
ಇರಾನ್ ಜೊತೆಗಿನ ಕದನ ವಿರಾಮ ಅಂತ್ಯ ಎಂದ ಟ್ರಂಪ್- ಬೃಹತ್ ವೈಮಾನಿಕ ದಾಳಿ ನಡೆಸಿದ ಅಮೆರಿಕ
ಇರಾನ್ ಜೊತೆಗಿನ ಕದನ ವಿರಾಮ ಅಂತ್ಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಹಾರ್ಮುಜ್ ಜಲಸಂಧಿ ವಿವಾದದ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕ ಭೀಕರ ದಾಳಿ ನಡೆಸಿದೆ.
ಇರಾನ್ ದೇಶದ ಜೊತೆಗಿನ ಕದನ ವಿರಾಮ ತಮಗೆ ಮುಗಿದ ಅಧ್ಯಾಯವಾಗಿದ್ದು, ಇನ್ನು ಮುಂದೆ ತಾವು ಇರಾನಿಯನ್ನರ ಜೊತೆ ಯಾವುದೇ ಮಾತುಕತೆ ನಡೆಸಲು ಬಯಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ. ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನಾಟೋ (NATO) ಶೃಂಗಸಭೆಯ ಸಂದರ್ಭದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇರಾನ್ ದೇಶವನ್ನು ದುಷ್ಟ ಎಂದು ಕರೆದಿರುವ ಟ್ರಂಪ್, ಹಾರ್ಮುಜ್ ಸಾಗುತ್ತಿದ್ದ ಮೂರು ಹಡಗುಗಳ ಮೇಲೆ ಇರಾನ್ ಸೇನೆ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಪಡೆಗಳು ಕಳೆದ ರಾತ್ರಿ ಇರಾನ್‌ನ ಅತ್ಯಂತ ಪ್ರಮುಖ ನೆಲೆಗಳ ಮೇಲೆ ಭೀಕರ ಪ್ರತಿ ದಾಳಿ ನಡೆಸಿವೆ ಎಂದು ಖಚಿತಪಡಿಸಿದ್ದಾರೆ.
"ಇರಾನಿಯನ್ನರು ಸುಳ್ಳುಗಾರರು, ವಂಚಕರು": ಟ್ರಂಪ್ ಆಕ್ರೋಶ
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇರಾನ್ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡೊನಾಲ್ಡ್ ಟ್ರಂಪ್, "ಅವರು ಸುಳ್ಳುಗಾರರು, ವಂಚಕರು ಮತ್ತು ವಿಕೃತ ಮನಸ್ಸಿನವರು. ಅವರು ತಮ್ಮದೇ ಜನರನ್ನು ಹಿಂಸಿಸುತ್ತಿದ್ದಾರೆ. ಇರಾನ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 54,000 ಜನರನ್ನು ಇದುವರೆಗೆ ಕೊಂದಿದ್ದಾರೆ. ದೇಶದಲ್ಲಿ ಯಾಕೆ ದಂಗೆ ಏಳುತ್ತಿಲ್ಲ ಎಂದು ಜನರು ಕೇಳುತ್ತಾರೆ, ಆದರೆ ಪ್ರತಿಭಟನಾಕಾರರು ಈಗ ಬದುಕಿಲ್ಲ, ಅವರನ್ನು ಕೊಲ್ಲಲಾಗಿದೆ" ಎಂದು ಗಂಭೀರ ಆರೋಪ ಮಾಡಿದರು.
ಕಳೆದ ರಾತ್ರಿಯ ದಾಳಿಯ ಬಗ್ಗೆ ವಿವರಿಸಿದ ಅವರು, "ನಾವು ಕಳೆದ ರಾತ್ರಿ ಇರಾನ್‌ನ ಅತ್ಯಂತ ಅಪಾಯಕಾರಿ ಶಕ್ತಿಗಳ ಮೇಲೆ ಅತ್ಯಂತ ಶಕ್ತಿಶಾಲಿ ಮತ್ತು ಭೀಕರವಾದ ದಾಳಿಯನ್ನು ನಡೆಸಿದ್ದೇವೆ. ಅವರ ಆಡಳಿತ ವ್ಯವಸ್ಥೆಯಲ್ಲಿ ಏನೋ ದೋಷವಿದೆ" ಎಂದರು.
ಇರಾನ್ ದೇಶವನ್ನು ಸಂಪೂರ್ಣವಾಗಿ ಪರಮಾಣುಮುಕ್ತಗೊಳಿಸುವುದೇ ಈ ಸಂಘರ್ಷದ ಏಕೈಕ ಉದ್ದೇಶವಾಗಿದ್ದು, ಅದನ್ನು ಅಮೆರಿಕ ಮಾಡಿಯೇ ತೀರುತ್ತದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ. "ನಾವು ಕಳೆದ ರಾತ್ರಿ ಇರಾನ್‌ಗೆ ಭಾರಿ ತಿರುಗೇಟು ನೀಡಿದ್ದೇವೆ. ನೀವು ಪ್ರತಿ ಬಾರಿ ದಾಳಿ ಮಾಡಿದಾಗಲೂ, ನಾವು ಅದಕ್ಕಿಂತ ದುಪ್ಪಟ್ಟು ಪ್ರತಿಯುತ್ತರ ನೀಡುತ್ತೇವೆ ಎಂದು ನಾನು ಅವರಿಗೆ ಮೊದಲೇ ಎಚ್ಚರಿಸಿದ್ದೆ. ಅವರು ಅತ್ಯಂತ ಕೊಳಕು ಆಟಗಾರರು, ಹಾಗಾಗಿ ಅವರು ನನ್ನನ್ನೂ ಒಳಗೊಂಡಂತೆ ಎಲ್ಲರನ್ನೂ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಾರೆ. ನಮಗೆ ಅವರು ಇಷ್ಟವಿಲ್ಲ. ಅವರು ದುಷ್ಟರು” ಎಂದಿದ್ದಾರೆ
ಕಳೆದ ರಾತ್ರಿ ಅಮೆರಿಕ ಪಡೆಗಳು ನಡೆಸಿದ ಈ ಭೀಕರ ದಾಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

