಿಕ್ಸ್: ಕೇವಲ ಓಟವಲ್ಲ, ಒಂದು ಕ್ರಾಂತಿ
ಬೀಜಿಂಗ್‌ನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟವು ಕೇವಲ ಕ್ರೀಡೆಗಷ್ಟೇ ಸೀಮಿತವಾಗಿಲ್ಲ. ಇಲ್ಲಿ 1300ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯುತ್ತಿದ್ದು, 51 ವಿವಿಧ ವಿಭಾಗಗಳಲ್ಲಿ 2000ಕ್ಕೂ ಹೆಚ್ಚು ರೋಬೋಟ್‌ಗಳು ಭಾಗವಹಿಸಿವೆ. ಇಲ್ಲಿ ಲಾಂಗ್ ಜಂಪ್, ಟೇಬಲ್ ಟೆನ್ನಿಸ್ ಮತ್ತು ಬಾಲ್ ರೂಂ ನೃತ್ಯದಂತಹ ಕ್ರೀಡೆಗಳು ಮಾತ್ರವಲ್ಲದೆ, ನಿಜ ಜೀವನದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನೂ ಪರೀಕ್ಷಿಸಲಾಗುತ್ತಿದೆ. ಹೋಟೆಲ್‌ನಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ, ಅಡುಗೆಮನೆ ಅಥವಾ ಮನೆಯ ನಿರ್ವಹಣೆ ಮತ್ತು ಪ್ರಕೃತಿ ವಿಕೋಪ ಅಥವಾ ಅಪಘಾತದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಕೆ ಮಾಡಲಾಗುತ್ತಿದೆ.
ಚೀನಾದ ಅಧಿಕೃತ ಪತ್ರಿಕೆ ಪೀಪಲ್ಸ್ ಡೈಲಿ ವರದಿಯ ಪ್ರಕಾರ, ಈ ರೋಬೋಟ್‌ಗಳು ಇನ್ನೂ ಪ್ರಾಯೋಗಿಕ ಹಂತದಲ್ಲಿದ್ದರೂ, ಅವುಗಳ ಕಾರ್ಯಕ್ಷಮತೆ ಅಚ್ಚರಿ ಮೂಡಿಸುವಂತಿದೆ. ಚೀನಾ ತನ್ನ ರೋಬೋಟಿಕ್ಸ್ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಗುಣಮಟ್ಟಕ್ಕೆ ಏರಿಸುವ ಪ್ರಯತ್ನದಲ್ಲಿದೆ. ಅಮೆರಿಕದೊಂದಿಗೆ ತಂತ್ರಜ್ಞಾನದ ಪೈಪೋಟಿಯಲ್ಲಿ ತೊಡಗಿರುವ ಚೀನಾ, ಇಂತಹ ಪ್ರದರ್ಶನಗಳ ಮೂಲಕ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾರುತ್ತಿದೆ.
ಭವಿಷ್ಯದ ಸವಾಲುಗಳು
ಈ ಕ್ರೀಡಾಕೂಟವು ರೋಬೋಟ್‌ಗಳ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ಯಂತ್ರವು ಮಾನವನ ಓಟದ ವೇಗವನ್ನು ಮೀರಿಸಿದ ಮೇಲೆ, ಅದು ಅನಿರೀಕ್ಷಿತ ಅಡೆತಡೆಗಳನ್ನು ನಿಭಾಯಿಸಬಲ್ಲದೇ? ತಪ್ಪುಗಳನ್ನು ತಿದ್ದಿಕೊಂಡು ಸ್ವತಃ ಕೆಲಸ ಮುಂದುವರಿಸಬಲ್ಲದೇ? ಎಂಬುದು ಈಗಿನ ಮುಖ್ಯ ಪ್ರಶ್ನೆ. ಡೆನ್ನಿಸ್ ಹಾಂಗ್ ಹೇಳುವಂತೆ, ಒಂದು ರೋಬೋಟ್ ಕೇವಲ ವೇಗವಾಗಿ ಓಡಿದರೆ ಸಾಲದು, ಅದು ಸುರಕ್ಷಿತವಾಗಿ ನಿಲ್ಲಬಲ್ಲದು ಮತ್ತು ಪರಿಸರಕ್ಕೆ ಹೊಂದಿಕೊಳ್ಳಬಲ್ಲದು ಎಂಬ ಭರವಸೆ ಮೂಡಿಸಬೇಕು. ಅಮೆರಿಕ ಮತ್ತು ಚೀನಾ ನಡುವಿನ ತಂತ್ರಜ್ಞಾನ ಸಮರದಲ್ಲಿ ಈ ಸಾಧನೆಯು ಚೀನಾಕ್ಕೆ ಒಂದು ಬಲವಾದ ಅಂಕವನ್ನು ತಂದುಕೊಟ್ಟಿದೆ. ಹ್ಯೂಮನಾಯ್ಡ್ ರೋಬೋಟ್‌ಗಳ ಮಾರುಕಟ್ಟೆಯು ಮುಂದಿನ ದಶಕದಲ್ಲಿ ಶತಕೋಟಿ ಡಾಲರ್‌ಗಳಷ್ಟಾಗಲಿದೆ. ಕೈಗಾರಿಕಾ ಕ್ಷೇತ್ರದಿಂದ ಹಿಡಿದು ವೈದ್ಯಕೀಯ ರಂಗದವರೆಗೆ ಇವುಗಳ ಬಳಕೆ ಅನಿವಾರ್ಯವಾಗಲಿದೆ.

